ಕರಾವಳಿ

ಹೆಜ್ಜೇನು ದಾಳಿಗೆ ವೃದ್ದೆ ಬಲಿ: ಮೂವರಿಗೆ ಗಾಯ

Pinterest LinkedIn Tumblr

kamala_ulaibettu_died

ಮಂಗಳೂರು: ಸೋಮೇಶ್ವರ ಪಂಚಾಯತ್‌ ವ್ಯಾಪ್ತಿಯ ಪಿಲಾರು ಲಕ್ಷ್ಮೀಗುಡ್ಡೆ ಎಂಬಲ್ಲಿ ಹೆಜ್ಜೇನು ಕಡಿದು ವೃದ್ಧೆಯೊಬ್ಬರು ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ.

ಉಳಾಯಿಬೆಟ್ಟು ನಿವಾಸಿ ಕಮಲಾ (65) ಸಾವನ್ನಪ್ಪಿದವರು. ಅವರ ರಕ್ಷಣೆಗೆ ಬಂದ ಅಳಿಯ ಶ್ರೀಧರ್ (49), ಮಗಳು ಲೀಲಾವತಿ (45) ಮತ್ತು ಅಳಿಯನ ತಾಯಿ ಜಾನಕಿ (70) ಎಂಬುವರು ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

kamala_ulaibettu_11

ಶ್ರೀಧರ್

ಲಕ್ಷ್ಮೀಗುಡ್ಡೆಯಲ್ಲಿರುವ ಅಳಿಯ ಶ್ರೀಧರ್ ಮನೆಗೆ ಕಮಲಾ ಎರಡು ದಿನಗಳ ಹಿಂದೆ ಬಂದಿದ್ದರು. ಗುರುವಾರ ಮಧ್ಯಾಹ್ನ ವೇಳೆ ಮನೆ ಸಮೀಪದ ಕಾಡಿಗೆ ಕಟ್ಟಿಗೆಗೆಂದು ಶ್ರೀಧರ್ ಅವರ ತಾಯಿ ಜಾನಕಿ ಹೊರಟಾಗ ಕಮಲಾ ಅವರು ಜತೆಗೆ ತೆರಳಿದ್ದರು. ಈ ವೇಳೆ ಕಟ್ಟಿಗೆಗಾಗಿ ಹುಡುಕಾಡುತ್ತಿದ್ದಂತೆ ಹೆಜ್ಜೇನಿನ ಹಿಂಡು ಕಮಲಾ ಅವರ ಮೇಲೆ ದಾಳಿ ನಡೆಸಿದೆ.. ಆಗ ಕಮಲಾ ಅವರ ಬೊಬ್ಬೆ ಕೇಳಿ ಸ್ವಲ್ಪ ದೂರದಲ್ಲಿದ್ದ ಜಾನಕಿ ಓಡಿ ಬಂದು ರಕ್ಷಿಸಲು ಮುಂದಾಗಿದ್ದರು. ಆದರೆ ಅವರ ಮೇಲು ಹೆಜ್ಜೇನು ದಾಳಿ ನಡೆಸಿವೆ. ಇಬ್ಬರ ಕೂಗು ಕೇಳಿ ಶ್ರೀಧರ್ ಮತ್ತು ಲೀಲಾವತಿ ದಂಪತಿ ಸ್ಥಳಕ್ಕೆ ಬಂದಾಗ ಅವರ ಮೇಲೂ ಹೆಜ್ಜೇನು ದಾಳಿ ನಡೆಸಿವೆ.

ಅಲ್ಲಿಂದ ಶ್ರೀಧರ್ ಅವರು ಮೂವರನ್ನು ಹೊರತಂದು, ಗಂಭೀರ ಗಾಯಗೊಂಡಿದ್ದ ಕಮಲಾ ಅವರನ್ನು ಕೂಡಲೇ ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಶ್ರೀಧರ್ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರೆ, ಜಾನಕಿ ಚಿಕಿತ್ಸೆ ಪಡೆಯುತ್ತಿದ್ದು, ಲೀಲಾವತಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Comments are closed.