ಕರಾವಳಿ

ಕುಂದಾಪುರ(ಚಿತ್ತೂರು): ಮೂರೇ ದಿನಕ್ಕೆ ಒಡೆದ ಕಿಂಡಿ ಅಣೆಕಟ್ಟಿನ ಪೈಬರ್ ಹಲಗೆ

Pinterest LinkedIn Tumblr

ಕುಂದಾಪುರ: ಕುಂದಾಪುರದ ಚಿತ್ತೂರು ಗ್ರಾಮದ ನ್ಯಾಗಳಮನೆ ಎಂಬಲ್ಲಿ ನಿರ್ಮಾಣವಾದ ಕಿಂಡಿ ಅಣೆಕಟ್ಟಿನ ಹಲಗೆ ಒಡೆದು ನೀರು ಹರಿದುಹೋಗುತ್ತಿದೆ. ಈ ಬಗ್ಗೆ ಚಿಕ್ಕದೊಂದು ರಿಪೋರ್ಟ್ ಇಲ್ಲಿದೆ ನೋಡಿ.

chittur_vented-dam_issue-6 chittur_vented-dam_issue-3 chittur_vented-dam_issue-4 chittur_vented-dam_issue-5 chittur_vented-dam_issue-2 chittur_vented-dam_issue-1

50 ಲಕ್ಷದ ಕಾಮಗಾರಿ ಖತಂ….
ರಭಸವಾಗಿ ಹರಿದುಹೋಗುತ್ತಿರುವ ನೀರು, ನೀರು ಪಾಲಾಗಿರುವ ಪೈಬರ್ ಹಲಗೆ, ಉಳಿದ ಇನ್ನೊಂದಷ್ಟು ಪೈಬರ್ ಹಲಗೆಗಳಲ್ಲಿಯೂ ತೂತಾಗಿ ನೀರು ಹರಿಯುತ್ತಿರುವುದು…. ಹೌದು…ಕುಂದಾಪುರ ತಾಲೂಕಿನ ಚಿತ್ತೂರು ಗ್ರಾಮಪಂಚಾಯತಿ ವ್ಯಾಪ್ತಿಯ ನ್ಯಾಗಳಮನೆ ಭಾಗದ ಜನರ ಬಹುವರ್ಷದ ಬೇಡಿಕೆಯ ಬಳಿಕ ಅಂದಾಜು 50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಿರು‌ಅಣೆಕಟ್ಟಿನ ಇಂದಿನ ಸ್ಥಿತಿಯಿದು. ಸ್ಥಳಿಯ ಗ್ರಾಮಪಂಚಾಯತಿ ಪ್ರತಿನಿಧಿಗಳ ಹಾಗೂ ಜನರ ಬೇಡಿಕೆಯಂತೆ ಬೈಂದೂರು ಶಾಸಕ ಕೆ. ಗೋಪಾಲ ಪೂಜಾರಿಯವರು ಸಣ್ಣನೀರಾವರಿ ಯೋಜನೆಯಡಿಯಲ್ಲಿ ಈ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಅನುದಾನ ಒದಗಿಸಿದ್ರು. ಅಂತೆಯೇ ಕಳೆದ ವರ್ಷ ಕಿಂಡಿ ಅಣೆಕಟ್ಟು ನಿರ್ಮಾಣವೂ ಆಗಿತ್ತು. ಆದರೇ ಈ ಬಾರಿ ಆ ಕಿರು‌ಅಣೆಕಟ್ಟಿನ ಹಲಗೆ ಹಾಕಿ ಮೂರೇ ದಿನವಾಗಿದ್ದು ಅಳವಡಿಸಿದ ಪೈಬರ್ ಹಲಗೆ ನೀರುಪಾಲಾಗಿದೆ.

