ಕರಾವಳಿ

ಹತ್ಯೆಗೀಡಾದ ಭಾಸ್ಕರ್‌‌ ಶೆಟ್ಟಿ ಆಸ್ತಿ ವಿವಾದ : ಶೆಟ್ಟಿ ಸಂಬಂಧಿಕರಿಂದ ಹೋಟೆಲ್ ವ್ಯವಹಾರಕ್ಕೆ ಅಡ್ಡಿ – ರಾಜೇಶ್ವರಿ ಶೆಟ್ಟಿ ಪರ ವಕೀಲರ ಅರೋಪ

Pinterest LinkedIn Tumblr

bhaskar_shetty_against_1

ಮಂಗಳೂರು, ನವೆಂಬರ್.23: ಉಡುಪಿ ಜಿಲ್ಲೆಯನ್ನೇ ಬೆಚ್ಚಿ ಬಿಳಿಸಿದಂತಹ ಕೊಲೆ ಪ್ರಕರಣವೊಂದರಲ್ಲಿ ಹೆಂಡತಿ ಮಗನಿಂದಲೇ ಹತ್ಯೆಯಾಗಿದ್ದಾರೆ ಎನ್ನಲಾದ ಉದ್ಯಮಿ ಭಾಸ್ಕರ್‌‌ ಶೆಟ್ಟಿಯವರ ಆಸ್ತಿ ವಿಚಾರದಲ್ಲಿ ಮತ್ತೆ ವಿವಾದ ತಲೆದೋರಿದ್ದು, ನ್ಯಾಯಾಲಯದ ಆದೇಶವನ್ನೇ ಉಲ್ಲಂಘಿಸಿ ಭಾಸ್ಕರ ಶೆಟ್ಟಿಯವರ ಸಂಬಂಧಿಕರು ಹೋಟೆಲ್ ವ್ಯವಹಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಭಾಸ್ಕರ್‌‌ ಶೆಟ್ಟಿಯವರ ಪತ್ನಿ ರಾಜೇಶ್ವರಿ ಶೆಟ್ಟಿ ಪರ ವಕೀಲರಾದ ಎಂ. ಚಿದಾನಂದ ಕೆದಿಲಾಯ ಆರೋಪಿಸಿದ್ದಾರೆ.

bhaskar-shetty_murder_case

ಭಾಸ್ಕರ ಶೆಟ್ಟಿ ಮತ್ತು ರಾಜೇಶ್ವರಿ ಶೆಟ್ಟಿ

ಮಂಗಳೂರಿನ ಪತ್ರಿಕಾ ಭವನದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೃತ ಭಾಸ್ಕರ ಶೆಟ್ಟಿ ಮತ್ತು ರಾಜೇಶ್ವರಿ ಶೆಟ್ಟಿ ಪಾಲುದಾರರಾಗಿರುವ ದುರ್ಗಾ ಇಂಟರ್ ನ್ಯಾಷನಲ್ ಸಂಸ್ಥೆಯ ವ್ಯವಹಾರದಲ್ಲಿ ಭಾಸ್ಕರ ಶೆಟ್ಟಿಯವರ ಸಂಬಂಧಿಕರು ಹಸ್ತಕ್ಷೇಪ ಮಾಡುತ್ತಿದ್ದಾರೆ. ದುರ್ಗಾ ಇಂಟರ್ ನ್ಯಾಷನಲ್ ಹಾಗೂ ವಸತಿಗೃಹದ ವ್ಯವಹಾರಕ್ಕೆ ಸಂಬಂಧಿಸಿದಂತೆ ನಿರ್ಬಂಧಕಾಜ್ಞೆ (ಇಂಜಂಕ್ಷನ್) ನೀಡುವಂತೆ ಕೋರಿ ಉಡುಪಿ ನ್ಯಾಯಾಲಯದ ಮುಂದೆ ಅರ್ಜಿ ಹಾಕಲಾಗಿದ್ದು, ಇದನ್ನು ಪುರಸ್ಕರಿಸಿರುವ ನ್ಯಾಯಾಲಯವು ಉಡುಪಿ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲಿನ ವ್ಯವಹಾರಕ್ಕೆ ಸಂಬಂಧಿಸಿದಂತೆ ಹತ್ಯೆಯಾದ ಉದ್ಯಮಿ ಭಾಸ್ಕರ್‌‌ ಶೆಟ್ಟಿಯವರ ತಾಯಿ ಮತ್ತು ಇತರರನ್ನು ಪ್ರತಿಬಂಧಿಸಿ ಉಡುಪಿ ಪ್ರಧಾನ ಸಿವಿಲ್ ಜಡ್ಜ್ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ನವೆಂಬರ್ 10ರಂದು ಪ್ರತಿಬಂಧಕಾಜ್ಞೆ ಹೊರಡಿಸಿದೆ. ಆದರೂ ಭಾಸ್ಕರ ಶೆಟ್ಟಿಯವರ ಸಂಬಂಧಿಕರು ಹೋಟೆಲ್ ವ್ಯವಹಾರಕ್ಕೆ ಅಡ್ಡಿಯುಂಟು ಮಾಡುತ್ತಿದ್ದಾರೆ ಎಂದು ಆಪಾದಿಸಿದರು.

