ಕರಾವಳಿ

‘ಸರ್ವಧರ್ಮ ಸದ್ಭಾವನೆ ಸಂಗೋಷ್ಠಿ’ ಖಂಡಿಸಿ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ.

Pinterest LinkedIn Tumblr

ಮಂಗಳೂರು, ಜನವರಿ.19: ಮುಸ್ಲಿಂ ರಾಷ್ಟ್ರೀಯ ಮಂಚ್ ಎಂಬ ಆರೆಸ್ಸೆಸ್ ನ ಅಂಗ ಸಂಸ್ಥೆಯು ‘ರ‍್ಯಾಂಕ್ಸ್’ ಎಂಬ ಸಂಘಟನೆಯ ಹೆಸರಿನಲ್ಲಿ ನಿವೃತ್ತ ಡಿಜಿಪಿ ಎಂ.ಎನ್. ಕೃಷ್ಣಮೂರ್ತಿಯ ಉಸ್ತುವಾರಿಯಲ್ಲಿ ಜ.9ರಂದು ನಗರದ ಖಾಸಗಿ ಹೋಟೆಲ್ ಸಭಾಂಗಣದಲ್ಲಿ ನಡೆದ ‘ಸರ್ವಧರ್ಮ ಸದ್ಭಾವನೆ ಸಂಗೋಷ್ಠಿ’ ಎಂಬ ಕಾರ್ಯಕ್ರಮಕ್ಕೆ ಮಂಗಳೂರಿನ ಪೊಲೀಸ್ ಇಲಾಖೆ ಸಂಪೂರ್ಣ ಸಹಕಾರ ನೀಡಿದ್ದನ್ನು ಖಂಡಿಸಿ ದ.ಕ.ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟವು ಬುಧವಾರ ದ.ಕ.ಜಿಲ್ಲಾಧಿಕಾರಿಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿತು.

ಇತ್ತೀಚೆಗೆ ನಡೆದ ಆ ಕಾರ್ಯಕ್ರಮದಲ್ಲಿ ಮಕ್ಕಾ ಮಸೀದಿ, ಅಜ್ಮೀರ್ ದರ್ಗಾ ಬಾಂಬ್ ಸ್ಪೋಟದ ಆರೋಪಿ ಮತ್ತು ಆರೆಸ್ಸೆಸ್ಸ್ನ ಮಾರ್ಗದರ್ಶಕ ಇಂದ್ರೇಶ್ ಕುಮಾರ್ ದಿಕ್ಸೂಚನಾ ಭಾಷಣ ಮಾಡಿದ್ದಾರೆ. ಮುಸ್ಲಿಂ ರಾಷ್ಟ್ರೀಯ ಮಂಚ್ (ಎಂಆರ್‌ಎಂ) ಎಂಬ ಆರೆಸ್ಸೆಸ್ಸ್ನ ಅಂಗ ಸಂಸ್ಥೆಯು ‘ರ‍್ಯಾಂಕ್ಸ್’ ಎಂಬ ಅಪರಿಚಿತ ಸಂಘಟನೆಯ ಹೆಸರಿನಲ್ಲಿ ಈ ಕಾರ್ಯಕ್ರಮ ನಡೆಸಿರುವುದು ಇದೀಗ ಬಹಿರಂಗವಾಗಿದೆ.

ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಅಧಿಕಾರಿಗಳು ಮಂಗಳೂರಿನ ಮುಸ್ಲಿಂ ಧರ್ಮಗುರುಗಳು ಹಾಗು ಮುಸ್ಲಿಂ ಧಾರ್ಮಿಕ, ಸಾಮಾಜಿಕ ನಾಯಕರನ್ನು ಆಹ್ವಾನಿಸಿದ್ದಾರೆ.ಅಲ್ಲದೆ ಕೆಲವು ಪೊಲೀಸರು ಅಂದು ಹೋಟೆಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸ್ವಯಂ ಸೇವಕರಾಗಿ ಕಾರ್ಯನಿರ್ವಹಿಸಿದ್ದಾರೆ.

