ಕರಾವಳಿ

ಜನವರಿ 6 ರಂದು ಲೋಕಾರ್ಪಣೆಗೊಳ್ಳಲಿರುವ ಕೆ.ಎಂ ಅನ್ಸಾರಿಯವರ ಎರಡು ಪುಸ್ತಕಗಳು

Pinterest LinkedIn Tumblr

img-20161225-wa0055

ವಿದ್ಯಾವರ್ಧಕ ಹೈಯರ್ ಸೆಕಂಡರಿ ಶಾಲೆ ಮೀಯಪದವು.ನಾನು ಕಲಿತಂತಹ ವಿದ್ಯಾದೇಗುಲ. ನಮ್ಮೀ ಶಾಲೆಯು ಇದೀಗ ಸುವರ್ಣ ಮಹೋತ್ಸವದ ಸಂಭ್ರಮದಲ್ಲಿದೆ.ಶಾಲೆಯ ಕೀರ್ತಿಯು ಎಲ್ಲೆಡೆ ಪಸರಿಸುತ್ತಿದೆ.ನನ್ನ ಆತ್ಮೀಯರಾದ ಹಾಗೂ ಶಾಲೆಯ ಹಳೆ ವಿದ್ಯಾರ್ಥಿಯೂ ಯುವ ಕವಿ ಕೆ.ಎಂ ಅನ್ಸಾರಿ ಮೂಡಂಬೈಲ್.ಈಗಾಗಲೇ ಸಾಮಾಜಿಕ ಜಾಲತಾಣವಾದ ಫೇಸ್ ಬುಕ್ ನಲ್ಲಿ ಕಥೆ,ಕವನಗಳು ಪ್ರಕಟಗೊಂಡು ಪರಿಚಿತರಾಗಿದ್ದಾರೆ.ಎರಡು ವರ್ಷಗಳ ಹಿಂದೆ ಇವರು ದುಬಾಯಿಯಲ್ಲಿ ನಡೆದ ಯಕ್ಷ ಮಿತ್ರರು ದುಬಾಯಿಯವರ ಮಣಿಕಂಠನ ಮಹಿಮೆ ಯಕ್ಷಗಾನಕ್ಕೆ ಬಂದು ಆ ಯಕ್ಷಗಾನದ ಬಗ್ಗೆ ಪ್ರತಿಕ್ರಿಯೆಯನ್ನು ಒಂದು ಉತ್ತಮ ಲೇಖನದ ಮೂಲಕ ಅಂತರ್ಜಾಲದಲ್ಲಿ ಹಾಕಿ ಯು.ಎ.ಇ ಯ ತುಳು ಕನ್ನಡಿಗರ ಪ್ರೀತಿ ಪಾತ್ರರಾಗಿದ್ದಾರೆ.ಹಾಗೂ ಬಲ್ಲಂಗುಡೇಲು ಜಾತ್ರೆಯ ಬಗ್ಗೆ,ಪಟ್ಟತ್ತೂರು ಚಾವಡಿ ಮನೆಯ ಬಗ್ಗೆ,ಮೀಯಪದವಿಗೆ ಮೊತ್ತ ಮೊದಲು ಬಂದ ಅಂಬಸಿಡರ್ ಕಾರಿನ ಬಗ್ಗೆ ಹಾಗೂ ಇನ್ನಿತರ ಲೇಖನಗಳನ್ನು ಬರೆದು ಜನರ ಮನ ಮುಟ್ಟಿಸಿದ್ದಾರೆ. ಜನವರಿ 6,7 ರಂದು ನಡೆಯಲಿರುವ ಶಾಲೆಯ ಸುವರ್ಣ ಮಹೋತ್ಸವದ ಶುಭ ಸಂದರ್ಭದಲ್ಲಿ ಇವರ “ಹರಕೆಯ ಕೋಳಿ” ಮತ್ತು “ಮಳೆ ನಿಂತಾಗ” ಎಂಬ ಎರಡು ಪುಸ್ತಕಗಳು ಲೋಕಾರ್ಪಣೆಗೊಳ್ಳಲಿದೆ.ಇವರ ಮತ್ತು ಪುಸ್ತಕದ ಪುಟ್ಟ ಪರಿಚಯವನ್ನು ಈ ಬರಹದ ಮೂಲಕ ನಿಮ್ಮ ಮುಂದಿಡುತ್ತಿದ್ದೇನೆ.

