ಕರಾವಳಿ

ಜ.17ರಂದು ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನಕ್ಕೆ ಶಿಲಾನ್ಯಾಸ

Pinterest LinkedIn Tumblr

ಮಂಗಳೂರು ಜನವರಿ 15 : ಜಿಲ್ಲಾ ಕೇಂದ್ರಸ್ಥಾನ ಮಂಗಳೂರಿನಲ್ಲಿ ಜಿಲ್ಲಾ ಮಟ್ಟದ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜ.17ರಂದು ಚಾಲನೆ ದೊರಕಲಿದೆ.

ನಗರದ ದೇರೆಬೈಲು ಗ್ರಾಮದ ಉರ್ವಾಸ್ಟೋರ್‍ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ರಾಜ್ಯದ ಸಮಾಜ ಕಲ್ಯಾಣ ಸಚಿವ ಆಂಜನೇಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಆಹಾರ ಸಚಿವ ಯು.ಟಿ. ಖಾದರ್ ಮತ್ತಿತರರು ಉಪಸ್ಥಿ ತರಿರಲಿದ್ದು, ಶಾಸಕ ಜೆ.ಆರ್. ಲೋಬೋ ಅಧ್ಯಕ್ಷತೆ ವಹಿಸಲಿದ್ದಾರೆ.

ಜಿಲ್ಲಾ ಕೇಂದ್ರ ಮಂಗಳೂರಿನಲ್ಲಿ ಅಂಬೇಡ್ಕರ್ ಭವನ ನಿರ್ಮಿಸಬೇಕೆಂದು ಜಿಲ್ಲೆಯ ದಲಿತರ ಸುದೀರ್ಘ ಕಾಲದ ಬೇಡಿಕೆಯಾಗಿತ್ತು. ಈ ಬಗ್ಗೆ ಹಲವಾರು ಸಭೆಗಳು ನಡೆದಿವೆ. ಇದಲ್ಲದೇ, ಬೆಂಗಳೂರಿನಲ್ಲಿಯೂ ಉನ್ನತ ಮಟ್ಟದ ಸಭೆ ನಡೆದು, ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಇದ್ದ ಎಲ್ಲಾ ತೊಡಕುಗಳನ್ನು ನಿವಾರಿಸಲಾಗಿದೆ.

ದೇರೆಬೈಲು ಗ್ರಾಮದ ಸರ್ವೇ ನಂಬ್ರ 178-1ಪಿ4ರಲ್ಲಿ 1.40 ಎಕರೆ ಮತ್ತು ಸರ್ವೇ ನಂಬ್ರ 178-1ಪಿ2ರಲ್ಲಿ 20 ಸೆಂಟ್ಸ್ ಸೇರಿದಂತೆ ಒಟ್ಟು 1.61 ಎಕರೆ ಜಾಗವನ್ನು ಅಂಬೇಡ್ಕರ್ ಭವನಕ್ಕೆ ಕಾದಿರಿಸಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವರ ನಿದೇಶನದಂತೆ ಒಟ್ಟು 12 ಕೋಟಿ ರೂ. ವೆಚ್ಚದಲ್ಲಿ ಅಂದಾಜು ಪಟ್ಟಿ ಮತ್ತು ವಿವರವಾದ ವರದಿಯನ್ನು ಕರ್ನಾಟಕ ಗೃಹಮಂಡಳಿಯಿಂದ ಸಲ್ಲಿಸಲಾಗಿದೆ.

ರಾಜ್ಯ ಸರಕಾರವು ಈ ಅಂದಾಜುಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಡಾ. ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಕರ್ನಾಟಕ ಗೃಹ ಮಂಡಳಿಗೆ ರೂ. 4 ಕೋಟಿ ಮುಂಗಡ ಅನುದಾನವನ್ನು ದ.ಕ. ಜಿಲ್ಲಾಧಿಕಾರಿಯವರು ಬಿಡುಗಡೆ ಮಾಡಿರುತ್ತಾರೆ. ಒಟ್ಟು 18 ತಿಂಗಳಲ್ಲಿ ಅಂಬೇಡ್ಕರ್ ಭವನ ಕಾಮಗಾರಿಯನ್ನು ಮುಗಿಸುವ ಗುರಿಯನ್ನಿಟ್ಟುಕೊಳ್ಳಲಾಗಿದೆ.

Comments are closed.