ಕರಾವಳಿ

ಉಪ್ಪಿನಂಗಡಿಯ ಸರಕಾರಿ ಕಾಲೇಜಿನಲ್ಲಿ ಮತ್ತೆ ಭಿನ್ನ ಕೋಮಿನ ವಿದ್ಯಾರ್ಥಿಗಳ ನಡುವೆ ಮಾರಾಮಾರಿ

Pinterest LinkedIn Tumblr

ಉಪ್ಪಿನಂಗಡಿ, ಜನವರಿ.5: ಮೂರು ವರ್ಷಗಳ ಹಿಂದೆ ಮತೀಯ ಸಂಘರ್ಷದ ತಾಣವಾಗಿದ್ದ ಉಪ್ಪಿನಂಗಡಿಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಮತ್ತೆ ಎರಡು ಕೋಮಿನ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆದಿದೆ.

ಬಳಿಕ ಪೊಲೀಸರು ಹಾಗೂ ಕಾಲೇಜು ಉಪನ್ಯಾಸಕರ ಮಧ್ಯೆ ಪ್ರವೇಶದಿಂದ ಘಟನೆ ಸೌಹಾರ್ದಯುತವಾಗಿ ಬಗೆಹರಿದಿದೆ ಎನ್ನಲಾಗಿದೆ. ವಿದ್ಯಾರ್ಥಿಯೋರ್ವ ವಿದ್ಯಾರ್ಥಿನಿಯೊಂದಿಗೆ ಸಲುಗೆಯಿಂದ ಮಾತನಾಡುತ್ತಿರುವುದನ್ನು ಕಂಡ ಭಿನ್ನ ವಿದ್ಯಾರ್ಥಿಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವುದೇ ಘಟನೆಗೆ ಕಾರಣ ಎನ್ನಲಾಗಿದೆ.

ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಅಂತಿಮ ಬಿಎ ವಿದ್ಯಾರ್ಥಿಯೋರ್ವ ಭಿನ್ನ ಕೋಮಿನ ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿನಿಯೊಂದಿಗೆ ಸಲುಗೆಯೊಂದಿಗೆ ಮಾತನಾಡಿದ್ದನ್ನು ಕಂಡ ವಿದ್ಯಾರ್ಥಿಗಳ ಗುಂಪು ವಿದ್ಯಾರ್ಥಿಯನ್ನು ತರಾಟೆಗೆ ತೆಗೆದುಕೊಂಡು ಮಾತಿನ ಚಕಮಕಿ ನಡೆಸಿದೆ. ಅಲ್ಲದೇ, ವಿದ್ಯಾರ್ಥಿನಿಯೊಂದಿಗೆ ಮಾತನಾಡುತ್ತಿದ್ದಾಗ ಹಲ್ಲೆಗೆ ಮುಂದಾಗಿದೆ. ಈ ಸಂದರ್ಭ ಎರಡೂ ಸಮುದಾಯದ ವಿದ್ಯಾರ್ಥಿಗಳು ಜಮಾಯಿಸಿ ಪರಸ್ಪರ ಮಾತಿನ ಚಕಮಕಿ ನಡೆಸಿದರಲ್ಲದೆ, ಹೊಕೈ ನಡೆಸಿದರೆನ್ನಲಾಗಿದೆ.

ಈ ಸಂದರ್ಭ ಧಾವಿಸಿ ಬಂದ ಕಾಲೇಜಿನ ಉಪನ್ಯಾಸಕರು ಹೊಡೆದಾಟ ನಿರತ ವಿದ್ಯಾರ್ಥಿಗಳನ್ನು ನಿಯಂತ್ರಿಸಲು ಯತ್ನಿಸಿದರಾದರೂ, ಪರಿಸ್ಥಿತಿ ನಿಯಂತ್ರಣ ಬಾರದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಉಪ್ಪಿನಂಗಡಿ ಪ್ರಭಾರ ಎಸ್ಸೈ ರತನ್ ಕುಮಾರ್ ಹಾಗೂ ಪೊಲೀಸರು ಕಾಲೇಜು ಮುಂಭಾಗದಲ್ಲಿ ಜಮಾಯಿಸಿದ್ದ ವಿದ್ಯಾರ್ಥಿಗಳನ್ನು ಲಾಠಿಬೀಸಿ ಚದುರಿಸಿದ್ದಾರೆ.

ಪೊಲೀಸರು ಹಾಗೂ ಕಾಲೇಜು ಉಪನ್ಯಾಸಕರು ಸಂಘರ್ಷ ನಿರತ ವಿದ್ಯಾರ್ಥಿಗಳೊಂದಿಗೆ ಮಾತುಕತೆ ನಡೆಸಿದರು. ಬಳಿಕ ಎರಡೂ ಗುಂಪಿನ ವಿದ್ಯಾರ್ಥಿಗಳು ಪರಸ್ಪರ ಕ್ಷಮೆ ಯಾಚಿಸಿಕೊಂಡು ಮುಚ್ಚಳಿಕೆ ಬರೆದುಕೊಟ್ಟು ತಮ್ಮಾಳಗಿನ ಸಮಸ್ಯೆಯನ್ನು ಸೌಹಾರ್ದದಿಂದ ಇತ್ಯರ್ಥಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.

Comments are closed.