ಕರಾವಳಿ

ಡಿ.11.ರಂದು ಶಿರ್ವ ನಡಿಬೆಟ್ಟು ಸೂರ್ಯ- ಚಂದ್ರ ಜೋಡುಕರೆ ಕಂಬಳ

Pinterest LinkedIn Tumblr

Kambala

ಮಂಗಳೂರು: ಕರಾವಳಿಯ ಸಾಂಪ್ರದಾಯಿಕ ಕ್ರೀಡೆಯಾಗಿರುವ ಕಂಬಳವನ್ನು ಹಲವಾರು ವರ್ಷಗಳಿಂದ ಮುಂದುವರೆಸಿಕೊಂಡು ಬರಲಾಗುತ್ತಿದೆ.ಅದರೆ ರೈತರ ಜನಪ್ರಿಯ ಕ್ರೀಡೆ ಎಂದೇ ಮಾನ್ಯತೆ ಪಡೆದ ಕಂಬಳ ಮಹೋತ್ಸವದ ಮೇಲೆ ಸುಪ್ರೀಂಕೋರ್ಟ್ ಆದೇಶ ತೂಗುಕತ್ತಿಯಂತೆ ಮುಂದುವರೆದಿದೆ ಈ ನಿಟ್ಟಿನಲ್ಲಿ ಇತಿಹಾಸ ಪ್ರಸಿದ್ಧ ಶಿರ್ವ ನಡಿಬೆಟ್ಟು ಸೂರ್ಯ- ಚಂದ್ರ ಜೋಡುಕರೆ ಕಂಬಳ ಸಾಂಪ್ರದಾಯಿಕವಾಗಿ ಕಟ್ಟುಕಟ್ಟಳೆ ರೀತಿಯಲ್ಲಿ ನಡೆಸಲು ಕಂಬಳ ವ್ಯವಸ್ಥಾಪಕರು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಕರಾವಳಿಯಲ್ಲಿ ಈ ಋತುವಿನ ಮೊದಲ ಕಂಬಳ ಸದ್ದುಗದ್ದಲವಿಲ್ಲದೆ ಡಿ.11 ರಂದು ಆರಾಧನಾ ಪದ್ಧತಿಯಂತೆ ನಡೆಯಲಿದೆ.

ಪ್ರಾಣಿಗಳನ್ನು ಕ್ರೀಡೆ ಮತ್ತು ಮನರಂಜನೆ ಉದ್ದೇಶಕ್ಕಾಗಿ ಬಳಸಿ ಹಿಂಸಿಸಬಾರದು ಎಂಬ ಸುಪ್ರೀಂ ಕೋರ್ಟ್ ತೀರ್ಪಿನ ಹಿನ್ನಲೆಯಲ್ಲಿ ಕಂಬಳ ಪ್ರಿಯರು ಆತಂಕಕ್ಕೆ ಸಿಲುಕಿದ್ದಾರೆ.

ಕಂಬಳಕ್ಕೆ ನ್ಯಾಯಾಲಯ ತಡೆಯೊಡ್ಡಿರುವುದರಿಂದ ಕಂಬಳ ಯಜಮಾನರು ಕೂಡಾ ಕೋಣಗಳ ತಾಲೀಮುಗಳನ್ನು ಸ್ಥಗಿತಗೊಳಿಸಿದ್ದಾರೆ. ಶಿರ್ವದಲ್ಲಿ ನಡೆಯುವ ಕಂಬಳದಲ್ಲಿ ಯಾವುದೇ ಓಟ ಸ್ಪರ್ಧೆಗಳು ನಡೆಯುವಂತಿಲ್ಲ. ಇತರ ಬೇರೆ ಕೋಣಗಳಿಗೆ, ಪ್ರೇಕ್ಷಕರಿಗೆ ಆಹ್ವಾನವಿರುವುದಿಲ್ಲ. ಗದ್ದೆಗಿಳಿದ ಕೋಣಗಳಿಗೆ ಬೆತ್ತದ ರುಚಿ ತೋರಿಸದೆ ಅಹಿಂಸಾತ್ಮಕವಾಗಿ ಓಡಿಸಲಾಗುವುದು. ಈ ನಿಟ್ಟಿನಲ್ಲಿ ಐತಿಹಾಸಿಕ ಕಂಬಳ ಸರಳವಾಗಿ ನಡೆಯಲಿದೆ ಎಂದು ನಡಿಬೆಟ್ಟು ಮನೆತನದ ಶಶಿಧರ್ ಶೆಟ್ಟಿ ತಿಳಿಸಿದ್ದಾರೆ.

ಕಂಬಳವು ಕರಾವಳಿಯ ಮಾನ್ಯತೆ ಪಡೆದ ಕ್ರೀಡೆಗಳಲ್ಲಿ ಮೊದಲ ಸ್ಥಾನದಲ್ಲಿದೆ. ಶಿರ್ವ ಕಂಬಳವು ಈ ಹಿಂದೆ ಹೊನಲು ಬೆಳಕಿನ ವ್ಯವವಸ್ಥೆಯೊಂದಿಗೆ 2ದಿನಗಳ ಕಾಲ ನಡೆಯುತ್ತಿತ್ತು.

ಮೂರು ವರ್ಷದ ಹಿಂದೆ ಶಿರ್ವ ಕಂಬಳದಲ್ಲಿ 80 ಜತೆ ಕೋಣಗಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದವು. ನಿಷೇಧದ ಭೀತಿ ಎದುರಾದ ಕಾರಣ ಕಳೆದ ವರ್ಷ 25 ಜತೆ ಕೋಣ ಗಳು ಮಾತ್ರ ಪಾಲ್ಗೊಂಡಿದ್ದವು. ಈ ಬಾರಿ ನಡಿಬೆಟ್ಟು ಮನೆಯ ಒಂದು ಜತೆ ಕೋಣ ಕಂಬಳ ಗದ್ದೆಗೆ ಇಳಿಯಲಿದೆ ಎಂದು ಕಂಬಳ ಸಮಿತಿಯ ಸದಸ್ಯ ಮಟ್ಟಾರು ರತ್ನಾಕರ ಹೆಗ್ಡೆ ತಿಳಿಸಿದ್ದಾರೆ.

Comments are closed.