ಮಂಗಳೂರು: ಇಲ್ಲಿನ ಬಿಳಿಚುಕ್ಕೆ ಪ್ರಕಾಶನವು ಪ್ರಕಟಿಸಿದ ತನ್ನ ಚೊಚ್ಚಲ ಕೃತಿಗಳಾದ ಕವಿ ಅಹ್ಮದ್ ಅನ್ವರ್ರವರ `ಪಯಣಿಗನ ಪದ್ಯಗಳು’, ಸಾಹಿತಿ ಮುಹಮ್ಮದ್ ಬಡ್ಡೂರ್ರವರ `ಬಡ್ಡೂರರ ಸದ್ದುಗಳು’, ಲೇಖಕಿ ಶಹನಾಝ್ ಎಂರವರ `ನಿನಗಾಗಿ’ ಕಾದಂಬರಿ ಹಾಗೂ ಸನ್ಮಾರ್ಗದ ಸಂಪಾದಕ ಏ.ಕೆ. ಕುಕ್ಕಿಲರವರ `ಸರಸ ಸಲ್ಲಾಪ’ ಲಲಿತ ಪ್ರಬಂಧ ಕೃತಿಯು ಡಿಸೆಂಬರ್ 23ರಂದು ಮಂಗಳೂರಿನ ಪುರಭವನದಲ್ಲಿ ಬಿಡುಗಡೆಗೊಂಡಿತು.
ಅಹ್ಮದ್ ಅನ್ವರ್ರವರ `ಪಯಣಿಗನ ಪದ್ಯಗಳು’ ಕೃತಿಯನ್ನು ಅವರ ಪುತ್ರ ಸಲ್ಮಾನ್ ಅನ್ವರ್ ಬಿಡುಗಡೆಗೊಳಿಸಿದರು. ಸಾಹಿತಿ ಭುವನೇಶ್ವರಿ ಹೆಗಡೆ ಪ್ರಥಮ ಪ್ರತಿ ಸ್ವೀಕರಿಸಿದರು.
ಏ.ಕೆ. ಕುಕ್ಕಿಲರ `ಸರಸ ಸಲ್ಲಾಪ’ ಕೃತಿಯನ್ನು ಅವರ ತಾಯಿ ಆಸಿಯಮ್ಮ ಬಿಡುಗಡೆಗೊಳಿಸಿದರೆ ಪತ್ನಿ ಶಮೀಮ ಪ್ರಥಮ ಕೃತಿ ಸ್ವೀಕರಿಸಿದರು.
ಮಹುಮ್ಮದ್ ಬಡ್ಡೂರ್ರವರ ಬಡ್ಡೂರರ ಸದ್ದುಗಳು ಕೃತಿಯನ್ನು ಸನ್ಮಾರ್ಗ ಪಬ್ಲಿಕೇಶನ್ ಟ್ರಸ್ಟ್ನ ಚೆಯರ್ಮ್ಯಾನ್ ಕೆ.ಎಂ. ಶರೀಫ್ರವರು ಬಿಡುಗಡೆಗೊಳಿಸಿದರು. ಮಂಗಳೂರು ವಿ.ವಿ.ಯ ವಿಶ್ರಾಂತ ಪ್ರಾಂಶುಪಾಲ ಸತ್ಯನಾರಾಯಣ ಮಲ್ಲಿಪಟ್ಣ ಸ್ವೀಕರಿಸಿದರು.
ಶಹನಾಝ್ ಎಂರವರ `ನಿನಗಾಗಿ’ ಕೃತಿಯನ್ನು ಲೇಖಕಿ ರೋಹಿಣಿಯವರು ಬಿಡುಗಡೆಗೊಳಿಸಿದರು. ಬಿಳಿಚುಕ್ಕೆ ಪ್ರಕಾಶನದ ಅಧ್ಯಕ್ಷ ಮುತ್ತಲಿಬ್ರವರು ಪ್ರಥಮ ಕೃತಿಯನ್ನು ಸ್ವೀಕರಿಸಿದರು.
ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಹಾಗೂ ಸತ್ಯ ನಾರಾಯಣ ಮಲ್ಲಿಪಟ್ಟಣ ಅತಿಥಿ ಭಾಷಣ ಮಾಡಿದರು.
ಶಾಂತಿ ಪ್ರಕಾಶನದ ಮುಹಮ್ಮದ್ ಕುಂಞ, ಮಹಿಳಾ ಒಕ್ಕೂಟದ ಅಧ್ಯಕ್ಷ ಕೆ.ಎ. ರೋಹಿಣಿ ಶುಭ ಹಾರೈಸಿದರು. ಬಳಿಕ ಮುಹಮ್ಮದ್ ಬಡ್ಡೂರ್, ನಾದ ಮಣಿನಾಲ್ಕೂರ್, ಬಶೀರ್ ಅಹ್ಮದ್ ಕಿನ್ಯ, ಉಮರ್ ಮೌಲವಿ ಮಡಿಕೇರಿ, ಸಲೀಮ್ ಬೋಳಂಗಡಿ ಹಾಗೂ ಹುಸೈನ್ ಕಾಟಿಪಳ್ಳರಿಂದ ಗಾಯನಗೋಷ್ಠಿ ನಡೆಯಿತು.
ಬಿಳಿಚುಕ್ಕೆ ಪ್ರಕಾಶನದ ಕಾರ್ಯದರ್ಶಿ ಶೌಕತ್ ಅಲಿ ಪ್ರಾಸ್ತಾವಿಕ ಮಾತನ್ನಾಡಿ ಸ್ವಾಗತಿಸಿದರು. ಅಧ್ಯಕ್ಷರಾದ ಎಸ್.ಎಂ. ಮುತ್ತಲಿಬ್ ಧನ್ಯವಾದವಿತ್ತರು. ಬಿ.ಎ. ಮುಹಮ್ಮದ್ ಅಲಿ ಕಾರ್ಯಕ್ರಮ ನಿರೂಪಿಸಿದರು.