ಕರಾವಳಿ

ಸಿಸಿಬಿ ಕಾರ್ಯಾಚರಣೆ: ರೂ.5.5 ಲಕ್ಷ ಮೌಲ್ಯದ ಕೋಕೆನ್‍ನೊಂದಿಗೆ ಆಫ್ರಿಕಾ ವ್ಯಕ್ತಿ ಬಂಧನ

Pinterest LinkedIn Tumblr

ಮಂಗಳೂರು, ಜನವರಿ.17 : ನಗರದಲ್ಲಿ ಬೆಲೆಬಾಳುವ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಯಿಂದ ರೂ.5.5 ಲಕ್ಷ ಮೌಲ್ಯದ ಕೋಕೆನ್, 2 ಮೊಬೈಲ್ ಫೋನುಗಳು ಹಾಗೂ 3,300 ರೂ. ಹೀಗೆ ಒಟ್ಟು ರೂ. 5,55,300 ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯನ್ನು ಆಫ್ರಿಕಾದ ಘಾನಾ ಪ್ರಜೆಯಾದ ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋಫರ್ (37) (Chigozie Francis Christoper, Age(37), S/o Christoper Chigozie, R/o No. 20, Somorin, Lagos, GBAGADA, Ghana) ಎಂದು ಗುರುತಿಸಲಾಗಿದೆ.

ಆರೋಪಿ ಗೋವಾ ಮೂಲಕ ಮಂಗಳೂರು ನಗರಕ್ಕೆ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡಲು ಬಂದು ಗ್ರಾಹಕರನ್ನು ಹುಡುಕಾಡುತ್ತಿದ್ದ.ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಂಗಳೂರು ನಗರದ ಮಲ್ಲಿಕಟ್ಟೆ ಲೋಬೋ ಲೇನ್ ರಸ್ತೆಯಲ್ಲಿ ಮಾದಕ ವಸ್ತುವಾದ ಕೋಕೆನ್ ವಶಪಡಿಸಿಕೊಂಡಿದ್ದಾರೆ.

ದಿನಾಂಕ: 16-01-2017 ರಂದು ಗೋವಾ ಮೂಲಕ ಮಂಗಳೂರು ನಗರಕ್ಕೆ ಮಾದಕ ವಸ್ತುವಾದ ಕೋಕೆನ್ ನ್ನು ಮಾರಾಟ ಮಾಡಲು ಘಾನಾ ದೇಶದ ಪ್ರಜೆಯೊಬ್ಬನು ಬಂದು ಮಂಗಳೂರು ನಗರದಲ್ಲಿ ಗ್ರಾಹಕರನ್ನು ಹುಡುಕಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಂಗಳೂರು ನಗರದ ಮಲ್ಲಿಕಟ್ಟೆ ಲೋಬೋ ಲೇನ್ ರಸ್ತೆಯಲ್ಲಿ ಮಾದಕ ವಸ್ತುವಾದ ಕೋಕೇನ್ ನ್ನು ಅಕ್ರಮವಾಗಿ ತನ್ನ ವಶದಲ್ಲಿಸಿಕೊಂಡಿದ್ದ ಆರೋಪಿ ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋಫರ್ ನ್ನು ವಶಕ್ಕೆ ಪಡೆದುಕೊಂಡು ಆತನಿಂದ ಸುಮಾರು 5,50,000/- ಬೆಲೆಬಾಳುವ ಮಾದಕ ವಸ್ತುವಾದ ಕೋಕೆನ್ ನ್ನು ಸ್ವಾಧೀನಪಡಿಸಿಕೊಂಡಿರುತ್ತಾರೆ.

ಈತನು ಸುಮಾರು 2 ವರ್ಷದ ಹಿಂದೆ ಭಾರತಕ್ಕೆ ಬಿಸಿನೆಸ್ ವೀಸಾದಲ್ಲಿ ಬಂದವನು ನಂತರ ಘಾನಾ ಕ್ಕೆ ವಾಪಾಸು ಹೋಗದೇ ಅನಧಿಕೃತವಾಗಿ ಭಾರತದಲ್ಲಿ ವಾಸ್ತವ್ಯವಿದ್ದುಕೊಂಡು ಈ ರೀತಿ ಕೊಕೇನ್ ನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವುದಾಗಿದೆ. ಈತನ ವಶದಿಂದ ಕೊಕೇನ್, ಮೊಬೈಲ್ ಫೋನುಗಳು-2, ಹಾಗೂ ನಗದು ರೂ. 3,300/- ಹೀಗೆ ಒಟ್ಟು ರೂ. 5,55,300/- ಮೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ.

ಈಗಾಗಲೆ ಈ ಹಿಂದೆ 2-3 ಬಾರಿ ಈತನು ಮಂಗಳೂರಿಗೆ ಬಂದು ಹಲವಾರು ಮಂದಿಗೆ ಕೊಕೇನ್ ನ್ನು ಮಾರಾಟ ಮಾಡಿದ ಬಗ್ಗೆ ತಿಳಿದುಬಂದಿರುತ್ತದೆ. ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಪೊಲೀಸ್ ಕಮೀಷನರ್ ಎಂ ಚಂದ್ರಶೇಖರ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ ಕೆ.ಎಂ. ಶಾಂತರಾಜು, ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ ಡಾ: ಸಂಜೀವ್ ಎಂ. ಪಾಟೀಲ್ ರವರ ಮಾರ್ಗದರ್ಶನದಲ್ಲಿ ನಡೆದ ಪತ್ತೆ ಕಾರ್ಯಾಚರಣೆಯಲ್ಲಿ ಸಿಸಿಬಿ ಘಟಕದ ಪಿ.ಎಸ್.ಐ ಶ್ಯಾಮ್ ಸುಂದರ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

Comments are closed.