ಹಿರಿಯ ಪೊಲೀಸ್ ಅಧಿಕಾರಿಗಳೇ ಮುಸ್ಲಿಂ ನಾಯಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿರುವುದು ಮತ್ತು ಆಮಂತ್ರಣ ಪತ್ರಿಕೆಯನ್ನು ವಿತಿರಿಸಿರುವುದು ಗಂಭೀರ ವಿಚಾರವಾಗಿದೆ. ಒಟ್ಟಿನಲ್ಲಿ ಪೊಲೀಸ್ ಇಲಾಖೆ ಮತ್ತು ಸಂಘ ಪರಿವಾರ ಅಪವಿತ್ರ ಮೈತ್ರಿ ಮಾಡಿಕೊಂಡಿರುವುದು ಸ್ಪಷ್ಟವಾಗಿರುವುದರಿಂದ ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ನ್ಯಾಯಾಂಗ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಎಂಆರ್‌ಎಂ ಮುಸ್ಲಿಮರ ಅಭಿವೃದ್ಧಿಗೆ ಹುಟ್ಟಿಕೊಂಡ ಸಂಘಟನೆಯಲ್ಲ. ಗುಜರಾತ್ ಹತ್ಯಾಕಾಂಡ ನಡೆದಾಗ, ಸಾಚಾರ್-ರಂಗನಾಥ್ ವರದಿ ಬಂದಾಗ ಎಲ್ಲಿತ್ತು? ಯಾವ ಪಾತ್ರ ವಹಿಸಿತ್ತು ಎಂದು ಪ್ರಶ್ನಿಸಿದ ಸನ್ಮಾರ್ಗ ವಾರಪತ್ರಿಕೆಯ ಸಂಪಾದಕ ಎ.ಕೆ.ಕುಕ್ಕಿಲ, ಪೊಲೀಸ್ ಇಲಾಖೆ ಹಿಂದು ಅಥವಾ ಮುಸ್ಲಿಮರ ಪರವಹಿಸದೆ ಸಂವಿಧಾನಬದ್ಧವಾಗಿ ಕಾರ್ಯನಿರ್ವಹಿಸಲಿ ಎಂದರು.

ಮುಸ್ಲಿಂ ರಾಷ್ಟ್ರೀಯ ಮಂಚ್ ಬಗ್ಗೆ ಮುಸ್ಲಿಮರು ತಿಳಿದುಕೊಳ್ಳುವ ಅಗತ್ಯವಿದೆ. ಅದು ಮುಸ್ಲಿಮರ ಹಿತಕ್ಕಾಗಿ ಹುಟ್ಟಿದ ಸಂಘಟನೆಯಲ್ಲ. ಅದರಲ್ಲಿ ಇಮಾಮರು, ನಾಯಕರು ಎಂದು ಹೇಳಿಕೊಳ್ಳುವವರು ಯಾರೂ ಮುಸ್ಲಿಮರ ಇಮಾಮರಲ್ಲ, ನಾಯಕರೂ ಅಲ್ಲ. ಇದೀಗ ಮುಸ್ಲಿಂ ಮಹಿಳೆಯರಲ್ಲಿ ಒಡಕು ಮೂಡಿಸಲು ‘ಮುಸ್ಲಿಂ ಮಹಿಳಾ ಫೌಂಡೇಶನ್’ ಎಂಬ ಸಂಘಟನೆಯನ್ನು ಹುಟ್ಟು ಹಾಕಿದ್ದಾರೆ. ಈ ಬಗ್ಗೆ ಜಾಗರೂಕರಾಗಬೇಕಾದ ಅಗತ್ಯವಿದೆ ಎಂದು ಪಿಎಫ್‌ಐ ಬಜ್ಪೆ ವಲಯ ಅಧ್ಯಕ್ಷ ಎ.ಕೆ.ಅಶ್ರಫ್ ಹೇಳಿದರು.

ಸಣ್ಣಪುಟ್ಟ ವಿಚಾರಕ್ಕೂ ಮಾಹಿತಿ ಕಲೆ ಹಾಕುವ ಪೊಲೀಸ್ ಇಲಾಖೆಯು ಈ ಕಾರ್ಯಕ್ರಮದ ಬಗ್ಗೆ ಯಾವುದೇ ಮಾಹಿತಿ ಕಲೆ ಹಾಕದಿರುವುದು ಆಶ್ಚರ್ಯಕರ. ಹಾಗಿದ್ದರೆ ನಗರದ ಪೊಲೀಸ್ ಗುಪ್ತಚರ ಏನು ಮಾಡುತ್ತಿದೆ?. ಸಂಘಪರಿವಾರಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆಯೇ? ಎಂದು ಮಂಗಳೂರು ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಅಲಿ ಹಸನ್ ಪ್ರಶ್ನಿಸಿದರು.

ವೇದಿಕೆಯಲ್ಲಿ ಮುಸ್ಲಿಂ ಐಕ್ಯತಾ ವೇದಿಕೆಯ ಅಧ್ಯಕ್ಷ ಮುಸ್ತಫಾ ಕೆಂಪಿ, ಎಸ್ ಡಿಪಿಐ ಮುಖಂಡ ಜಲೀಲ್ ಕೃಷ್ಣಾಪುರ ಉಪಸ್ಥಿತರಿದ್ದರು.
ಪ್ರತಿಭಟನಾ ಸಭೆಯ ಅಧ್ಯಕ್ಷತೆಯನ್ನು ಕಾರ್ಯಕ್ರಮದ ಸಂಚಾಲಕ ಹಾಗು ನ್ಯಾಯವಾದಿ ಸಾದುದ್ದೀನ್ ಸಾಲಿ ವಹಿಸಿದ್ದರು.
ಮುಸ್ಲಿಂ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಸ್ವಾಗತಿಸಿ ಪ್ರಾಸ್ತಾವಿಸಿದರು.

Comments are closed.