ಇವರು 1971 ಜುಲೈ 1 ರಂದು ಅಬ್ದುಲ್ ರಹಿಮಾನ್ ಮಾಸ್ಟರ್ ಹಾಗೂ ಸಫಿಯಾಬಿ ದಂಪತಿಗಳ ಮಗನಾಗಿ ಮೂಡಂಬೈಲ್ ನಲ್ಲಿ ಜನಿಸಿದರು.ಇವರ ಪ್ರಾಥಮಿಕ ಶಿಕ್ಷಣವನ್ನು ಮೂಡಂಬೈಲ್ ಶಾಲೆಯಲ್ಲಿ ಮುಗಿಸಿ ನಂತರದ ವಿದ್ಯಾಭ್ಯಾಸವನ್ನು ಮೀಯಪದವು ಶಾಲೆಯಲ್ಲಿ ಮುಗಿಸಿದರು.ಕಾಲೇಜು ಶಿಕ್ಷಣವನ್ನು ಮಂಗಳೂರಿನ ಗಣಪತಿ ಕಾಲೇಜಿನಲ್ಲಿ ಮಾಡಿ ನಂತರ ಸೈಂಟ್ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿದರು.ನಂತರ ಉದ್ಯೋಗ ನಿಮಿತ್ತ ವಿದೇಶಕ್ಕೆ ಪ್ರಯಾಣ ಮಾಡಿದರು.ನಾಲ್ಕು ವರ್ಷಗಳ ಕಾಲ ವಿದೇಶದಲ್ಲಿ ದುಡಿದು ಪುನಃ ತಾಯ್ನಡಿಗೆ ಆಗಮಿಸಿದರು.ನಂತರ ವಾಣಿಜ್ಯ ಕ್ಷೇತ್ರಕ್ಕೆ ಪ್ರವೇಶಿಸಿದರು. ಬೆಂಗಳೂರಿನಲ್ಲಿ ಸ್ವಲ್ಪ ಕಾಲ ವಾಸದ ನಂತರ ಪತ್ರಿಕೆಗಳಲ್ಲಿ ಬರೆಯಲು ಪ್ರಾರಂಭಿಸಿದರು. ಅಂದಿನ ಪ್ರಮುಖ ಪತ್ರಿಕೆಗಳಾಗಿದ್ದ ಏಷಿಯನ್ ಏಜ್, ಲಂಕೇಶ ಪತ್ರಿಕೆ ಮತ್ತು ಜನವಾಹಿನಿ ದಿನ ಪತ್ರಿಕೆಗಳಲ್ಲಿ ಪ್ರಕಟವಾದ ಕೆಲವೊಂದು ಲೇಖನಗಳು, ನಂತರ ಊರಿನಲ್ಲಿ ಸ್ವಲ್ಪ ಕಾಲ ವಿಶ್ರಾಂತಿ.ಸಹೋದರ ಆರಿಫ್ ಹಾಗೂ ಅಳಿಯ ಫಾರೂಕ್ ರ ಜೊತೆಗೆ ಸಾರಿಗೆ ಕ್ಷೇತ್ರದಲ್ಲಿ ದುಡಿದರು.ನಂತರ ಮಗದೊಮ್ಮೆ ಎರಡನೇ ಭಾರಿ ವಿದೇಶ ಪ್ರಯಾಣ ಮಾಡಿದರು.ಇಂದು ಇದೀಗ ವಿದೇಶದಲ್ಲಿ ಅಮೇರಿಕನ್ ಕಂಪೆನಿಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಾರೆ.

