ಕರಾವಳಿ

ಯಕ್ಷಗಾನದ ಹೆಚ್ಚಿನ ಕಲಾವಿದರು ಯಾವತ್ತೂ ಬಡತನದಲ್ಲಿರುತ್ತಾರೆ : ಸರ್ವೋತ್ತಮ ಶೆಟ್ಟಿ ದುಬಾಯಿ

Pinterest LinkedIn Tumblr

ಮಂಗಳೂರು: ಯಕ್ಷಗಾನ ಕಲಾವಿದರು ಯಾವತ್ತೂ ಕಷ್ಟದಲ್ಲಿರುತ್ತಾರೆ. ಆ ರಂಗದಲ್ಲಿ ದುಡಿಯುವ ಕಲಾವಿದರಲ್ಲಿ ಶ್ರೀಮಂತಿಕೆ ಇರುವುದಿಲ್ಲ. ಬೆರಳೆಣಿಕೆಯ ಕಲಾವಿದರು ಶ್ರೀಮಂತಿಕೆಯಲ್ಲಿದ್ದರೂ ಶೇಕಡಾ 80ರಷ್ಟು ಮಂದಿ ಕಲಾವಿದರು ಬಡವರಾಗಿಯೇ ಇದ್ದಾರೆ. ಇಂತಹ ಸಂದರ್ಭದಲ್ಲಿ ಕಳೆದ ವರ್ಷ ಅಸ್ತಿತ್ವಕ್ಕೆ ಬಂದ ಯಕ್ಷಧ್ರುವ ಪಟ್ಲ ಫೌಂಡೇಶನ್ ಕಲಾವಿದರಿಗೆ ಸಹಾಯ ಹಸ್ತ ನೀಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ದುಬಾಯಿ ಘಟಕದ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ತಿಳಿಸಿದರು.

ಬಲ್ಲಾಲ್‌ಬಾಗ್ ಬಳಿಯ ಪತ್ತುಮುಡಿ ಸೌಧದಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.ದುಬಾಯಿ ಘಟಕದ ಸದಸ್ಯ ಗುಣಶೀಲ ಶೆಟ್ಟಿ ಮಾತನಾಡಿ ಯುವಕರನ್ನು ಯಕ್ಷಗಾನದಲ್ಲಿ ತೊಡಗಿಸಿಕೊಳ್ಳುವಂತಹ ಕಾರ್ಯ ನಡೆಯಬೇಕು. ಇದಕ್ಕಾಗಿ ಪಟ್ಲ ಫೌಂಡೇಶನ್ ಸಂಸ್ಥೆ ತರಬೇತಿ ನೀಡಿ ಯುವಕರನ್ನು ಯಕ್ಷರಂಗಕ್ಕೆ ಕರೆದೊಯ್ಯುವ ಕೆಲಸ ಮಾಡುವಂತಾಗಲಿ ಎಂದರು.

ಬೆಳ್ತಂಗಡಿ ಘಟಕದ ಹಿರಿಯ ಸದಸ್ಯ ಭುಜಬಲಿ ಧರ್ಮಸ್ಥಳ ಮಾತನಾಡಿ ಟ್ರಸ್ಟ್‌ನಿಂದ ಕಲಾಕೇಂದ್ರ ರಚನೆಯಾಗಲಿ, ಆ ಮೂಲಕ ಹೊಸ ಕಲಾವಿದರ ಉದಯವಾಗಲಿ ಎಂದರು.

ಪೌಂಡೇಶನ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಪಟ್ಲ ಪೌಂಡೇಶನ್ ಟ್ರಸ್ಟ್ ಕಳೆದ ಒಂದು ವರ್ಷದ ಅವಧಿಯಲ್ಲಿ ಅಶಕ್ತ ಕಲಾವಿದರಿಗೆ ಸುಮಾರು 50ರಿಂದ 55ಲಕ್ಷ ರೂಪಾಯಿ ನೀಡಿದೆ. ಮನೆ ಇಲ್ಲದೆ ಬಡತನದಲ್ಲಿರುವ ಅಶಕ್ತ ಕಲಾವಿದರಿಗೆ ಆಶ್ರಯ ಯೋಜನೆಗಾಗಿ ಕಿನ್ನಿಗೋಳಿಯಲ್ಲಿ ಜಾಗವನ್ನು ಗುರುತಿಸಲಾಗಿದೆ.

