ಕುಂದಾಪುರ: 94ಸಿ ಹಾಗೂ 94ಸಿಸಿ ಹಕ್ಕುಪತ್ರ ನೀಡುವಂತೆ ಆಗ್ರಹಿಸಿ ಕುಂದಾಪುರ ಮಿನಿವಿಧಾನ ಸೌಧದ ಎದುರು ಶುಕ್ರವಾರ ಬಿಜೆಪಿ ಪ್ರತಿಭಟಿಸಿದ್ದು ಕೇವಲ ರಾಜಕೀಯ ದುರುದ್ದೇಶದಿಂದ ಮಾತ್ರವೇ ಹೊರತು ಜನರಿಗೆ ಒಳಿತು ಮಾಡುವ ಸಲುವಾಗಿ ಅಲ್ಲ. ಹಕ್ಕು ಪತ್ರಕ್ಕಾಗಿ ಹೋರಾಟ ಮಾಡುವ ನೈತಿಕತೆ ಬಿಜೆಪಿ ಪಕ್ಷಕ್ಕಿಲ್ಲ ಎಂದು ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿ ಕುಂದಾಪುರದಲ್ಲಿ ಹೇಳಿಕೆ ನೀಡಿದ್ದಾರೆ.

ಫೆಬ್ರವರಿ ಅಂತ್ಯದೊಳಗೆ ಹಕ್ಕುಪತ್ರ..
94ಸಿ ಹಕ್ಕುಪತ್ರವನ್ನು ಈ ಹಿಂದೆ ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದು ಮುಖ್ಯಮಂತ್ರಿ ಎಸ್.ಎಂ. ಕ್ರಷ್ಣಅವರು ಇರುವಾಗ ಸರಕಾರ ಜನರಿಗೆ ನೀಡಿತ್ತು, ಬಳಿಕ ಆಡಳಿತಕ್ಕೆ ಬಂದ ಬಿಜೆಪಿ ಸರಕಾರ ೫ ವರ್ಷವೂ ಹಕ್ಕು ಪತ್ರ ನೀಡಿಲ್ಲ ಮತ್ತು ಕಾನೂನು ತಿದ್ದುಪಡಿ ತಂದಿಲ್ಲ. ಬಳಿಕ ಪುನಃ ಸಿದ್ದರಾಮಯ್ಯ ನೇತ್ರತ್ವದ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ಬಳಿಕ 94ಸಿ ಹಾಗೂ 94 ಸಿಸಿ ತಿದ್ದುಪಡಿ ತಂದು ಹಕ್ಕುಪತ್ರ ನೀಡಲು ಅರ್ಜಿ ಸ್ವೀಕಾರ ಮಾಡಲಾಗಿದೆ. ಈ ಸಮಯದಲ್ಲಿ ದರ ಜಾಸ್ಥಿಯಿದ್ದ ಕಾರಣ ಶಾಸಕಾಂಗ ಪಕ್ಷದಲ್ಲಿ ಈ ಬಗ್ಗೆ ಧ್ವನಿಯೆತ್ತಿ ಬಡವರಿಗೆ ಅನುಕೂಲವಾಗುವಂತೆ ತಿದ್ದುಪಡಿ ಮಾಡಲಾಗಿದೆ. ಅಲ್ಲದೇ ಮಧ್ಯವರ್ತಿಗಳ ಹಾವಳಿ ಈ ಬಗ್ಗೆ ಜಾಸ್ಥಿಯಾದ ಕಾರಣ ಪ್ರತಿ ಪಂಚಾಯತ್ ಮಟ್ಟದಲ್ಲಿ ಸಭೆ ನಡೆಸಿ ಯಾವುದೇ ಸಮಸ್ಯೆಯಿಲ್ಲದೇ ಹಕ್ಕುಪತ್ರ ನೀಡಲು ಅನುಕೂಲ ವ್ಯವಸ್ಥೆ ಕಲ್ಪಿಸಲಾಗಿದೆ. ಪೆಬ್ರವರಿ ತಿಂಗಳಿನ ಅಂತ್ಯದೊಳಗೆ ತಾಲೂಕಿನಾದ್ಯಂತ ಈ ಹಕ್ಕುಪತ್ರ ನೀಡಲು ಈಗಾಗಲೇ ಚಿಂತನೆಯನ್ನು ಮಾಡಲಾಗಿದೆ.
ನೈತಿಕತೆಯಿಲ್ಲದೇ ಪ್ರತಿಭಟಿಸಿದ್ದಾರೆ..!
94ಸಿ ಹಕ್ಕು ಪತ್ರ ವಿಚಾರದಲ್ಲಿ ಈ ಹಿಂದೆ ಮೌನವಿದ್ದ ಬಿಜೆಪಿ ಇದೀಗಾ ಕಂದಾಯ ಇಲಾಖೆಯೆದುರು ಪ್ರತಿಭಟಿಸಿರುವುದು ಕೇವಲ ರಾಜಕೀಯ ದುರುದ್ದೇಶಕ್ಕಾಗಿದೆ. ಬಿಜೆಪಿ ಮನಸ್ಸು ಮಾಡಿದ್ದರೇ ೮ ವರ್ಷಗಳ ಹಿಂದೆಯೇ ಹಕ್ಕುಪತ್ರ ಸಿಗುತ್ತಿತ್ತು. ನೈತಿಕತೆಯಿಲ್ಲದೇ ಪ್ರತಿಭಟಿಸಿದ ಬಿಜೆಪಿ ಜನರಿಗೆ ಸ್ಪಷ್ಟನೆ ನೀಡಲಿ. ಡಿಸೇಲ್ ಹಾಗೂ ಪೆಟ್ರೋಲ್ ದರ ಏರಿಕೆಯ ಬಗ್ಗೆ ಬಿಜೆಪಿ ಪ್ರತಿಭಟಿಸಿದ್ದರೇ ನಾವು ಶಹಬ್ಬಾಸ್ ಹೇಳುತ್ತಿದ್ದೆವು ಎಂದು ಗೋಪಾಲ ಪೂಜಾರಿ ಕಿಡಿ ಕಾರಿದರು.
Comments are closed.