bhaskar_shetty_against_2

ನ್ಯಾಯವಾದಿ ಅರುಣ್ ಬಂಗೇರ ಆರೋಪ :

ರಾಜೇಶ್ವರಿ ಶೆಟ್ಟಿಯವರ ತಾಯಿ ಸುಮತಿ ರಘುರಾಮ ಶೆಟ್ಟಿಯವರು ತಮ್ಮ ಮಗಳಿಗೆ ನೀಡಿದ ಜಾಗದಲ್ಲಿ ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್ ನಿರ್ಮಿಸಲಾಗಿದೆ. ಜೊತೆಗೆ ಹೋಟೆಲನ್ನ ಪಾಲುದಾರರೂ ಹಾಗೂ ಆಡಳಿತ ಟ್ರಸ್ಟಿಯಾಗಿ ರಾಜೇಶ್ವರಿಯವರೇ ಆಗಿರುವುದರಿಂದ ಇದರ ಸಂಪೂರ್ಣ ಆಡಳಿತವನ್ನು ಭಾಸ್ಕರ್ ಶೆಟ್ಟಿಯವರ ತಾಯಿ ಗುಲಾಬಿ ಶೆಟ್ಟಿ ಹಾಗೂ ಅವರ ಸಂಬಂಧಿಕರು ಕೇಳುವುದರಲ್ಲಿ ಯಾವುದೇ ನ್ಯಾಯವಿಲ್ಲ.

ಜೊತೆಗೆ ಹೋಟೆಲ್ ನಿರ್ಮಾಣದ ಸಂದರ್ಭ ಆದಿ ಉಡುಪಿ ಶಾಖೆಯ ಕರ್ನಾಟಕ ಬ್ಯಾಂಕಿನಿಂದ 2.25 ಕೋಟಿ ರೂ. ಸಾಲ ಪಡೆದುಕೊಂಡಿದ್ದು, ಅದರ ಸಾಲವನ್ನೂ ತೀರಿಸಲಿದೆ. ಇದೀಗ ರಾಜೇಶ್ವರಿ ಶೆಟ್ಟಿಯವರು ನ್ಯಾಯಾಂಗ ಬಂಧನಲ್ಲಿರುವುದರಿಂದ ಇದರ ಉಸ್ತುವಾರಿ ತಮ್ಮ ಸೋದರಿ ರೇಣುಕಾ ವಿಶ್ವನಾಥ್ ರೈಯವರಿಗೆ ವಹಿಸಿದ್ದಾರೆ. ಸದ್ಯ ಹೋಟೆಲ್ ನಿರ್ವಹಣೆಯನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಆದರೆ, ನಿರ್ವಹಣೆಗೆ ಭಾಸ್ಕರ್ ಶೆಟ್ಟಿಯವರ ಮನೆಯವರು ಅಡ್ಡಿಯುಂಟು ಮಾಡುತ್ತಿರುವುದಲ್ಲದೆ, ಹೊಟೇಲ್ ವ್ಯವಹಾರವನ್ನು ಬಲಾತ್ಕಾರವಾಗಿ ವಶಪಡಿಸಿಕೊಂಡಿದ್ದಾರೆಂದು ನ್ಯಾಯವಾದಿ ಅರುಣ್ ಬಂಗೇರ ಆರೋಪಿಸಿದರು.

ಇದರ ವಿರುದ್ಧ ರಾಜೇಶ್ವರಿಯವರ ತಾಯಿ ಸುಮತಿ ರಘುನಾಥ ಶೆಟ್ಟಿ ತಮ್ಮ ಪ್ರತಿವಾದಿಗಳಾದ ಗುರುಪ್ರಸಾದ್ ಶೆಟ್ಟಿ, ಜೋಗು ಶೆಟ್ಟಿ, ಜಯಂತಿ ಶೆಟ್ಟಿ, ಚಂದ್ರಶೇಖರ್ ಶೆಟ್ಟಿ ಹಾಗೂ ನಿರ್ಮಲಾ ಶೆಟ್ಟಿಯವರ ವಿರುದ್ಧ ಪ್ರತಿಬಂಧಕಾಜ್ಞೆ ಜಾರಿಗೆ ಉಡುಪಿ ಪ್ರಧಾನ ಸಿವಿಲ್ ಜಡ್ಜ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯಕ್ಕೆ ದಾವೆ ಹೂಡಿದ್ದರು. ನ್ಯಾಯಾಲಯ ಕೂಡಾ ಇವರ ಪರವಾಗಿ ಆದೇಶ ಹೊರಡಿಸಿದ್ದರೂ ಪ್ರತಿವಾದಿಗಳು ನ್ಯಾಯಾಲಯದ ಆದೇಶವನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಅವರು ದೂರಿದರು.