ಇವರ ಪುಸ್ತಕದ ಬಗ್ಗೆ ಹೇಳುವುದಾದರೆ “ಹರಕೆಯ ಕೋಳಿ” ಇದು ಒಂದು ಸಾಮಾಜಿಕ ಕಾದಂಬರಿ.ಆದರೆ ಇತಿಹಾಸದ ಅನಾವರಣ.ಒಬ್ಬಳು ಮಹಿಳೆ ಅದು ಹೇಗೆ ಹಿಂದು ಸಂಪ್ರದಾಯದಂತೆ ಮಾರಿ ಹಬ್ಬಕ್ಕೆ ಹರಕೆಯಾಗಿ ಕೋಳಿ ಕೊಡುವುದು ಯಾಕೆ ಎನ್ನುವುದರ ಬಗ್ಗೆ ಒಂದು ವಿಶ್ಲೇಷಣೆ ಮತ್ತು ಅದರ ಹಿಂದೆ ಅಡಗಿರುವ ಇತಿಹಾಸ.ಇವರ ಇನ್ನೊಂದು ಪುಸ್ತಕ “ಮಳೆ ನಿಂತಾಗ” .ಇದು ಒಂದು ಕವನ ಸಂಕಲನ.ಇವರು ಬರೆದ ಐವತ್ತಕ್ಕೂ ಹೆಚ್ಚಿನ ಕವನಗಳನ್ನು ಹೆಕ್ಕಿ ತೆಗೆದು ಪುಸ್ತಕ ರೂಪದಲ್ಲಿ ಪ್ರಕಟಿಸಿದ್ದಾರೆ.”ಮಳೆ ನಿಂತಾಗ” ಎಂದರೆ ಪ್ರೀತಿ ಎನ್ನುವ ಮಳೆ,ಈ ಮಳೆ ಅಂದರೆ ಅಮ್ಮನ ಪ್ರೀತಿ.ಅಮ್ಮನ ಅಕಾಲಿಕ ಮರಣದ ನಂತರ ಮನದಲ್ಲಿ ಮೂಡಿದ ದುಃಖ ದುಮ್ಮನಗಳು ಮೈ ಮನವ ನೋಯಿಸಿದಾಗ ಉದಯವಾದ ಬರಹಗಳು ಇವುಗಳು.ನೋವು,ನಲಿವು,ಹತಾಶೆ,ಪ್ರೇಮ,ವಿರಹ ಇದೆಲ್ಲದರ ಸಂಗಮವೇ ಈ ಕವನ ಸಂಕಲನ.ಇವರ ಕವನ ಮತ್ತು ಕಾದಂಬರಿಗೆ ಅಕ್ಷರ ಕಲಿಸಿದ ಅಧ್ಯಾಪಕರಾದ ಶ್ರೀ ಪಿ.ವಿ ಭಟ್ ಮತ್ತು ಉಪನ್ಯಾಸಕಿಯಾಗಿದ್ದ ಚಂದ್ರಕಲಾ ನಂದಾವರ ಅವರು ತಮ್ಮ ಅನಿಸಿಕೆಗಳನ್ನು ಬರೆದಿದ್ದಾರೆ.ಜೊತೆಗೆ ಡಾ.ವಾಮನ ನಂದಾವರ ಅವರು ಕವನಕ್ಕೆ ಮುನ್ನುಡಿ ಬರೆದು ತಮ್ಮ ಮೆಚ್ಚುಗೆ ತಿಳಿಸಿದ್ದಾರೆ.ಇವರ ಎರಡು ಪುಸ್ತಕಗಳು ಹೊರತರುವಲ್ಲಿ ಶಾಲೆಯ ಸಂಚಾಲಕರಾದ ಶ್ರೀ ಡಾ.ಜಯಪ್ರಕಾಶ್ ನಾರಾಯಣ್ ಮತ್ತು ಅಧ್ಯಾಪಕರಾದ ರಾಜಾರಾಮ್ ಇವರಿಬ್ಬರ ಪ್ರೋತ್ಸಾಹವಿದೆ ಎಂದು ವ್ಯಕ್ತಪಡಿಸಿದ್ದಾರೆ.ಇವರಿಂದ ಇನ್ನಷ್ಟು ಪುಸ್ತಕಗಳು ಹೊರಬರುವಂತಾಗಲಿ ಎಂಬುದೇ ನಮ್ಮೆಲ್ಲರ ಶುಭ ಹಾರೈಕೆ.

ಲೇಖನ: ವಿಜಯ ಕುಮಾರ್ ಶೆಟ್ಟಿ ಗಾಣದಮೂಲೆ(ದುಬೈ)

Comments are closed.