ಕರಾವಳಿ

ಮನಪಾ ವ್ಯಾಪ್ತಿಯ ಹಲವೆಡೆಗಳಲ್ಲಿ ಕುಡಿಯುವ ನೀರು ಕಲುಷಿತ ; ಮಾಜಿ ಸಚಿವ ಪಾಲೇಮಾರ್ ಆರೋಪ

Pinterest LinkedIn Tumblr

ಮಂಗಳೂರು,ಜನವರಿ.5: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮನಪಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ನಳ್ಳಿಯಲ್ಲಿ ಸರಬರಾಜಾಗುತ್ತಿರುವ ಕುಡಿಯುವ ನೀರು ಮಲಿನವಾಗಿದ್ದು, ಈ ನೀರನ್ನು ಸಂಸ್ಕರಿಸದೆ ಬಳಸುವುದರಿಂದ ಸೇವಿಸುವವರು ಹಲವು ರೋಗಗಳಿಗೆ ತುತ್ತಾಗವುವ ಸಂದರ್ಭವಿರುವುದರಿಂದ ನೀರನ್ನು ಸಂಸ್ಕರಿಸದೆ ಬಳಕೆ ಮಾಡಬಾರದು. ಈ ಬಗ್ಗೆ ಮನಪಾ ಆಡಳಿತ ತಕ್ಷಣ ಕ್ರಮ ಕೈ ಗೊಳ್ಳಬೇಕು ಎಂದು ಮಾಜಿ ಸಚಿವ ಕೃಷ್ಣಾ ಜೆ.ಪಾಲೇಮಾರ್ ತಿಳಿಸಿದ್ದಾರೆ.

ನಗರದ ಪತ್ರಿಕಾಭವನದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸುರತ್ಕಲ್ ಕಾಟಿಪಳ್ಳ ಪ್ರದೇಶದ ಸುಮಾರು 27 ಕಡೆಗಳ ನೀರಿನ ಮಾದರಿಯನ್ನು ಸಂಗ್ರಹಿಸಿ ಪರೀಕ್ಷಿಸಿದಾಗ ಆ ನೀರು ಮಲಿನ ಗೊಂಡಿರುವುದು ಪತ್ತೆಯಾಗಿದೆ.

ಇದರಲ್ಲಿ ಮಾನವ ಹಾಗೂ ಪ್ರಾಣಿಗಳ ಮಲದಿಂದ ಉತ್ಪತ್ತಿಯಾಗುವ (ಇ-ಕೋಲಿ) ಬ್ಯಾಕ್ಟೀರಿಯಾಗಳಿಂದ ಕೂಡಿರುವುದು ಪ್ರಯೋಗಾಲಯದ ಪರೀಕ್ಷೆಯಿಂದ ದೃಢಪಟ್ಟಿದೆ ಎಂದು ತಿಳಿಸಿದರು.

ಈ ಪೈಕಿ ಕಾಟಿಪಳ್ಳ ಮಸೀದಿ,ಸರಕಾರಿ ಆಸ್ಪತ್ರೆ ಸುರತ್ಕಲ್, ಚಿಲಿಂಬಿ, ಬೊಂದೇಲ್, ಪಾಂಡೇಶ್ವರ, ಅಶೋಕ ನಗರ,ಮೊದಲಾದ ಕಡೆಗಳ ನೀರಿನಲ್ಲಿ ಈ ಬ್ಯಾಕ್ಟೀರಿಯಾಗಳ ಪ್ರಮಾಣ ಹೆಚ್ಚಾಗಿದೆ ಈ ನೀರನ್ನು ಸಂಸ್ಕರಿಸದೆ ಬಳಸುವುದರಿಂದ ಸೇವಿಸುವವರು ಹಲವು ರೋಗಗಳಿಗೆ ಕಾರಣರಾಗಬಹುದು ಎಂದು ಬಯೋಟೆಕ್ ಮತ್ತು ಮೀನುಗಾರಿಕಾ ವಿ.ವಿ ಲ್ಯಾಬ್ವರದಿಯಿಂದ ತಿಳಿದು ಬಂದಿದೆ.

ಕುಡಿಯುವ ನೀರಿನಲ್ಲಿ ಇರುವ ಸೂಕ್ಷ್ಮಾಣುಗಳು ಪತ್ತೆ ಮಾಡಿ ಸಂಸ್ಕರಿಸಿ ಶುದ್ಧ ಕುಡಿಯುವ ನೀರನ್ನು ಜನರಿಗೆ ಒದಗಿಸುವಲ್ಲಿ ಮನಪಾ ಆಡಳಿತ ವಿಫಲವಾಗಿದೆ ಎಂದು ಪಾಲೆಮಾರ್ ಆರೋಪಿಸಿದರು.

ಬಿಜೆಪಿ ಪಕ್ಷದ ಪ್ರಮುಖರಾದ ಭರತ್ ಶೆಟ್ಟಿ, ಶಾನನವಾಝ್ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.