ಕರಾವಳಿ

ಮೋದಿ ಕನಸು ನನಸಾಗಿಸಲು ಹೊರಟ ಕೋಟತಟ್ಟು ಗ್ರಾ.ಪಂ.; ಇನ್ಮುಂದೆ ಇಲ್ಲಿ ಕ್ಯಾಶ್ ಲೆಸ್ ವ್ಯವಹಾರ…!

Pinterest LinkedIn Tumblr

ಕಪ್ಪು ಹಣ ಮುಕ್ತ ರಾಷ್ಟ್ರವಾಗಲಿ- ಸಚಿವ ರಮೇಶ್ ಕುಮಾರ್

ಉಡುಪಿ: ದೇಶದ ಅಭಿವೃದ್ದಿಗೆ ಮಾರಕವಾಗಿರುವ ಕಪ್ಪು ಹಣದ ಹಾವಳಿಯಿಂದ ದೇಶ ಮುಕ್ತವಾಗಬೇಕಿದ್ದು, ಇದಕ್ಕಾಗಿ ಪ್ರತಿಯೊಬ್ಬ ಪ್ರಜೆಗಳ ಸಹಕಾರ ಅಗತ್ಯವಿದ್ದು, ಪ್ರತಿಯೊಬ್ಬರೂ ಕಪ್ಪು ಹಣ ಮುಕ್ತ ದೇಶವಾಗಿಸಲು ಪಣ ತೊಡಬೇಕು ಎಂದು ರಾಜ್ಯದ ಆರೋಗ್ಯ ಸಚಿವ ರಮೇಶ್ ಕುಮಾರ್ ತಿಳಿಸಿದ್ದಾರೆ. ಭಾನುವಾರ ಕೋಟ ಶಿವರಾಮ ಥೀಂ ಪಾಕ್ ನಲ್ಲಿ , ಕೋಟತಟ್ಟು ಗ್ರಾಮ ಪಂಚಾಯತ್ ನ ನಗದು ರಹಿತ- ಜನರ ಹಿತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕಪ್ಪುಹಣದ ಹಾವಳಿಯಿಂದ ಬಡವರ ದುಡಿಮೆಗೆ ಬೆಲೆ ಇಲ್ಲದಂತಾಗಿದೆ, ಕಪ್ಪು ಹಣ ದೇಶದ ಅಭಿವೃದ್ದಿಗೆ ಶತ್ರುವಾಗಿದೆ, ಬಡವರ ಶ್ರಮದ ದುಡಿಮೆಯನ್ನು ಇದು ಅವಮಾನಿಸುತ್ತಿದೆ, ಭ್ರಷ್ಟಾಚಾರದ ಬೆಳೆವಣಿಗೆಗೆ ಕಾರಣವಾಗಿರುವ ಈ ಹಾವಳಿಗೆ ಕಡಿವಾಣ ಹಾಕಲು ಎಲ್ಲರೂ ಪಕ್ಷ ಭೇದ ಮರೆತು , ದೇಶದ ಹಿತವನ್ನು ಮುಖ್ಯವಾಗಿರಿಸಿಕೊಂಡು ಕಾರ್ಯ ನಿರ್ವಹಿಸಬೇಕಿದೆ ಎಂದು ರಮೇಶ್ ಕುಮಾರ್ ತಿಳಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ನಲ್ಲಿ ಜಾರಿಗೆ ತಂದಿರುವ ನಗದು ರಹಿತ ವ್ಯವಹಾರ ಪಾರದರ್ಶಕ ಆಡಳಿತಕ್ಕೆ ನಿದರ್ಶನವಾಗಿದ್ದು, ಇತರೆ ಗ್ರಾಮಗಳಿಗೆ ಮಾದರಿಯಾಗಿದೆ, ರಾಜ್ಯದ ಗ್ರಾಮೀಣಾಭಿವೃದ್ದಿ ಸಚಿವರೊಂದಿಗೆ ಚರ್ಚಿಸಿ, ಈ ಮಾದರಿಯನ್ನು ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಅಳವಡಿಸಿಕೊಳ್ಳುವ ಕುರಿತಂತೆ ಹಿರಿಯ ಅಧಿಕಾರಿಗಳ ತಂಡವನ್ನು ಇಲ್ಲಿಗೆ ಕಳುಹಿಸಿ, ವರದಿ ಪಡೆದು ರಾಜ್ಯದ ಎಲ್ಲಾ ಜಿಲ್ಲೆಗಳ ಕನಿಷ್ಠ 2 ಗ್ರಾಮ ಪಂಚಾಯತ್ ಗಳಲ್ಲಾದರೂ ನಗದು ರಹಿತ ವ್ಯವಹಾರವನ್ನು ಶೀಘ್ರದಲ್ಲಿ ಪ್ರಾರಂಭಿಸಲಾಗುವುದು , ನಗದುರಹಿತ ವ್ಯವಹಾರದಿಂದ ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಸಾರ್ವಜನಿಕ ಹಣದ ದುರುಪಯೋಗ ನಿಯಂತ್ರಣವಾಗಲಿದೆ ಎಂದು ತಿಳಿಸಿದರು. ದೇಶದ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳು ಜಾರಿಗೆ ಬಂದು, ಅರ್ಹ ಪ್ರಾಮಾಣಿಕ ಅಭ್ಯರ್ಥಿಗಳು ಆಯ್ಕೆಯಾಗಬೇಕು ಎಂದು ರಮೇಶ್ ಕುಮಾರ್ ತಿಳಿಸಿದರು.

