ಉಡುಪಿ: ಇಲ್ಲಿನ ಜನರು ತಮ್ಮ ತೋಟಕ್ಕೆ ಕಾಲಿಡಲು ಭಯಪಡ್ತಾರೆ. ಬೆಳೆದ ಅಡಿಕೆ ತೆಂಗು ಬೆಳೆಗಳ ಸಂಗ್ರಹಕ್ಕೂ ಹೋಗಲು ರೈತರಿಗೆ ಭಯ. ಯಾಕೇ ಅಂತೀರಾ ಈ ಸ್ಟೋರಿ ಓದಿ..
ಹೀಗೆ ಹಚ್ಚ ಹಸಿರು ಬಣ್ಣದ ಎಲೆಗಳ ನಡುವೆ ಹಳದಿ ಬಣ್ಣದ ಹೂ… ನಿಜಕ್ಕೂ ನೋಡಲು ಅಲಂಕಾರಿಕ ಪುಷ್ಪದ ರೀತಿ ಕಾಣುವ ಈ ಗಿಡ ರೈತರ ಮಟ್ಟಿಗೆ ಶಾಪವಾಗಿ ಪರಿಣಮಿಸಿದೆ. ಹೀಗೆ ತೋಟದಲ್ಲೆಲ್ಲಾ ವ್ಯಾಪಿಸಿದ ಈ ಗಿಡ ರೈತರ ಪಾಲಿಗೆ ಸಿಕ್ಕಾಪಟ್ಟೆ ಡೆಂಜರ್. ಕುಂದಾಪುರ ತಾಲೂಕಿನ ಪಶ್ಚಿಮ ಘಟ್ಟ ತಪ್ಪಲು ಪ್ರದೇಶವಾದ ಹಳ್ಳಿಹೊಳೆ, ಹೊಸಂಗಡಿ, ಸಿದ್ದಾಪುರ, ಉಳ್ಳೂರು, ಆಜ್ರಿ, ಕೊಡ್ಲಾಡಿ, ಮಚ್ಚಟ್ಟು, ಶೇಡಿಮನೆ ಸೇರಿದಂತೆ ಬಹುತೇಕ ಭಾಗಗಳಲ್ಲಿ ಕಂಡುಬರುವ ಈ ಸಸ್ಯಕ್ಕೆ ಜನರು ಧನಲಕ್ಷ್ಮೀ ಎಂದು ಕರಿತಾರೆ. ಆದ್ರೇ ರೈತನ ತೋಟಕ್ಕೆ ಕಲಿಟ್ಟ ಬಳಿಕ ಮಾರಕವಾಗಿ ಪರಿಣಮಿಸುವ ಈ ಸಸ್ಯ ಹೆಸರಿಗೆ ವಿರುಧ್ಧವಾಗಿದೆ. ಯಾಕೇಂದ್ರೇ ಈ ಸಸ್ಯ ತೋಟದಲ್ಲಿ ಬೆಳೆದರೇ ರೈತನ ಧನ ಸಂಪತ್ತು ಹೆಚ್ಚಿಸುವ ಬದಲಾಗಿ ಅದಕ್ಕೆ ಕಡಿವಾಣ ಹಾಕ್ತದೆ. ಮೊದಮೊದಲು ಇತರೇ ಭಾಗಗಳಲ್ಲಿ ಈ ಸಸ್ಯವನ್ನು ಅಲಂಕಾರಕ್ಕಾಗಿ ಬಳಸಿದ್ದೂ ಇದೆಯಂತೆ.
