ಕರಾವಳಿ

ಶಶಿಧರ ಬೆಳ್ಳಾಯರು ಅವರ ‘ಪಚ್ಚೆ ಹಾದಿ’ ಕೃತಿ ಲೋಕಾರ್ಪಣೆ

Pinterest LinkedIn Tumblr

ಮಂಗಳೂರು.ಜನವರಿ.10: ನಮ್ಮ ಸಂಸ್ಕೃತಿ, ಜನಜೀವನ, ಇಲ್ಲಿನ ಪ್ರಕೃತಿ ಎಲ್ಲವು ಕೂಡಾ ಆನಂದದಾಯಿ ಮತ್ತು ಉಲ್ಲಾಸ ನೀಡುವಂಥದ್ದು. ಚಾರಣವು ಸಾಹಸಕ್ಕೆ ತೊಡಗಲು ಪ್ರೇರೇಪಿಸುವ ಜೊತೆಗೆ ಮನಸ್ಸಿಗೆ ಖುಷಿ ನೀಡುವ ಯಾನ ಎಂದು ಉದ್ಯಮಿ ಹಾಗೂ ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗುರ್ಮೆ ಸುರೇಶ್ ಶೆಟ್ಟಿ ಅವರು ತಮ್ಮ ಅಭಿಮತ ವ್ಯಕ್ತಪಡಿಸಿದರು.

ಸೋಮವಾರ ಸಂಜೆ ನಗರದ ಪುರಭವನ ಮುಂಭಾಗದ ಗಾಂಧಿ ಪಾರ್ಕ್ ನಲ್ಲಿ ಪತ್ರಕರ್ತ ಶಶಿಧರ ಬೆಳ್ಳಾಯರು ಅವರು ಬರೆದಿರುವ ‘ಪಚ್ಚೆ ಹಾದಿ’ ಕೃತಿ ಲೋಕಾರ್ಪಣೆಗೊಳಿಸಿ ಅವರು ಮಾತಾಡುತ್ತಿದ್ದರು.

ಭಾರತ ದೇಶ ಪ್ರೇಕ್ಷಣೀಯ ಸ್ಥಳಗಳಿಗೆ ಹೆಸರುವಾಸಿಯಾದುದು. ಅದರಲ್ಲೂ ಕರ್ನಾಟಕದಲ್ಲಿ ನೂರಾರು ಪ್ರವಾಸಿ ತಾಣಗಳಿವೆ. ಇವುಗಳಲ್ಲಿ ಲೇಖಕರು ಸ್ವತ: ಚಾರಣ ಕೈಗೊಂಡು ತಮ್ಮ ಅನುಭವವನ್ನು ಧಾರೆಯೆರೆದಿದ್ದಾರೆ. ಇಂಥ ಕೃತಿಗಳು ಮತ್ತಷ್ಟು ಸಮಾಜಕ್ಕೆ ಅರ್ಪಣೆಯಾಗಲಿ ಎಂದು ಇದೇ ಸಂದರ್ಭದಲ್ಲಿ ಶುಭ ಹಾರೈಸಿದರು.

ಕಸಾಪ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಮಾತನಾಡಿ, ನನ್ನ ಇಷ್ಟು ಸುದೀರ್ಘ ವರ್ಷಗಳ ಅವಧಿಯಲ್ಲಿ ಸಾವಿರಾರು ಕೃತಿ ಬಿಡುಗಡೆ ಕಾರ್ಯಕ್ರಮವನ್ನು ಕಂಡಿದ್ದೇನೆ. ಆದರೆ ಗಾಂಧಿ ಪಾರ್ಕ್ ನ ಈ ಪಚ್ಚೆ ಹಾದಿಯಲ್ಲಿ ಈ ರೀತಿ ಕೃತಿ ಬಿಡುಗಡೆ ಸಮಾರಂಭ ಜರುಗಿಲ್ಲ, ಈ ಮೂಲಕ ಹೊಸ ಇತಿಹಾಸವೊಂದಕ್ಕೆ ಲೇಖಕರು ಮುನ್ನುಡಿ ಬರೆದಿದ್ದಾರೆ. ಸಾಹಿತ್ಯ ಸೇವೆಯಲ್ಲಿ ನಿತ್ಯ, ನಿರಂತರ ತೊಡಗಿಕೊಳ್ಳಲು ಅವರಿಗೆ ನಮ್ಮ-ನಿಮ್ಮೆಲ್ಲರ ಹಾರೈಕೆಯಿರಲಿ ಎಂದರು.

