ಕರಾವಳಿ

ಸಂಸದ ನಳಿನ್ ಕುಮಾರ್ ಕಟೀಲು ಹೇಳಿಕೆ ವಿವಾದ : ಕೊಣಾಜೆ ಠಾಣೆಯಲ್ಲಿ ದೂರು ದಾಖಲು

Pinterest LinkedIn Tumblr

nalin_konaje_complant_1

ಮಂಗಳೂರು, ಜ.2: ಸಂಸದ ನಳಿನ್ ಕುಮಾರ್ ಕಟೀಲು ಜಿಲ್ಲೆಗೆ ಬೆಂಕಿ ಹಾಕಲು ನಮಗೂ ಗೊತ್ತಿದೆ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಂಸದರ ವಿರುದ್ಧ ಕೊಣಾಜೆ ಠಾಣೆಗೆ ದೂರು ದಾಖಲಿಸಲಾಗಿದೆ.

ಮಂಗಳೂರು ತಾ.ಪಂ ಮಾಜಿ ಉಪಾಧ್ಯಕ್ಷ ಉಮೇಶ್ ಗಾಣಿಗ ಅವರ ಪುತ್ರ ಪಜೀರ್‌‌ನ ಕಾರ್ತಿಕ್ ರಾಜ್ ಹತ್ಯೆ ಆರೋಪಿಗಳ ಪತ್ತೆಗೆ ಆಗ್ರಹಿಸಿ ರವಿವಾರ ಕೊಣಾಜೆ ಠಾಣೆ ಎದುರು ನಡೆದ ಪ್ರತಿಭಟನೆ ವೇಳೆ ಸಂಸದ ನಳಿನ್ ಕುಮಾರ್ ಕಟೀಲು, ಕಾರ್ತಿಕ್‌ರಾಜ್ ಕೊಲೆ ಪ್ರಕರಣದ ಆರೋಪಿಗಳನ್ನು 10 ದಿನಗಳ ಒಳಗೆ ಬಂಧಿಸದಿದ್ದರೆ ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಾಕಲು ನಮಗೂ ಗೊತ್ತಿದೆ ಎಂಬ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

nalin_konaje_complant_2

nalin_konaje_complant_5

ಪ್ರಕರಣದ ಬಗ್ಗೆ ಕೊಣಾಜೆ ಸರ್ಕಲ್ ಇನ್ಸ್‌ಪೆಕ್ಟರ್ ಅವರಲ್ಲಿ ದೂರು ನೀಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಂತೋಷ್ ಶೆಟ್ಟಿ ಮಾತನಾಡಿ, ಒಬ್ಬ ಜವಾಬ್ದಾರಿಯುತ ಸಂಸದರಾಗಿ ಪ್ರಚೋದನಾಕಾರಿ ಭಾಷಣದ ಮೂಲಕ ಜಿಲ್ಲೆಯ ಜನರಿಗೆ ಭಯದ ವಾತಾವರಣವನ್ನು ಉಂಟು ಮಾಡಿರುವುದಕ್ಕೆ ಅವರನ್ನು ಬಂಧಿಸಿ ತಕ್ಷಣ ಅವರ ವಿರುದ್ದ ಮೊಕದ್ದಮೆಗಳನ್ನು ದಾಖಲಿಸಿ ಕಾನೂನು ಕ್ರಮಕೈಗೊಳ್ಳಬೇಕೆಂದು ದೂರಿನಲ್ಲಿ ತಿಳಿಸಲಾಗಿದೆ ಎಂದು ಹೇಳಿದರು.

ಕಾರ್ತಿಕ್ ರಾಜ್ ಕೊಲೆ ಆರೋಪಿಗಳನ್ನು ಅತೀ ಶೀಘ್ರದಲ್ಲೇ ಬಂಧಿಸಿ ಕಾನೂನು ಕ್ರಮಕ್ಕೊಳಪಡಿಸುವಂತೆ ಹಾಗೂ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸುವಂತೆ ನಾವು ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ್ ರೈ ಹಾಗೂ ಸಚಿವ ಯು.ಟಿ.ಖಾದರ್ ಅವರಲ್ಲಿ ಮನವಿ ಮಾಡಿದ್ದೇವೆ. ಇದು ಪರಿಶೀಲನೆಯ ಹಂತದಲ್ಲಿರುವಾಗ ನಳಿನ್ ಕುಮಾರ್ ಕಟೀಲ್ ಅವರು ಈ ರೀತಿ ಹೇಳಿಕೆ ನೀಡಿರುವುದು ಸರಿಯಲ್ಲ ಎಂದು ಸಂತೋಷ್ ಶೆಟ್ಟಿ ತಿಳಿಸಿದರು.

nalin_konaje_complant_3 nalin_konaje_complant_4

ನಳಿನ್ ಕುಮಾರ್ ಕಟೀಲ್ ವಿರುದ್ಧ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಮಂಗಳವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ ಈ ಸಂದರ್ಭದಲ್ಲಿ ತಿಳಿಸಿದರು.

ದೂರು ನೀಡಲು ತೆರಳಿದ ನಿಯೋಗದಲ್ಲಿ ಪಜೀರು ಗ್ರಾಪಂ ಅಧ್ಯಕ್ಷ ಸೀತಾರಾಮ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಉಮ್ಮರ್ ಫಜೀರ್, ರಹಿಮಾನ್ ಕೋಡಿಜಾಲ್, ರಮೇಶ್ ಶೆಟ್ಟಿ ಬೊಳಿಯಾರ್, ರವಿರಾಜ್ ಶೆಟ್ಟಿ, ಶೌಕತ್ ಅಲಿ, ನಝರ್ ಶಾ, ಮಹಾಬಲ ಹೆಗ್ಡೆ ಮತ್ತಿತರಿದ್ದರು.

Comments are closed.