60 ವರ್ಷ ಮೇಲ್ಪಟ್ಟ ಅಶಕ್ತ ಕಲಾವಿದರಿಗೆ ಪ್ರತೀ ತಿಂಗಳು ಒಂದು ಸಾವಿರ ರೂಪಾಯಿ ಮಾಸಾಶನ ನೀಡುವ ಕುರಿತು ಯೋಜನೆ ರೂಪಿಸಲಾಗಿದೆ. ಇದರ ಪ್ರಯೋಜನ ಪಡೆಯುವ ಕಲಾವಿದರು ಒಂದು ಮೇಳದಲ್ಲಿ ಕನಿಷ್ಠ 15ವರ್ಷ ಸೇವೆ ಸಲ್ಲಿಸಿರಬೇಕು. ಅಲ್ಲದೆ ಕಲಾವಿದರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಹೆಚ್ಚಳಗೊಳಿಸಲಾಗುವುದು. ಮೇ 28ರಂದು ಪಟ್ಲ ಪೌಂಡೇಶನ್‌ನ ವಾರ್ಷಿಕ ಸಂಭ್ರಮ ಕಾರ್ಯಕ್ರಮ ಮಂಗಳೂರಿನಲ್ಲಿ ಜರಗಲಿದೆ. ಫೌಂಡೇಶನ್‌ನ ಟ್ರಸ್ಟಿಗಳಿಗೆ ಗುರುತಿನ ಗೋಲ್ಡ್ ಕಾರ್ಡ್‌ನ್ನು ಅಂದು ವಿತರಿಸಲಾಗುವುದು ಎಂದು ಪಟ್ಲ ಸತೀಶ್ ಶೆಟ್ಟಿ ತಿಳಿಸಿದರು.

ವಿವಿಧ ಘಟಕದ ಅಧ್ಯಕ್ಷರುಗಳು ಉಪಸ್ಥಿತರಿದ್ದರು. ಸಭೆಯಲ್ಲಿ ಸರಪಾಡಿ ಅಶೋಕ ಶೆಟ್ಟಿ , ಸುಬ್ಬಯ್ಯ ಶೆಟ್ಟಿ ಕಾಸರಗೋಡು. ಗೋಪಾಲ ಶೆಟ್ಟಿ ಕಾರ್ಕಳ, ಯಂ.ನಾ.ಚಂಬಲ್ತಿಮಾರ್, ಸಂತೋಷ್ ಕುಮಾರ್ ರೈ ಬೋಳಿಯಾರ್, ದೇವಾನಂದ ಭಟ್ ಬೆಳ್ವಾಯಿ, ಮತ್ತು ಮಹಿಳಾ ಘಟಕದ ಅಧ್ಯಕ್ಷೆ ಪೂರ್ಣಿಮಾ ಯತೀಶ್ ರೈ ಅನಿಸಿಕೆಗಳನ್ನು ವ್ಯಕ್ತಪಡಿಸಿದರು.

ಸಭೆಯಲ್ಲಿ ಗೌರವಾಧ್ಯಕ್ಷ ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ, ಉದ್ಯಮಿ ಪ್ರೇಮನಾಥ ಶೆಟ್ಟಿ ದುಬಾಯಿ, ಜತೆ ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ, ರಾಜೀವ ಪೂಜಾರಿ ಕೈಕಂಬ, ಸಂಘಟನಾ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಬಾಳ ಉಪಸ್ಥಿತರಿದ್ದರು. ಸಂಘಟನಾ ಕಾರ್ಯದರ್ಶಿ ಕದ್ರಿ ನವನೀತ ಶೆಟ್ಟಿ ಸ್ವಾಗತಿಸಿದರು. ಉಪಾಧ್ಯಕ್ಷ ಡಾ. ಮನುರಾವ್ ವಂದಿಸಿದರು. ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಭಂಡಾರಿ ಅಡ್ಯಾರ್ ಕಾರ್ಯಕ್ರಮ ನಿರ್ವಹಿಸಿದರು.

Comments are closed.