ಕರಾವಳಿ

ಹೊರೆಕಾಣಿಕೆ ಮೆರವಣಿಗೆಯಲ್ಲಿ ಪಾಲ್ಗೊಂಡವರಿಗೆ ಪಾನೀಯ ವಿತರಣೆ : ಸೌಹಾರ್ದತೆ ಮೆರೆದ ಉಳ್ಳಾಲದ ಮುಸ್ಲಿಮರು

Pinterest LinkedIn Tumblr

ಉಳ್ಳಾಲ, ಜ.7: ಉಳಿಯ ಶ್ರೀ ಉಳ್ಳಾಲ್ತಿ ಧರ್ಮ ಅರಸರ ಕ್ಷೇತ್ರದ ದೇವಸ್ಥಾನದಲ್ಲಿ ನಡೆಯಲಿರುವ ಬ್ರಹ್ಮಕಲಶೋತ್ಸವ ಪ್ರಯುಕ್ತ ನಿನ್ನೆ ತೊಕ್ಕೊಟ್ಟುವಿನಿಂದ ಉಳ್ಳಾಲ ಉಳಿಯಕ್ಕೆ ನಡೆದ ಹೊರೆ ದಿಬ್ಬಣ ಹಸಿರುವಾಣಿ ಹೊರೆಕಾಣಿಕೆಯ ವೈಭವದ ಶೋಭಾಯಾತ್ರೆಗೆ ಮಾಸ್ತಿಕಟ್ಟೆ ಜಂಕ್ಷನ್‌ನಲ್ಲಿ ಮುಸ್ಲಿಂ ಬಾಂಧವರು ಪ್ರೀತಿಪೂರ್ವಕ ಸ್ವಾಗತಿಸಿ ತಂಪು ಪಾನೀಯ ಹಾಗೂ ಕುಡಿಯುವ ನೀರು ವಿತರಿಸಿ ಕೋಮುಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಸೌಹಾರ್ದತೆಯನ್ನು ಮೆರೆದಿದ್ದಾರೆ.

ಉಳ್ಳಾಲ ಉಳಿಯದ ಶ್ರೀ ಉಳ್ಳಾಲ್ತಿ ಅಮ್ಮನವರ ನೂತನ ಸ್ವರ್ಣ ಬಿಂಬ ಹಾಗೂ ಕಂಚಿನ ಬಿಂಬಗಳ ಪ್ರತಿಷ್ಠೆ ಬ್ರಹ್ಮಕಲಶೋತ್ಸವ ಮತ್ತು ಶ್ರೀ ಉಳ್ಳಾಲ್ತಿ ಧರ್ಮರಸರ ನಡಾವಳಿ ಮಹೋತ್ಸವ ಜ.6ರಿಂದ 12ರವರೆಗೆ ನಡೆಯಲಿದೆ. ಆ ಪ್ರಯುಕ್ತ ತೊಕ್ಕೊಟ್ಟು ಓವರ್ ಬ್ರಿಡ್ಜ್ ಬಳಿಯಿರುವ ಜೈ ವೀರಮಾರುತಿ ವ್ಯಾಯಾಮ ಶಾಲೆಯಲ್ಲಿ ಆರಂಭಗೊಂಡ ಹೊರೆಕಾಣಿಕೆ ಮೆರವಣಿಗೆಗೆ ಉಳ್ಳಾಲ ಉಮಾಪುರಿಯ ಉಮಾಮಹೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರ ಎ.ಜೆ.ಶೇಖರ್ ಚಾಲನೆ ನೀಡಿದರು.

ಜಿಲ್ಲೆಯಾದ್ಯಂತ ದೇವಸ್ಥಾನ, ಮಂದಿರ ಹಾಗೂ ಸಂಘಟನೆ ಕಾರ್ಯಕರ್ತರನ್ನು ಸೇರಿಕೊಂಡ ಸುಮಾರು 1000ಕ್ಕೂ ಅಧಿಕ ಹಿಂದು ಬಾಂಧವರು ಹೊರೆಕಾಣಿಕೆ ಮೆರವಣಿಗೆಯಲ್ಲಿ ವಾಹನಗಳಲ್ಲಿ ಮತ್ತು ನಡೆದುಕೊಂಡು ಪಾಲ್ಗೊಂಡರು.

ಮಾಸ್ತಿಕಟ್ಟೆ ಜಂಕ್ಷನ್ನಿನಲ್ಲಿ 50ಕ್ಕೂ ಅಧಿಕ ಮುಸ್ಲಿಂ ಬಾಂಧವರು ದೇವಸ್ಥಾನದ ಮೆರವಣಿಗೆಯನ್ನು ಪ್ರೀತಿಪೂರ್ವಕವಾಗಿ ಸ್ವಾಗತಿಸಿ, ಮೆರವಣಿಗೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ತಂಪು ಪಾನೀಯ ಮತ್ತು ಕುಡಿಯುವ ನೀರು ವಿತರಿಸಿದರು. ಕೋಮುಸೂಕ್ಷ್ಮ ಪ್ರದೇಶ ಅನಿಸಿಕೊಂಡ ಉಳ್ಳಾಲದಲಿ ಅಪರೂಪದ ಕ್ಷಣ ಸೌಹಾರ್ದತೆಯ ವಾತಾವರಣದೊಂದಿಗೆ, ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರಿತು.

ಪಾನೀಯ ವಿತರಣೆಯ ನೇತೃತ್ವ ವಹಿಸಿದ್ದ ಉಳ್ಳಾಲ ನಗರಸಭೆ ಮಾಜಿ ಸದಸ್ಯ ಉಸ್ಮಾನ್ ಕಲ್ಲಾಪು ಮಾತನಾಡಿ, ಉಳ್ಳಾಲ ಭಾಗದಲ್ಲಿ ಎಲ್ಲರೂ ಜತೆಯಾಗಿ ಬಾಳುತ್ತಿದ್ದೇವೆ. ಹೊರೆಕಾಣಿಕೆ ಮೆರವಣಿಗೆಯಲ್ಲಿ ಎಲ್ಲರೂ ಪಾಲ್ಗೊಳ್ಳುವ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡ ಭಕ್ತರಿಗೆ ತಂಪು ಪಾನೀಯ ವಿತರಿಸಿರುವುದು ಇದಕ್ಕೆ ಸಾಕ್ಷಿಯಾಗಿದೆ.

ಉಳ್ಳಾಲದಲ್ಲಿ ಕೆಡುಕು ಉಂಟು ಮಾಡುವ ಕೆಲವೇ ಮಂದಿಗೆ ಈ ಕ್ಷಣ ಪಾಠವಾಗಲಿದೆ. ಹಿಂದಿನಿಂದಲೂ ಜತೆಯಾಗಿಯೇ ಇದ್ದೇವೆ, ಮುಂದೆಯೂ ಹೀಗೆ ಬಾಳುತ್ತೇವೆ ಎಂದರು. ವೇಳೆ ನಗರಸಭೆ ಸದಸ್ಯ ಮುಸ್ತಾಫ, ಸ್ಥಳೀಯರಾದ ಫೈರೋಝ್, ಅದ್ರಾಮ, ಮೋನು, ಅಹಮ್ಮದ್ ಬಾವಾ ಕೊಟ್ಟಾರ ಮೊದಲಾದವರು ಭಾಗವಹಿಸಿದ್ದರು.

Comments are closed.