ಕುಂದಾಪುರ: 94 ಸಿ ಹಾಗೂ 94 ಸಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕುಂದಾಪುರ ಮಿನಿವಿಧಾನ ಸೌಧದ ಎದುರು ಶುಕ್ರವಾರ ಬಿಜೆಪಿ ಪ್ರತಿಭಟಿಸಿದ್ದು ರಾಜಕೀಯ ದುರುದ್ದೇಶದಿಂದ. ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುವ ನೈತಿಕತೆ ಬಿಜೆಪಿ ಪಕ್ಷಕ್ಕಿಲ್ಲ ಎಂಬ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿಕೆಗೆ ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಟಾಂಗ್ ನೀಡಿದ್ದು ರಾಜಕೀಯ ಮಾಡುವ ಇರಾದೆ ನಮಗಿಲ್ಲ. ಬಡವರಿಗಾಗಿ ನಾವು ಪ್ರತಿಭಟಿಸಿದ್ದೇವೆಂದು ಹೇಳಿಕೆ ನೀಡಿದ್ದಾರೆ.
ಕುಂದಾಪುರ ತಾಲೂಕಿನಲ್ಲಿ ಬಡವರಿಗೆ ಹಕ್ಕುಪತ್ರ ನೀಡಿಲ್ಲ ಎಂದು ಧರಣಿ ಕುಳಿತಿದ್ದು ರಾಜಕೀಯ ಮಾಡಲು ಅಲ್ಲ. ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಹೇಳಿಕೆ ನಿಜಕ್ಕೂ ಸರಿಯಾದುದಲ್ಲ. ಅವರು ಹೇಳಿರುವ ಹಾಗೆಯೇ ಪೆಟ್ರೋಲ್ ಹಾಗೂ ಡಿಸೇಲ್ ದರ ಏರಿಕೆಯ ಬಗ್ಗೆಯೋ ಅಥವಾ ಕುಂದಾಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸುವ ಬಗ್ಗೆ ಹೋರಾಟ ನಡೆಸುವುದಾದರೇ ಅವರ ಹಕ್ಕನ್ನು ನಾನು ಗೌರವಿಸುತ್ತೇನೆ. ಬಡವರ ಪರವಾಗಿ ಧರಣಿ ನಡೆಸಿ ಹದಿನೈದು ದಿನಗಳ ಕಾಲಮಿತಿ ನೀಡಲಾಗಿದೆ. ಬಡವರ ಪರವಾಗಿ ಮಾತನಾಡುವುದು ತಪ್ಪು ಆದಲ್ಲಿ ಆ ತಪ್ಪನ್ನು ಪುನಃ ಮಾಡಲು ಸಿದ್ಧ. ಬಡವರ ಹೆಸರಿನಲ್ಲಿ ರಾಜಕೀಯ ಮಾಡುವ ಬರಗಾಲ ಬಂದಿಲ್ಲ. ಹದಿನೈದು ದಿನದಲ್ಲಿ ಹಕ್ಕುಪತ್ರ ನೀಡದಿದ್ದರೇ ಮತ್ತೆ ಹೋರಾಟ ಮುಂದುವರಿಯುತ್ತದೆ. ಫೆಬ್ರವರಿ ತಿಂಗಳಲ್ಲಿ ಹಕ್ಕುಪತ್ರ ನೀಡುವ ಬಗ್ಗೆ ತಿಳಿದಿಲ್ಲ. ಸರಕಾರಕ್ಕೆ ಹಾಗೂ ಆಡಳಿತ ನಡೆಸುವವರಿಗೆ ಇಚ್ಚಾಶಕ್ತಿಯಿದ್ದರೇ ಕೂದಲೇ ಹಕ್ಕುಪತ್ರ ನೀಡಲಿ. ಇದಾಗದಿದ್ದರೇ ಜನವರಿ ಒಂದನೇ ತಾರಿಖು ಮತ್ತೆ ಧರಣಿ ಕೂರಲಾಗುತ್ತೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ರು.