ಕರಾವಳಿ

ಸಂಸದ ನಳಿನ್‌ಕುಮಾರ್ ತಮ್ಮ ಹೇಳಿಕೆ ಬಗ್ಗೆ ಸ್ಪಷ್ಟೀಕರಣ ನೀಡಿದ ಬಳಿಕವೂ ಕೇಸು ದಾಖಲಿಸಿರುವುದು ಖಂಡನೀಯ :ಕೊಟ್ಟಾರಿ

Pinterest LinkedIn Tumblr

ಮಂಗಳೂರು : ಸಂಸದ ನಳಿನ್‌ಕುಮಾರ್ ಕಟೀಲುರವರು ಜಿಲ್ಲೆಯ ಬಗ್ಗೆ ಇತ್ತೀಚಿಗೆ ನೀಡಿದ್ದಾರೆ ಎಂಬ ಹೇಳಿಕೆಯ ಬಗ್ಗೆ ಈಗಾಗಲೇ ಸ್ಪಷ್ಟೀಕರಣವನ್ನು ಮಾಧ್ಯಮಗಳಲ್ಲಿ ನೀಡಿದ್ದು, ತದನಂತರವೂ ಅವರ ವಿರುದ್ಧ ಕೇಸು ದಾಖಲಿಸಿರುವುದು ಮತ್ತು ಪ್ರತಿಭಟನೆ ನಡೆಸಿರುವುದು ಖಂಡನೀಯ ಎಂದು ಬಿ.ಜೆ.ಪಿ ಜಿಲ್ಲಾ ವಕ್ತಾರ ಜಿತೇಂದ್ರ.ಎಸ್.ಕೊಟ್ಟಾರಿ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕಾನೂನು ವ್ಯವಸ್ಥೆ ಪೂರ್ತಿ ಹದೆಗೆಟ್ಟಿದೆಯೆಂಬುದನ್ನು ಮೊದಲು ಕಾಂಗ್ರೇಸಿಗರು ಒಪ್ಪಿಕೊಳ್ಳಲಿ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಕಾಂಗ್ರೇಸ್ ಸರಕಾರ ಅಸ್ತಿತ್ವಕ್ಕೆ ಬಂದ ಮೇಲೆ ಸಂಘಪರಿವಾರದ ಕಾರ್ಯಕರ್ತರ ಕೊಲೆ, ಕೊಲೆ ಯತ್ನ ಪ್ರಕರಣದಂತಹ ಅನೇಕ ಪ್ರಕರಣಗಳು ನಡೆದಿರುವುದು ಕಾಂಗ್ರೇಸಿಗರ ದ್ವೇಷ ರಾಜಕಾರಣಕ್ಕೆ ಸಾಕ್ಷಿಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಸೋಮೇಶ್ವರ, ಉಚ್ಚಿಲದ ಗಣೇಶ್ ಭಟ್ ರವರ ಮನೆಯ ತುಳಸಿ ಕಟ್ಟೆಯ ಮೇಲೆ ಗೋವಿನ ಕಾಲನ್ನು ಇಟ್ಟಿರುವ ಪ್ರಕರಣದಿಂದ ಪ್ರಾರಂಭವಾಗಿ, ಇತ್ತೀಚಿಗೆ ನಡೆದ ರಾಮ್ ಮೋಹನ್ ಕೊಲೆ ಯತ್ನದವರೆಗೆ, ಅನೇಕ ಅಪರಾಧಿ ಕೃತ್ಯಗಳಿಂದ ಬಹುಸಂಖ್ಯಾತ ಹಿಂದುಗಳು ರೊಚ್ಚಿಗೇಳಿರುವುದು ಸತ್ಯ.

ನೆರೆ ರಾಜ್ಯ ಕೇರಳದಿಂದ ವ್ಯಸ್ಥತವಾಗಿ ಜಿಲ್ಲೆಗೆ ಬಂದು ಈ ದುಷ್ಕ್ರತ್ಯಗಳನ್ನು ನಡೆಸುವ ಮತಾಂಧ ಭಯೋತ್ಪಾದಕರನ್ನು ಬೆಂಬಲಿಸುವ ಜಿಲ್ಲೆಯ ಕೆಲವೊಂದು ಕಾಂಗ್ರೇಸು ನಾಯಕರು ಈ ಪ್ರಕರಣಗಳನ್ನು ಮುಚ್ಚಿಹಾಕಲು ಪೋಲೀಸ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿರುವುದು ಕಂಡುಬಂದಿರುತ್ತದೆ.

ಈಗಾಗಲೇ ಉಳ್ಳಾಲ ಒಂದು ಕೋಮು ಸೂಕ್ಷ್ಮ ಪ್ರದೇಶವಾಗಿದ್ದು, ಭಯೋತ್ಪಾದಕರ ಅಡಗುತಾಣವಾಗಿಯೂ ಪರಿವರ್ತನೆಯಾಗಿದೆ. ಇದಕ್ಕೆ ಸಾಕ್ಷಿಯಾಗಿ ಹೈದರಾಬಾದ್ ಸ್ಪೋಟದ ರುವಾರಿ ರಿಯಾಜ್ ಭಟ್ಕಳ್ ಎಂಬ ಭಯೋತ್ಪಾದಕನಿಗೆ ಬಾಂಬ್ ಸರಬರಾಜು ಆಗಿರುವುದು ಇದೇ ಉಳ್ಳಾಲದಿಂದ ಎಂಬುದನ್ನು ಕಾಂಗ್ರೇಸಿಗರು ಮರೆತಿರುವುದು ಜಿಲ್ಲೆಯ ಜನರಿಗೆ ಮಾಡುವ ಅನ್ಯಾಯವಾಗಿದೆ.

ಆದ್ದರಿಂದ ಈ ಹೇಳಿಕೆಯ ವಿರುದ್ಧ ವ್ಯಥಾ ಕಾರಣ ಪ್ರತಿಭಟನೆಯನ್ನು ಮಾಡುವುದನ್ನು ಕೈಬಿಟ್ಟು, ಇಂತಹ ಅಹಿತಕರ ಘಟನೆ ಉಳ್ಳಾಲದಲ್ಲಿ ಭವಿಷ್ಯದಲ್ಲಿ ನಡೆಯದಂತೆ ತಡೆಯುವ ಕಾರ್ಯವನ್ನು ಮಾಡುವುದು ನಿಜವಾದ ರಾಜಕಾರಣ ಎಂಬುದನ್ನು ಕಾಂಗ್ರೇಸಿಗರು ತಿಳಿದುಕೊಳ್ಳಲಿ.

ಸಂಸದರು ಈ ನಿಟ್ಟಿನಲ್ಲಿ ಜನರ ಭಾವನೆಗಳನ್ನು ಸರಿಯಾಗಿಯೇ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಈ ಬಗ್ಗೆ ಕೀಳುಮಟ್ಟದ ರಾಜಕೀಯವನ್ನು ಬಿಟ್ಟು ಕಾರ್ತಿಕ್ ರಾಜ್ ಎಂಬ ಅಮಾಯಕನಿಗೆ ನ್ಯಾಯ ಒದಗಿಸಬೇಕೆಂದು ಜಿತೇಂದ್ರ.ಎಸ್.ಕೊಟ್ಟಾರಿ ಅವರು ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Comments are closed.