ಉಡುಪಿ: ಉಡುಪಿ ಹಾಗೂ ಕಾರ್ಕಳ ಭಾಗದಲ್ಲಿ ರೌಡಿಸಂ ಹಾಗೂ ಹಫ್ತಾ ವಸೂಲಿ ಮೊದಲಾದ ಅಕ್ರಮ ಚಟುವಟಿಕೆಗಳಲ್ಲಿ ಕುಖ್ಯಾತಿ ಪಡೆದಿದ್ದ ರೌಡಿಶೀಟರ್ ವರ್ವಾಡಿ ಪ್ರವೀಣ್ ಕುಲಾಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದೇ ದಿನದಲ್ಲಿ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಹಿರಿಯಡಕದ ಕೋಟ್ನಕಟ್ಟೆ ಎಂಬಲ್ಲಿ ವರ್ವಾಡಿ ಪ್ರವೀಣನನ್ನು ಕೊಚ್ಚಿ ಕೊಲ್ಲಲಾಗಿತ್ತು.
( ವರ್ವಾಡಿ ಪ್ರವೀಣ್ ಕುಲಾಲ್)
ಆರೋಪಿಗಳಾದ ಪುತ್ತಿಗೆ ಸಂತೋಷ್ ಹಾಗೂ ಲತೇಶ್ ಬಂಧಿತ ಆರೋಪಿಗಳಾಗಿದ್ದು ಮಾಂಬೆಟ್ಟು ಸಂತೋಷ್ ಎಂಬಾತ ತಲೆಮೆರೆಸಿಕೊಂಡಿದ್ದಾನೆ. ಪುತ್ತಿಗೆ ಸಂತೋಷ್ ಹಾಗೂ ಲತೇಶನಿಗೆ ಗಾಯಗಳಾಗಿರುವ ಕಾರಣ ಇಬ್ಬರನ್ನು ಪೊಲೀಸ್ ನಿಗಾದಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಮೂವರು ಆರೋಪಿಗಳು ಹಾಗೂ ಕೊಲೆಯಾದ ಪ್ರವೀಣನ ನಡುವೆ ಆಗ್ಗಾಗೆ ಗಲಾಟೆಗಳು ನಡೆಯುತ್ತಿದ್ದು ಪ್ರವೀಣ ಜೈಲಿನಿಂದ ಬಿಡುಗಡೆಯಾದ ದಿನದಿಂದಲೂ ಆರೋಪಿಗಳು ಪ್ರವೀಣನನ್ನು ಮುಗಿಸಲು ಸ್ಕೆಚ್ ಹಾಕಿಕೊಂಡಿದ್ದರು. ಇದಕ್ಕಾಗಿ ಸೋಮವಾರವು ಹೊಂಚು ಹಾಕಿದ್ದು ಬಾರಿನಲ್ಲಿ ಕುಡಿದ ಪ್ರವೀಣನ ಮೇಲೆ ಏಕಾಏಕಿ ಅಟ್ಯಾಕ್ ಮಾಡಿ ಆತನನ್ನು ಕೊಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ.
ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಉಡುಪಿ ಜಿಲ್ಲಾ ಪೊಲೀಸ್ ಎಸ್ಪಿ ಕೆ.ಟಿ. ಬಾಲಕ್ರಷ್ಣ ಅವರ ಮಾರ್ಗದರ್ಶನದಲ್ಲಿ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದು ಇನ್ನೋರ್ವ ಆರೋಪಿಗಾಗಿ ಬಲೆ ಬೀಸಲಾಗಿದೆ.
ಇದನ್ನೂ ಓದಿರಿ:
ಹಾಡಹಗಲೇ ನಡೆಯಿತು ರೌಡಿ ಶೀಟರ್ ಪ್ರವೀಣನ ಮರ್ಡರ್: ಜೊತೆಗಿದ್ದವರೇ ಹಾಕಿದರಾ ಸ್ಕೆಚ್..?