ಮಂಗಳೂರು: ರಾಜ್ಯದಲ್ಲಿ ಬರದ ಛಾಯೆ ಇದೆ. 139 ತಾಲೂಕುಗಳಲ್ಲಿ ಬರ ಇದೆ ಎಂದು ರಾಜ್ಯ ಸರ್ಕಾರ ಘೋಷಿಸಿದೆ. ಆದರೆ ಘೋಷಿಸಿರುವುದು ಬಿಟ್ಟರೆ ಬರ ಪರಿಹಾರಕ್ಕೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ದೂರಿದ್ದಾರೆ.
ಮಂಗಳೂರಿನ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿವರು, ಅಧಿಕಾರಿಗಳು ಕನಿಷ್ಠ ಬರ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿಲ್ಲ. ಬರ ಪೀಡಿತ ಪ್ರದೇಶದ ಜನರು ಗುಳೆ ಹೋಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ರಾಜ್ಯದಲ್ಲಿರುವುದು ಅತ್ಯಂತ ಬೇಜವಾಬ್ದಾರಿ ಮತ್ತು ನಿರ್ಲಕ್ಷ್ಯ ಸರ್ಕಾರ. ರಾಜ್ಯದ 139 ತಾಲೂಕುಗಳಲ್ಲಿ ಬರ ಇದೆ ಎಂದು ಘೋಷಿಸಿರುವುದು ಮಾತ್ರ ಈ ಸರ್ಕಾರದ ದೊಡ್ಡ ಸಾಧನೆಯಾಗಿದೆ ಎಂದು ಅವರು ಲೇವಾಡಿ ಮಾಡಿದರು.
ಆದಿವಾಸಿಗನ್ನು ಬಲತ್ಕಾರವಾಗಿ ಒಕ್ಕಲೆಬ್ಬಿಸಿರುವ ಕ್ರಮ ಸರಿಯಲ್ಲ :
ಕೊಡಗು ಜಿಲ್ಲೆಯ ದಿಡ್ಡಳ್ಳಿಯ ಆದಿವಾಸಿಗಳಿಗಾದ ಅನ್ಯಾಯವನ್ನು ಖಂಡಿಸಿದ ಅವರು, ಕೊಡಗು ದಿಡ್ಡಳ್ಳಿ ಆದಿವಾಸಿಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸದೆ ಅವರನ್ನು ಒಕ್ಕಲೆಬ್ಬಿಸುವುದು ಸರಿಯಲ್ಲ. ಈ ಸರ್ಕಾರಕ್ಕೆ ಮಾನವೀಯತೆ ಇದ್ದರೆ ಪರ್ಯಾಯ ವ್ಯವಸ್ಥೆಯಾಗುವ ತನಕ ಅವರನ್ನು ಇರುವಲ್ಲಿಯೇ ಇರಲು ಅವಕಾಶ ನೀಡಬೇಕು. ಬಲತ್ಕಾರವಾಗಿ ಒಕ್ಕಲೆಬ್ಬಿಸಿರುವ ಕ್ರಮ ಸರಿಯಲ್ಲ . ಏಕಏಕಿ ಆದಿವಾಸಿಗಳನ್ನು ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರ ಒಕ್ಕಲೆಬ್ಬಿಸಿರುವ ಕ್ರಮ ಅಕ್ಷಮ್ಯ. ರಾಜ್ಯ ಅರಣ್ಯ ಸಚಿವರು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ರವಿಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಪ್ರಮುಖರಾದ ಉಮನಾಥ್ ಕೊಟ್ಯಾನ್, ವೇದವ್ಯಾಸ ಕಾಮಾತ್, ಸಂಜಯ್ ಪ್ರಭು ಹಾಗೂ ಮತ್ತಿತ್ತರರು ಉಪಸ್ಥಿತರಿದ್ದರು.