ಪ್ರಾಸ್ತಾವಿಕವಾಗಿ ಮತನಾಡಿದ ವಿಧಾನ ಪರಿಷತ್ ಸದಸ್ಯ ಕೋಟಾ ಶ್ರೀನಿವಾಸ ಪೂಜರಿ, ಕೋಟತಟ್ಟು ಗ್ರಾಮ ಪಂಚಾಯತ್ ನ 1032 ಕುಟುಂಬಗಳು ಪಂಚಾಯತ್ ಗೆ ಸಂಬಂದಿಸಿದ ಎಲ್ಲಾ ಶುಲ್ಕಗಳನ್ನು ನಗದು ರಹಿತವಾಗಿಯೇ ಪಾವತಿಸಲು ಅನುಕೂಲವಾಗುವಂತೆ ಎಲ್ಲಾ ಕುಟುಂಬಗಳಿಗೂ ಬ್ಯಾಂಕ್ ಖಾತೆ ತೆರೆಸಿ, ಡೆಬಿಟ್ ಕಾಡ್ ಗಳನ್ನು ವಿತರಿಸಲಾಗಿದೆ , ಇಂದಿನಿಂದ ಪಂಚಾಯತ್ ನ ಕಟ್ಟಡ ಲೈಸೆನ್ಸ್, ಮನೆ ತೆರಿಗೆ , ನೀರಿನ ತೆರಿಗೆ ಸೇರಿದಂತೆ ಎಲ್ಲಾ ವ್ಯವಹಾರಗಳು ನಗದು ರಹಿತವಾಗಿ ನಡೆಯಲಿವೆ ಎಂದು ತಿಳಿಸಿದರು.

ಕೋಟತಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಹೆಚ್.ಪ್ರಮೋದ್ ಹಂದೆ ಅಧ್ಯಕ್ಷತೆ ವಹಿಸಿ, ಸ್ವಾಗತಿಸಿದರು. ಉಡುಪಿ ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು, ತಾ.ಪಂ. ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್, ಜಿ.ಪಂ. ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರಿಯಾಂಕ ಮೇರಿ ಫ್ರಾನ್ಸಿಸ್, ಉಡುಪಿ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿ ಶೇಷಪ್ಪ, ಕುಂದಾಪುರ ತಾ.ಪಂ.ಕಾರ್ಯ ನಿರ್ವಹಣಾಧಿಕಾರಿ ಚೆನ್ನಪ್ಪ ಮ್ಯೊಲಿ, ಲೀಡ್ ಬ್ಯಾಂಕ್ ಮೆನೇಜರ್ ಫ್ರಾನ್ಸಿಸ್, ಕೋಟತಟ್ಟು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಲೋಕೇಶ್ ಶೆಟ್ಟಿ, ಡಾ.ಕಾರಂತ ಹುಟ್ಟೂರ ಪ್ರತಿಷ್ಠಾನ ಸಮಿತಿ ಗೌರವಾಧ್ಯಕ್ಷ ಅನಂದ್ ಸಿ ಕುಂದರ್,ಪಂಚಾಯತ್ ತಜ್ಞ ಜನಾರ್ಧನ ಮರವಂತೆ ಮತ್ತಿತರರು ಉಪಸ್ಥಿತರಿದ್ದರು. ಕೋಟತಟ್ಟು ಗ್ರಾಮ ಪಂಚಾಯತ್ ಪಿ.ಡಿ.ಓ ಸತೀಶ್ ನಿರೂಪಿಸಿದರು.

————

-ಯೋಗೀಶ್ ಕುಂಭಾಸಿ

Comments are closed.