bhaskar_shetty_against_3

ಸಹೋದರಿ ರೇಣುಕಾ ವಿಶ್ವನಾಥ್ ರೈ ಆರೋಪ :

ಹತ್ಯೆ ಪ್ರಕರಣ ಇನ್ನೂ ತನಿಖೆಯ ಹಂತದಲ್ಲಿ ಇದೆ. ಅದು ಇನ್ನೂ ವಿಚಾರಣೆಗೆ ಬಾಕಿ ಇದೆ. ಇದರ ಜೊತೆಗೆ, ಭಾಸ್ಕರ ಶೆಟ್ಟಿ ಬರೆದಿದ್ದಾರೆ ಎನ್ನಲಾದ ವೀಲ್ ಕೂಡ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿಲ್ಲ. ಇದರ ಸತ್ಯಾಸತ್ಯತೆ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಮಧ್ಯೆ ವ್ಯವಹಾರಕ್ಕೆ ಸಂಬಂಧಿಸಿದಂತೆ ದೂರುದಾರರು ಅನಗತ್ಯವಾಗಿ ವ್ಯವಹಾರದಲ್ಲಿ ಮೂಗು ತೂರಿಸುತ್ತಿದ್ದಾರೆ ಎಂದು ಹತ್ಯಾ ಆರೋಪಿ ರಾಜೇಶ್ವರಿ ಶೆಟ್ಟಿ ಸಹೋದರಿ ರೇಣುಕಾ ವಿಶ್ವನಾಥ್ ರೈ ಆರೋಪಿಸಿದ್ದಾರೆ.

ಉಡುಪಿಯಲ್ಲಿ ಹೋಟೆಲ್, ಜಿಮ್ ಹಾಗೂ ಮನೆ ಸೇರಿದಂತೆ ಸುಮಾರು 10ಕೋಟಿ ರೂ. ಆಸ್ತಿ ಇರಬಹುದು. ಆದರೆ, ಅವುಗಳಿಗೆ 6.5ಕೋಟಿ ರೂ. ಸಾಲವಿದೆ. ಇನ್ನು ಭಾಸ್ಕರ ಶೆಟ್ಟಿಯವರ ಸೌದಿ ಅರೇಬಿಯಾದಲ್ಲಿರುವ ಆಸ್ತಿ ಅವರ ಅಣ್ಣ ತಮ್ಮಂದಿರ ಹೆಸರಿಗೆ ಇದೆ ಅಂತ ಹೇಳುತ್ತಾರೆ. ಜೊತೆಗೆ ಉಡುಪಿಯಲ್ಲಿರುವ ಆಸ್ತಿ ಅವರ ತಾಯಿ ಹೆಸರಿಗೆ ವೀಲು ನಾಮೆ ಬರೆದಿದ್ದಾರೆ ಎಂದು ಹೇಳುತ್ತಾರೆ. ಆದರೆ, ಈವರೆಗೆ ಅಂತಹ ಯಾವುದೇ ವೀಲು ನಾಮೆಯನ್ನು ಪ್ರತಿವಾದಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿಲ್ಲ ಎಂದು ಹೇಳಿದ್ದಾರೆ.
ಇನ್ನು ಭಾಸ್ಕರ್ ಶೆಟ್ಟಿಯವರು ಕೊಲೆಯಾಗಿದ್ದಾರೆಂಬುದೇ ಸಾಬೀತಾಗಿಲ್ಲ. ಹಾಗೊಂದು ವೇಳೆ ರಾಜೇಶ್ವರಿ ಶೆಟ್ಟಿಯವರಿಗೆ ಶಿಕ್ಷೆಯಾದರೂ ಅವರ ಹೋಟೆಲ್ ಪಾಲುದಾರಿಕೆಯ ಹಕ್ಕನ್ನು ಹಾಗೂ ಆ ಜಾಗದ ಹಕ್ಕನ್ನು ಯಾರಿಂದಲೂ ಕಸಿದುಕೊಳ್ಳಲಾಗುವುದಿಲ್ಲ ಎಂದು ರೇಣುಕಾ ವಿಶ್ವನಾಥ್ ರೈ ಹೇಳಿದರು.

ಗೋಷ್ಠಿಯಲ್ಲಿ ನ್ಯಾಯವಾದಿ ಅರುಣ್ ಶೆಟ್ಟಿ ಉಪಸ್ಥಿತರಿದ್ದರು.

Comments are closed.