ಮಂಗಳೂರು, ನ.20: ದಿ. ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜನ್ಮ ಶತಾಬ್ದಿಯನ್ನು ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ವಿಶಿಷ್ಟವಾಗಿ ಆಚರಿಸಿದರು. ನಗರದ ವಿವಿಧ ಅಶ್ರಮಗಳಿಗೆ ಹಣ್ಣು ಹಂಪಲು ವಿತರಿಸಿದ ಪೂಜಾರಿಯವರು ಇದೇ ಸಂದರ್ಭದಲ್ಲಿ ನಗರದ ಕೆಲವು ಅಶ್ರಮಗಳಿಗೆ ತಮ್ಮ ವೈಯಕ್ತಿಕ ನೆಲೆಯಿಂದ ದೇಣಿಗೆಯನ್ನು ನೀಡಿದರು.
ಅವರು ಜೆಪ್ಪು ಸೆಮಿನರಿಯ ಪ್ರಶಾಂತಿ ನಿಲಯದ ಆಶ್ರಮವಾಸಿಗಳಿಗೆ, ಜೆಪ್ಪು ಸಂತ ಅಂತೋನಿಯವರ ( ಚಾಪೆಲ್) ಆಶ್ರಮ, ಕೊಣಾಜೆಯ ಅಭಯಾಶ್ರಮ ಹಾಗೂ ಕುಲಶೇಖರದ ಸಾನಿಧ್ಯ ವಿಶಿಷ್ಟ ಮಕ್ಕಳ ಕೇಂದ್ರ ಹಾಗೂ ಜಿನತ್ ಭಕ್ಷ್ ಯತೀಂ ಖಾನ್ ಗೆ ತೆರಳಿದ ಹಣ್ಣು ಹಂಪಲುಗಳನ್ನು ವಿತರಿಸಿದರು.
ಜೆಪ್ಪು ಸೆಮಿನರಿಯ ಪ್ರಶಾಂತಿ ನಿಲಯದ ಆಶ್ರಮಕ್ಕೆ ರೂ.15 ಸಾವಿರ, ಜೆಪ್ಪು ಸಂತ ಅಂತೋನಿಯವರ ( ಚಾಪೆಲ್) ಆಶ್ರಮಕ್ಕೆ ರೂ. 10 ಸಾವಿರ, ಸಾನಿಧ್ಯ ವಿಶಿಷ್ಟ ಮಕ್ಕಳ ಕೇಂದ್ರಕ್ಕೆ ರೂ. 20 ಸಾವಿರ ಹಾಗೂ ನಗರದ ಬಂದರ್ ನಲ್ಲಿರುವ ಜಿನತ್ ಭಕ್ಷ್ ಯತೀಂ ಖಾನ್ ಗೆ ರೂ. 15 ಸಾವಿರ ದೇಣಿಗೆಯನ್ನು ನೀಡಿದರು.
ಜಿನತ್ ಭಕ್ಷ್ ಯತೀಂ ಖಾನ್ ಗೆ ಪೂಜಾರಿಯವರು ಭೇಟಿ ನೀಡಿದ ಸಂದರ್ಭದಲ್ಲಿ ನಗರದ ಮತ್ಸ್ಯ ಉದ್ಯಮಿ ಹಾಗೂ ಕಾಂಗ್ರೇಸ್ನ ಅಲ್ಪ ಸಂಖ್ಯಾತ ಘಟಕದ ಪದಾಧಿಕಾರಿ ಪಿ.ಪಿ.ಮಜೀದ್, ಕಾಂಗ್ರೆಸ್ನ ಪ್ರಮುಖರಾದ ಮೋಹನ್ ಶೆಟ್ಟಿ, ಕರುಣಾಕರ್ ಶೆಟ್ಟಿ, ನೀರಾಜ್ ಪಾಲ್, ದೀಪಕ್, ಸಲೀಮ್ ಮುಂತಾದವರು ಪೂಜಾರಿಯವರ ಜತೆಗಿದ್ದರು.
ನಗರದ ಆಶ್ರಮಗಳಿಗೆ ಭೇಟಿ ನೀಡಿದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಪೂಜಾರಿಯವರು, ಇಂದಿರಾ ಗಾಂಧಿ ಬಡವರ ಪರ ಕಾಳಜಿ ಇದ್ದ ಹಿರಿಯ ನಾಯಕಿ. ಅವರು ಬಡವರ ಸೇವೆಗಾಗಿ ನನ್ನನ್ನು ಸಚಿವರನ್ನಾಗಿ ಮಾಡಿದರು.ಬಡವರಿಗೆ ಸಾಲ ನೀಡುವ ಮೂಲಕ ಅವರಿಗೆ ನೆರವಾಗಲು ನನ್ನಿಂದ ಸಾಧ್ಯವಾಗಿದೆ.ಪ್ರತಿ ತಿಂಗಳು ನನಗೆ ಬರುವ ಸಂಬಳದಿಂದ ಆಶ್ರಮವಾಸಿಗಳಿಗೆ ಕೊಡುಗೆ ನೀಡುತ್ತಿದ್ದೇನೆ ಎಂದು ತಿಳಿಸಿದರು.
ನಗರದ ವಿವಿಧ ಅಶ್ರಮಗಳಿಗೆ ಪೂಜಾರಿಯವರು ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ನ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ, ಶಾಸಕ ಜೆ.ಆರ್.ಲೋಬೊ, ಮಾಜಿ ಶಾಸಕ ವಿಜಯಕುಮಾರ್, ಕಳ್ಳಿಗೆ ತಾರಾನಾಥ ಶೆಟ್ಟಿ, ಅರುಣ್ ಕುವೆಲ್ಲೊ, ಟಿ.ಕೆ.ಸುಧೀರ್, ಮನಪಾ ಸದಸ್ಯ ನಾಗವೇಣಿ, ಅಪ್ಪಿ, ಸಬಿತಾ ಮಿಸ್ಕಿತ್, ಆಶಾ ಡಿಸಿಲ್ವ, ರಾಧಾಕೃಷ್ಣ, ಎ.ಸಿ.ವಿನಯರಾಜ್ ಹಾಗೂ ಇತರ ಪದಾಧಿಕಾರಿಗಳಾದ ಕಮಲಾಕ್ಷ, ಜಯಕರ ಸಮರ್ಥ, ಹಮೀದ್ ಕಣ್ಣೂರು, ಸಲೀಂ ಕುದ್ರೋಳಿ, ಕರುಣಾಕರ ಶೆಟ್ಟಿ ಮತ್ತು ಆಶ್ರಮದ ಸಿಸ್ಟರ್ ಸಿಲ್ವಿಯಾ ಮೊದಲಾದವರು ಉಪಸ್ಥಿತರಿದ್ದರು.
Comments are closed.