ಒಡೆದ ಪೈಬರ್ ಹಲಗೆ….
ಚಿತ್ತೂರು ನ್ಯಾಗಳಮನೆ ಪರಿಸರದಲ್ಲಿ ಹಲವು ವರ್ಷಗಳಿಂದಲೂ ಅಂತರ್ಜಲ ಮಟ್ಟದಲ್ಲಿ ವಿಪರೀತ ಇಳಿಕೆಯಾಗಿತ್ತು. ಕಿಂಡಿ ಅಣೆಕಟ್ಟು ನಿರ್ಮಿಸಿದಲ್ಲಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಇದರಿಂದ ನೂರಾರು ಎಕರೇ ಕ್ರಷಿಭೂಮಿಗೆ ಅನುಕೂಲವಾಗಲಿದೆ ಎಂಬ ಸ್ಥಳೀಯ ನಿವಾಸಿಗಳ ಒತ್ತಡದಂತೆ ಸುಮಾರು 60 ಮೀಟರ್ ಉದ್ದದ ಕಿಂಡಿ ಅಣೆಕಟ್ಟ್ಟು ನಿರ್ಮಾಣ ಕಾರ್ಯವೂ ನಡೆದಿತ್ತು. ಆದರೇ ಕಳೆದವರ್ಷ ಮಳೆಗಾಲದ ಸಂದರ್ಭ ಅಣೆಕಟ್ಟಿಗೆ ಹಲಗೆ ಮುಚ್ಚಿರಲಿಲ್ಲ. ಎರಡುವರೆ ಮೀಟರ್ ಅಗಲದ ಸುಮಾರು 8 ಕಿಂಡಿಗಳಿಗೆ ಮೂರ್ನಾಲು ದಿನಗಳ ಹಿಂದಷ್ಟೇ ಪೈಬರ್ ಹಲಗೆ ಅಳವಡಿಕೆ ಮಾಡಲಾಗಿದ್ದು ಪೈಬರ್ ಹಲಗೆಗೆ ಯಾವುದೇ ರಬ್ಬರ್ ಬೀಡೀಂಗ್ ಅಳವಡಿಸದ ಕಾರಣ ನೀರಿನೊತ್ತಡಕ್ಕೆ ಒಂದು ಭಾಗದ ಪೈಬರ್ ಹಲಗೆ ಒಡೆದು ಹೋಗಿದೆ. ಅಲ್ಲದೇ ಉಳಿದ ಏಳು ಪೈಬರ್ ಹಲಗೆಗಳಲ್ಲಿ ಸಣ್ಣಸಣ್ಣ ರಂಧ್ರಗಳಾಗಿದ್ದು ಒಡೆಯುವ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಈ ಸಮಸ್ಯೆಗೆ ಪರಿಹಾರ ಕಂಡುಕೊಂಡು ಸರಿಪಡಿಸದಿದ್ದಲ್ಲಿ ಹೋರಾಟದ ಹಾದಿಯತ್ತ ಜನರು ಮುಖಮಾಡಿದ್ದಾರೆ.

ನೀರಲ್ಲಿ ಹೋಮವಾಗದಿರಲಿ ಹಣ….
ನೀರನ್ನು ಹಿಡಿದಿಡಲು ನಿರ್ಮಿಸಿದ ಕಿಂಡಿ‌ಅಣೆಕಟ್ಟು ಇದಾಗಿದ್ದು ಕಾಮಗಾರಿಯ ಸಮಸ್ಯೆಯಿಂದ ನೀರು ಹರಿದುಹೋಗುವಂತಾಗಿದೆ. ನೀರಿನ ಉದ್ದೇಶದಿಂದ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಹಾಕಿದ ಲಕ್ಷಗಟ್ಟಲೇ ಹಣ ನೀರಲ್ಲಿ ಹೋಮವಾಗುವ ಮೊದಲು ಸಂಬಂದಪಟ್ಟವರು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ.
——————-
ವರದಿ- ಯೋಗೀಶ್ ಕುಂಭಾಸಿ

Comments are closed.