ಮಂಗಳೂರು : ಎತ್ತಿನಹೊಳೆ ಯೊಜನೆ ಅನುಷ್ಥಾನಗೊಂಡರೆ ಸಮಸ್ತ ಮತ್ಸೋಧ್ಯಮ ನಾಶವಾಗಲಿದೆ. ಮೀನುಗಾರಿಕೆಯನ್ನೆ ನಂಬಿದ ಕರಾವಳಿಯ ಸಾವಿರಾರು ಕುಟುಂಬಗಳು ನಿರ್ಗತಿಕರಾಗಲಿದೆ. ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಜನಜಾಗೃತಿ ಮೂಡಿಸಲು ಸಂಯೋಜಿತ ರಥಯಾತ್ರೆಯಲ್ಲಿ ಸರ್ವಮೀನುಗಾರರು ಸ್ವಾಗತಿಸಿ ಯಾತ್ರೆಯಲ್ಲಿ ಪಾಲ್ಗೋಳ್ಳಬೇಕಾಗಿ ನೇತ್ರಾವತಿ ಸಂರಕ್ಷಣೆ ಸಂಯುಕ್ತ ಸಮಿತಿಯ ಉಪಾಧ್ಯಕ್ಷರು, ಕರ್ನಾಟಕ ಮೀನುಗಾರ ಅಭಿವ್ರದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ರಾಮಚಂದರ್ ಬೈಕಂಪಾಡಿ ಸಮಸ್ತ ಮೀನುಗಾರರನ್ನು ವಿನಂತಿಸಿದ್ದಾರೆ.
ತಾಯಿ ನೇತ್ರಾವತಿ ನದಿ ತಿರುವು ಯೋಜನೆಯಿಂದ ನೇತ್ರಾವತಿ ಬರಡಾಗಲಿದೆ. ಇದರಿಂದ ಪರಮಶಿವಯ್ಯನ ವರದಿಯಲ್ಲಿ ಉಲ್ಲೇಖಿಸಿದಂತೆ, ನೇತ್ರಾವತಿ ಹಿನ್ನೀರಿನ ಪ್ರದೇಶದಲ್ಲಿ ಶೇ.47 ಜಲಚರಗಳು ನಿರ್ವಂಶವಾಗಲಿದೆ. 24 ಟಿ.ಎಂ.ಸಿ ನೀರನ್ನು ಬಯಲು ಸೀಮೆಗೆ ಬಲವಂತಾಗಿ ಹರಿಸಿದರೆ, ಸಮುದ್ರದ 24 ಟಿ.ಎಂ.ಸಿ ಉಪ್ಪು ನೀರು ನೇತ್ರಾವತಿ ಸೇರುವುದು ಪ್ರಕೃತಿ ನಿಯಮ . ಇದರಿಂದಾಗಿ ಮುಂದಿನ ದಿನಗಳಲ್ಲಿ ಪವಿತ್ರ ಕ್ಷೇತ್ರ ಸುಬ್ರಹ್ಮಣ್ಯ, ಧರ್ಮಸ್ಥಳ, ಕಟೀಲ್ ನಲ್ಲಿ ಉಪ್ಪು ನೀರಿನ ತೀರ್ಥ ಪಡೆಯುವ ರ್ದುಭಾಗ್ಯ ಬರಲಿದೆ. ಕರಾವಳಿಯ ಜನ ಜೀವನ ಸಂಪೂರ್ಣ ಉಪ್ಪು ನೀರಿನಿಂದ ಆವೃತವಾಗಲಿದೆ.
ಹಲವಾರು ಮತ್ಸ ಪ್ರಭೇದಗಳು ನದಿ ಸಮುದ್ರ ಸೇರುವ ಜಾಗ ಸಮಶೀತೋಷ್ಣ ವಲಯದಲ್ಲಿ ಮಾತ್ರ ಗರ್ಭದಾರಣೆಯಾಗಿ ಸಂತತಿ ನೀಡುವುದು ಸಹಜ. ನೇತ್ರಾವತಿ ಹಿನ್ನೀರು ಸಮುದ್ರ ಸೇರದಿದ್ದರೆ ಸಮಗ್ರ ಮತ್ಸ ಸಂಕುಲ ನಾಶವಾಗಲಿದೆ. ಎತ್ತಿನಹೊಳೆ ಯೋಜನೆಯಿಂದ ಮೀನುಗಾರಿಕೆ ನಾಶವಾಗಲಿದೆ ಎಂಬ ಭೀತಿ ಸಮಸ್ತ ಮೀನುಗಾರರನ್ನು ಜಾಗೃತಿಗೊಳಿಸಿದೆ.
ಇತ್ತೀಚೆಗೆ ನಡೆದ ಎತ್ತಿನಹೊಳೆ ಜಿಲ್ಲಾ ಬಂದ್‌ಗೆ ದ.ಕ ಜಿಲ್ಲೆಯ ಸಮಸ್ತ ಮೀನುಗಾರರು ಮೀನುಗಾರಿಕೆಗೆ ರಜೆ ಘೋಷಿಸಿ ಬಂದ್‌ಗೆ ಬೆಂಬಲ ನೀಡಿರುವುದು ಗಮರ್ನಾಹ. ಅಂತೆಯೇ ಸಂಸದ ನಳಿನ್ ಕುಮಾರ್ ಕಟೀಲ್ ಈ ರಥ ಯಾತ್ರೆಗೆ ಸರ್ವ ಮೀನುಗಾರರು ಭಾಗವಹಿಸಬೇಕೆಂದು ಮನವಿ ಮಾಡಿದಾರೆ ಎಂದು ರಾಮಚಂದರ್ ಬೈಕಂಪಾಡಿಯವರು ತಮ್ಮ ಪತ್ರಿಕೆ ಹೇಳಿಕೆಯಲ್ಲಿ ತಿಳಿಸಿದ್ದಾರೆ.