ಕರಾವಳಿ

ಯುವ ಉದ್ಯಮಿ ಉಮೇಶ್ ಶೆಟ್ಟಿ ಹತ್ಯೆ : ಹಣ ದೋಚಲು ಮಾಡಿದ ಫ್ರೀ ಪ್ಲ್ಯಾನ್ ಮರ್ಡರ್, ಶಂಕೆ!..

Pinterest LinkedIn Tumblr

umesh_shetty_body

ಮಂಗಳೂರು, ಜ.2: ನಾಪತ್ತೆಯಾಗಿದ್ದ ಕಿನ್ನಿಗೋಳಿ ಸಮೀಪದ ಕಿಲೆಂಜೂರು ಕಂಬಳಿಮನೆ ನಿವಾಸಿ, ಯುವ ಉದ್ಯಮಿ ಉಮೇಶ್ ಶೆಟ್ಟಿ(29) ಮೃತದೇಹ ಬಾನುವಾರ ಮಧ್ಯಾಹ್ನ ನಿಡ್ಡೋಡಿ ದಡ್ಡು ಚರ್ಚ್ ಬಳಿಯ ಗುಡ್ಡದಲ್ಲಿ ಪತ್ತೆಯಾಗಿದ್ದು, ಇದೊಂದು ಮೊದಲೇ ನಿರ್ಧಾರ ಮಾಡಿ ವ್ಯವಸ್ಥಿತ ರೀತಿಯಲ್ಲಿ ನಡೆಸಿದ ಕೊಲೆ ಎಂಬ ಶಂಕೆ ವ್ಯಕ್ತವಾಗಿದೆ.

ಪಣಂಬೂರಿನ ಟ್ರಾನ್ಸ್‌ಪೋರ್ಟ್ ಸಂಸ್ಥೆಯೊಂದರ ಪಾಲುದಾರರಾಗಿದ್ದ ಉಮೇಶ್‌ರನ್ನು ಹಣ ದೋಚುವ ಉದ್ದೇಶದಿಂದ ಉಪಾಯದಿಂದ ಕರೆದೊಯ್ದು ವ್ಯವಸ್ಥಿತ ರೀತಿಯಲ್ಲಿ ಕೊಲೆಗೈದು ಗುಡ್ಡದಲ್ಲಿ ಎಸೆದಿರಬೇಕೆಂದು ಶಂಕಿಸಲಾಗಿದ್ದು ಈ ನಿಟ್ಟಿನಲ್ಲಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.

ಕಿಲೆಂಜೂರು ರಾಮಕೃಷ್ಣ ಶೆಟ್ಟಿ ಹಾಗೂ ಪ್ರಭಾವತಿ ಶೆಟ್ಟಿ ದಂಪತಿ ಪುತ್ರ ಉಮೇಶ್ ಶೆಟ್ಟಿ ಮೂರು ವರ್ಷಗಳ ಹಿಂದೆ ಮುಂಬೈಯಿಂದ ಆಗಮಿಸಿ ಉದ್ಯಮದಲ್ಲಿ ತೊಡಗಿಕೊಂಡಿದ್ದರು. ಪ್ರತಿದಿನ ಪಣಂಬೂರಿಗೆ ಮನೆಯಿಂದ ಬಸ್ಸಿನಲ್ಲೇ ತೆರಳುತ್ತಿದ್ದರು. ಕಳೆದ ಡಿ.೨೮ರಂದು ಸಂಜೆ ಕೆಲಸ ಮುಗಿಸಿ ಬಸ್ಸಿನಲ್ಲಿ ಬಂದಿದ್ದ ಅವರು ಪಕ್ಷಿಕೆರೆ ಜಂಕ್ಷನ್‌ನಲ್ಲಿ ಇಳಿದಿದ್ದರು. ಬಳಿಕ ಬಿಳಿ ಬಣ್ಣದ ಸ್ವಿಫ್ಟ್ ಕಾರ್ ಹತ್ತಿ ಅವರು ಬೇರೆಲ್ಲೋ ತೆರಳಿದ್ದನ್ನು ಕಂಡವರಿದ್ದಾರೆ. ಮೊಬೈಲ್ ಸ್ವಿಚ್ಡ್ ಆಫ್ ಆಗಿದ್ದು ಮೂಲ್ಕಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಪೊಲೀಸರು ತನಿಖೆ ನಡೆಸುತ್ತಿರುವಂತೆಯೇ ನಿನ್ನೆ ಮಧ್ಯಾಹ್ನದ ವೇಳೆ ನಿಡ್ಡೋಡಿ ಜಡ್ಡು ಬಳಿಯ ಗುಡ್ಡದಲ್ಲಿ ಮೃತದೇಹ ಪತ್ತೆಯಾಗಿದೆ.