ಕನ್ನಡಕಟ್ಟೆ ಸ್ಥಾಪಕಾಧ್ಯಕ್ಷ ಡಾ.ಅಣ್ಣಯ್ಯ ಕುಲಾಲ್ ಉಳ್ತೂರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪತ್ರಕರ್ತರಾಗಿ ಲೇಖಕರು ಸಮಾಜಕ್ಕೆ ಪಚ್ಚೆಹಾದಿಯ ಮೂಲಕ ಉತ್ತಮ ಕೊಡುಗೆಯನ್ನು ನೀಡಿದ್ದಾರೆ. ಚಾರಣದ ಆಸಕ್ತಿ ನನಗೂ ಇದ್ದು ನನ್ನಂಥ ಅನೇಕರಿಗೆ ಈ ಕೃತಿ ಉಪಯುಕ್ತವಾದುದು. ಇದರಿಂದ ಚಾರಣದ ಸಮಯ ಎಂಥ ಮುನ್ನೆಚ್ಚರಿಕೆ ಅಗತ್ಯ, ಎಲ್ಲಿ ಯಾವ ಕಾಲದಲ್ಲಿ ಚಾರಣ ಸೂಕ್ತವಾದುದು ಎಂಬುದನ್ನು ತಿಳಿಯಲು ಸಾಧ್ಯ. ಲೇಖಕರ ಶ್ರಮ ಖಂಡಿತಾ ವ್ಯರ್ಥವಾಗಲಾರದು ಎಂದರು.

ಜಯಕಿರಣ ಪತ್ರಿಕೆಯ ಮಾಲಕ ಪ್ರಕಾಶ್ ಪಾಂಡೇಶ್ವರ ಅವರು ಮಾತನಾಡಿ ಲೇಖಕರು ಹಿಂದಿನಿಂದಲೂ ಸಾಹಸ ಪ್ರವೃತ್ತಿಯನ್ನು ಮೈಗೂಡಿಸಿಕೊಂಡವರು. ಅವರ ಸಾಹಸ ಕಾರ್ಯಕ್ಕೆ ಸ್ಫೂರ್ತಿಯಾಗಿ ಪಚ್ಚೆ ಹಾದಿ ಬಿಡುಗಡೆಗೊಂಡಿದೆ. ಇನ್ನಷ್ಟು ಇಂಥ ಕೃತಿಗಳು ಬಿಡುಗಡೆಗೊಂಡು ಸಾಹಿತ್ಯಕೃಷಿಯಲ್ಲಿ ಉತ್ಸಾಹದಿಂದ ತೊಡಗಿಕೊಳ್ಳಲಿ ಎಂದು ಶುಭ ಹಾರೈಸಿದರು.

ದ.ಕ. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪದ್ಮಾಕರ ಭಟ್, ಸಂಜೆವಾಣಿ ವ್ಯವಸ್ಥಾಪಕ ವಿಜಯ ರಾವ್, ಹೊಸಸಂಜೆ ಪ್ರಕಾಶನದ ಆರ್.ದೇವರಾಯ ಪ್ರಭು, ಲೇಖಕ ಶಶಿಧರ ಬೆಳ್ಳಾಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪತ್ರಕರ್ತ ನರೇಂದ್ರ ಕೆರೆಕಾಡು ಕಾರ್ಯಕ್ರಮ ನಿರೂಪಿಸಿದರು.

Comments are closed.