ಕರಾವಳಿ

ಪ್ರಧಾನಿ ಮೋದಿ ಕ್ರಮಕ್ಕೆ ಶ್ಲಾಘನೆ; ಗಂಗೊಳ್ಳಿಯಲ್ಲಿ ಸಂಭ್ರಮ ದಿನ, ಸಹಿ ಸಂಗ್ರಹ ಅಭಿಯಾನ

Pinterest LinkedIn Tumblr

ಕುಂದಾಪುರ: 500 ಮತ್ತು ಒಂದು ಸಾವಿರ ರೂ. ಮುಖಬೆಲೆಯ ನೋಟುಗಳನ್ನು ರದ್ದು ಮಾಡಿರುವ ಪ್ರಧಾನಿ ನರೇಂದ್ರ ಮೋದಿಯವರ ನಿರ್ಧಾರವನ್ನು ಬೆಂಬಲಿಸಿ ಗಂಗೊಳ್ಳಿಯ ನಮೋ ಅಭಿಮಾನಿ ಬಳಗ ಮತ್ತು ಭಾರತೀಯ ಜನತಾ ಪಕ್ಷದ ವತಿಯಿಂದ ಸೋಮವಾರ ಗಂಗೊಳ್ಳಿಯ ಮ್ಯಾಂಗನೀಸ್ ರೋಡ್ ವಠಾರದಲ್ಲಿ ಸಂಭ್ರಮ ದಿನ ಮತ್ತು ಸಹಿ ಸಂಗ್ರಹ ಅಭಿಯಾನ ಕಾರ್ಯಕ್ರಮವನ್ನು ನಡೆಸಲಾಯಿತು.

gangolli_sambhrama_dina-1 gangolli_sambhrama_dina-2

ಪಟಾಕಿ ಸಿಡಿಸಿ ಸಂಭ್ರಮಿಸಿದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮಿಸಿದರು. ಈ ಸಂದರ್ಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯೆ ಶೋಭಾ ಜಿ.ಪುತ್ರನ್, ಭ್ರಷ್ಟಾಚಾರ ಹಾಗೂ ಕಾಳಧನ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಕೈಗೊಂಡ ಕಠಿಣ ನಿರ್ಣಯದಿಂದ ಭ್ರಷ್ಟಾಚಾರಿಗಳು ಹಾಗೂ ಕಪ್ಪುಹಣ ಇರುವವರು ಕಂಗಾಲಾಗಿದ್ದು ದೇಶದಲ್ಲಿ ಆಕ್ರೋಶ ದಿವಸ್ ಆಚರಣೆಗೆ ಕರೆ ಕೊಟ್ಟಿದ್ದಾರೆ. ನರೇಂದ್ರ ಮೋದಿಯವರು ಈ ವಿಚಾರದಲ್ಲಿ ಕೈಗೊಂಡ ಕ್ರಮವನ್ನು ದೇಶದ ಶೇ.90 ಮಂದಿ ಸ್ವಾಗತಿಸಿ ಪ್ರಧಾನಿಯವರ ಬೆಂಬಲಕ್ಕೆ ನಿಂತಿದ್ದಾರೆ. ಆದರೂ ಸಂಸತ್ ಕಲಾಪಗಳಿಗೆ ಅಡ್ಡಿಪಡಿಸುವ ಹಾಗೂ ಜನರಿಗೆ ಇನ್ನಷ್ಟು ತೊಂದರೆ ನೀಡಲು ಪ್ರತಿಪಕ್ಷಗಳು ಪ್ರಯತ್ನಿಸುತ್ತಿರುವುದು ಖಂಡನೀಯ. ನರೇಂದ್ರ ಮೋದಿಯವರ ಇಂತಹ ಕ್ರಮಗಳಿಗೆ ಭಾರತೀಯರೆಲ್ಲರೂ ಕೈಜೋಡಿಸಿ ಸಮೃದ್ಧ ಭಾರತ ನಿರ್ಮಾಣಕ್ಕೆ ಮುಂದಾಗಬೇಕು ಎಂದರು.

ತಾಪಂ ಸದಸ್ಯ ಸುರೇಂದ್ರ ಖಾರ್ವಿ, ಬಿಜೆಪಿ ಮುಖಂಡ ಉಮಾನಾಥ ದೇವಾಡಿಗ ಮಾತನಾಡಿ ನರೇಂದ್ರ ಮೋದಿಯವರ ಕ್ರಮವನ್ನು ಸಮರ್ಥಿಸಿಕೊಂಡರು. ಪ್ರಧಾನಿಯವರ ಈ ಕಾರ್ಯದಲ್ಲಿ ಕೈಜೋಡಿಸಿದ ಬ್ಯಾಂಕಿನ ಸಿಬ್ಬಂದಿಗಳ ಕ್ರಮವನ್ನು ಶ್ಲಾಘಿಸಿ ಅಭಿನಂದಿಸಿದರು.

ಗಂಗೊಳ್ಳಿ ಬಿಜೆಪಿ ಸ್ಥಾನೀಯ ಸಮಿತಿ ಕಾರ್ಯದರ್ಶಿ ಬಿ.ಗಣೇಶ ಶೆಣೈ, ಗ್ರಾಪಂ ಸದಸ್ಯರಾದ ಬಿ.ಲಕ್ಷ್ಮೀಕಾಂತ ಮಡಿವಾಳ, ವೈ.ಶ್ರೀನಿವಾಸ ಖಾರ್ವಿ, ಕೇಶವ ಖಾರ್ವಿ, ಬಿಜೆಪಿ ಮುಖಂಡರಾದ ರವೀಂದ್ರ ಪಟೇಲ್, ದಿಲೀಪ ಖಾರ್ವಿ, ಶ್ರೀನಿವಾಸ ಎಂ., ಅಶೋಕ್ ಎನ್.ಡಿ., ರತ್ನಾಕರ ಗಾಣಿಗ, ಸರ್ವೋತ್ತಮ ಕಿಣಿ, ಸತೀಶ ಎಂ.ಖಾರ್ವಿ, ಮಂತಿ ಶ್ರೀನಿವಾಸ ಖಾರ್ವಿ, ರಾಘವೇಂದ್ರ ದೇವಾಡಿಗ, ಶ್ರೀಧರ ಶೇರುಗಾರ್, ಮಹೇಶ ಅಯ್ಯಪ್ಪ, ಯಶವಂತ ಖಾರ್ವಿ, ಹೆಗ್ಡೆ ಆನಂದ ಖಾರ್ವಿ, ಗಣೇಶ ಕಿಣಿ, ಶ್ರೇಯಸ್ ಶೆಣೈ, ವಿಜೇಶ್ ಪಡಿಯಾರ್ ಮೊದಲಾದವರು ಉಪಸ್ಥಿತರಿದ್ದರು.

ಬಳಿಕ ಗಂಗೊಳ್ಳಿ ಸಿಂಡಿಕೇಟ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್ ಶಾಖೆಗಳಿಗೆ ತೆರಳಿ ಬ್ಯಾಂಕ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಪುಷ್ಪ ನೀಡಿ ಸಿಹಿ ಹಂಚಿ ಅಭಿನಂದಿಸಿದರು.
———–

Comments are closed.