ಉಮೇಶ್ ಶೆಟ್ಟಿ ಮಿತಭಾಷಿಯಾಗಿದ್ದು ಎಲ್ಲರೊಂದಿಗೆ ಸ್ನೇಹದಿಂದ ಇದ್ದರು ಎನ್ನಲಾಗಿದೆ. ವೈಯಕ್ತಿಕ ದ್ವೇಷ ಹಿನ್ನೆಲೆ ಇಲ್ಲವೇ ವ್ಯವಹಾರದಲ್ಲಿನ ದ್ವೇಷದಿಂದ ಕೊಲೆಗೈದಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಸ್ಥಳಕ್ಕೆ ಎಸಿಪಿ ರಾಜೇಂದ್ರ, ಡಿಸಿಪಿ ಕಾಂತರಾಜು, ಮೂಲ್ಕಿ ಠಾಣಾ ಸರ್ಕಲ್ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಮೂಡಬಿದ್ರೆ ಸರ್ಕಲ್ ಇನ್‌ಸ್ಪೆಕ್ಟರ್ ರಾಮಚಂದ್ರ ನಾಯಕ್, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿದ್ದಾರೆ.

ಪರ್ಸ್ ನೀಡಿದ ಸುಳಿವು..

ಕ್ರೈಸ್ತ ಕುಟುಂಬವೊಂದು ನಿಡ್ಡೋಡಿ ಜಡ್ಡು ಬಳಿ ಜಾಗ ಖರೀದಿ ಮಾಡಿದ್ದು ಗಲ್ಫ್ ರಾಷ್ಟ್ರದಿಂದ ಬಂದಿದ್ದ ಕುಟುಂಬ ಡಿ.30ರಂದು ಜಾಗ ನೋಡಲು ಸ್ಥಳಕ್ಕೆ ಬಂದಿತ್ತು. ಈ ವೇಳೆ ಉಮೇಶ್ ಶೆಟ್ಟಿ ಅವರ ವೋಟರ್ ಐಡಿ, ಪರ್ಸ್ ಪತ್ತೆಯಾಗಿತ್ತು. ಅವರು ಫೇಸ್‌ಬುಕ್‌ನಲ್ಲಿ ಉಮೇಶ್ ಶೆಟ್ಟಿಗಾಗಿ ಜಾಲಾಡಿದ್ದರೂ ಅವರ ಪೇಜ್ ಸಿಕ್ಕಿರಲಿಲ್ಲ. ಹೀಗಾಗಿ ಕಟೀಲು ಬಳಿಯ ಅಜಾರಿಬ ಪರಿಚಯಸ್ಥರಲ್ಲಿ ಅವನ್ನು ಕೊಟ್ಟು ಉಮೇಶ್ ಶೆಟ್ಟಿ ಸಿಕ್ಕಿದರೆ ಕೊಡಿ ಎಂದಿದ್ದರು. ಅದರಂತೆ ಅವರು ಉಮೇಶ್ ಶೆಟ್ಟಿ ಸ್ನೇಹಿತರಲ್ಲಿ ಈ ಬಗ್ಗೆ ತಿಳಿಸಿದ್ದರು. ಬಾನುವಾರ ಮಧ್ಯಾಹ್ನ ಗುಡ್ಡದಲ್ಲಿ ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

CLICK here: ಯುವ ಉದ್ಯಮಿ ನಾಪತ್ತೆ ಪ್ರಕರಣ : ಶವ ಮೂಡುಬಿದಿರೆ ಸಮೀಪದ ನಿಡ್ಡೋಡಿ ಗುಡ್ಡ ಪ್ರದೇಶದಲ್ಲಿ ಪತ್ತೆ

Comments are closed.