ಆಡುಮುಟ್ಟದ ಸೊಪ್ಪಿಲ್ಲ ಎಂಬ ಗಾದೆಯಿದೆ. ಆದರೇ ಧನಲಕ್ಷ್ಮೀ ಸಸ್ಯವನ್ನು ಆಡುಕೂಡ ತಿನ್ನಲ್ಲ ಎಂಬುದು ಮತ್ತೊಂದು ವಿಶೇಷ. ಅಡಿಕೆ ಹಾಗೂ ತೆಂಗು ಬೆಳೆಯುವ ತೋಟದಲ್ಲಿ ಬಹುತೇಕವಾಗಿ ಬೆಳೆಯುವ ಈ ಸಸ್ಯ ನಾಲ್ಕು ಇಂಚಿಗೊಂದು ಗಂಟು ಬಿಡುತ್ತದೆ. ಆ ಗಂಟಿನಲ್ಲಿಯೂ ಬೇರು ಬಂದು ಮತ್ತೊಂದು ಗಿಡವಾಗಿ ಬಳ್ಳಿಯಂತೆ ಹರಡಿ ಹಬ್ಬುತ್ತದೆ. ನೀರಿನ ಅವಶ್ಯಕತೆ ಇಲ್ಲದೇ ಬದುಕುವ ಈ ಸಸ್ಯ ಬೆಳೆದಲ್ಲಿ ತಂಪು ವಾತಾವರಣ ಇರುವ ಕಾರಣ ಹಾವು, ವಿಷಜಂತುಗಳು ಹಾಗೂ ಚಿಕ್ಕಪುಟ್ಟ ಕಾಡು ಪ್ರಾಣಿಗಳ ವಾಸಕ್ಕೆ ಯೋಗ್ಯವಾಗಿದೆ. ರೈತರು ತೆಂಗಿನ ಕಾಯಿ ಅಥವಾ ಅಡಿಕೆ ಸಂಗ್ರಹಕ್ಕೆ ಬರುವಾಗ ತುಂಬಾನೇ ಹುಷಾರಾಗಿ ಮೈಯೆಲ್ಲಾ ಕಣ್ಣಾಗಿಸಿಕೊಂಡು ಇರಬೇಕಾದ ಅನಿವಾರ್ಯತೆ ಕೂಡ ಇದೆ. ಇನ್ನು ಇದರ ನಿವಾರಣೆಗಾಗಿ ಕೆಲವರು ಆಡು-ಕುರಿ ಬೆಳೆದರೂ ಕೂಡ ಅವುಗಳು ಇದನ್ನು ತಿನ್ನುತ್ತಿಲ್ಲ.
ಇನ್ನು ಈ ಧನಲಕ್ಷ್ಮೀ ಸಸ್ಯವು ಕಳೆ ಜಾತಿಯದ್ದಾಗಿದ್ದು ಇದು ಬಹುವಾರ್ಷಿಕ ಕಳೆಯಾಗಿದೆ. ಬೀಜ ಹಾಗೂ ಗಿಡದ ಅಂಗಗಳಿಂದಲೂ ಈ ಸಸ್ಯ ಬಳ್ಳಿಯ ಮಾದರಿಯಲ್ಲಿ ಪಸರಿಸುತ್ತದೆ. ಪಶ್ಚಿಮ ಘಟ್ಟದಲ್ಲಿ ಸಾವಯವ ಅಂಶ ಹಾಗೂ ಪೌಷ್ಟಿಕಾಂಶ ಜಾಸ್ಥಿಯಾಗಿರುವ ಕಾರಣ ಇದು ಈ ಬೆಟ್ಟು ಪ್ರದೇಶದಲ್ಲಿನ ನೀರು ಬೆಳಕನ್ನು ಆವರಿಸಿಕೊಂಡು ನೆರಳು ಜಾಗದಲ್ಲಿ ವ್ಯಾಪಕವಾಗಿ ಬೆಳೆಯುತ್ತದೆ. ಈ ಸಸ್ಯ ಹೂ ಬಿಡುವ ಮೊದಲು ಕಳೆನಾಶಕ ಬಳಸಿ ಅದನ್ನು ನಿಯಂತ್ರಣ ಮಾಡಬಹುದು ಎಂದು ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಷಯ ತಜ್ಙರಾದ ಡಾ. ಎನ್.ವಿ. ನವೀನ್ ಹೇಳಿದ್ರು.
ಒಟ್ಟಿನಲ್ಲಿ ಧನಲಕ್ಷ್ಮೀ ಹೆಸರಿನ ಕಳೆ ಬೆಳೆದಲ್ಲಿ ರೈತನಿಗೆ ಧನಯೋಗ ಕ್ಷೀಣಿಸುತ್ತಿರುವುದು ಮಾತ್ರ ಸುಳ್ಳಲ್ಲ.
————————————-
ವರದಿ, ಚಿತ್ರ- ಯೋಗೀಶ್ ಕುಂಭಾಸಿ