ರಾಷ್ಟ್ರೀಯ

₹10 ಕೋಟಿಯ ‘ಯುವರಾಜ’ನೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದ ಜನ

Pinterest LinkedIn Tumblr

yuvaraja-bull

ಜೈಪುರ (ರಾಜಸ್ತಾನ): ಹತ್ತು ಕೋಟಿ ಬೆಲೆಯ ಮುರ್ರಾ ತಳಿಯ ದೈತ್ಯ ಗಾತ್ರದ ಕೋಣ, ಒಂದೂವರೆ ಕೋಟಿಯ ದೇಸಿ ತಳಿಯ ಮಾರ್ವಾಡಿ ಕುದುರೆ, ಒಂಟೆಗಳ ಶೃಂಗರಿಸುವ ಬ್ಯೂಟಿ ಪಾರ್ಲರ್‌! ಇಲ್ಲಿ ನಡೆದ ಮೂರು ದಿನಗಳ ಜಾಗತಿಕ ಕೃಷಿ ತಂತ್ರಜ್ಞಾನ ಮೇಳದ (ಗ್ರಾಮ್‌) ಆಕರ್ಷಣೀಯ ಕೇಂದ್ರಗಳು.

ಮೇಳದಲ್ಲಿ ಭಾಗವಹಿಸಿದ್ದ ಸಾವಿರಾರು ದೇಶ, ವಿದೇಶದ ಜನರು ಈ ಕೋಣ, ಕುದುರೆ, ಒಂಟೆ ನೋಡಲು ಮುಗಿಬಿದ್ದಿದ್ದರು. ಹರಿಯಾಣದ ಸನಾರಿಯಾ ಗ್ರಾಮದ ರೈತ ಕರಮ್‌ವೀರ್‌ ಸಿಂಗ್‌ ಅವರಿಗೆ ಸೇರಿದ 14 ಅಡಿ ಉದ್ದ, ಆರು ಅಡಿ ಎತ್ತರ ಮತ್ತು 1,500 ಕೆ.ಜಿ. ಭಾರಿ ತೂಕದ ವಿಶೇಷ ಕೋಣ ‘ಯುವರಾಜ್’ ಕೃಷಿ ಮೇಳದ ಪ್ರಮುಖ ಆರ್ಕಷಣೆಯಾಗಿತ್ತು. ಯುವರಾಜನೊಂದಿಗೆ ಸೆಲ್ಫಿಗಾಗಿ ಮುಗಿಬಿದ್ದ ಜನರನ್ನು ನಿಯಂತ್ರಿ ಸುವುದೇ ಪೊಲೀಸರು ಮತ್ತು ಸಂಘಟಕರಿಗೆ ದೊಡ್ಡ ತಲೆನೋವಾಗಿತ್ತು.

ಜನಸಾಮಾನ್ಯರಷ್ಟೇ ಅಲ್ಲ ಮುಖ್ಯಮಂತ್ರಿ ವಸುಂಧರಾ ರಾಜೆ, ಸಚಿವರು, ಸಂಸದರು, ಶಾಸಕರು, ಆಸ್ಟ್ರೇಲಿಯಾ, ಇಸ್ರೇಲ್‌ ನಿಯೋಗದ ಸದಸ್ಯರೂ ‘ಯುವರಾಜ’ನೊಂದಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಈ ಯುವರಾಜನಿಗೆ ದಿನವೊಂದಕ್ಕೆ 20 ಲೀಟರ್ ಹಾಲು, 5 ಕಿಲೋ ಸೇಬುಹಣ್ಣು ಮತ್ತು 15 ಕೆ.ಜಿ ಮೇವಿನ ಜತೆ ಒಂದು ಬಾಟಲ್ ಮದ್ಯವೂ ಬೇಕಂತೆ!

ಹರಿಯಾಣದ ರೋಹಟಕ್‌-ಜಿಂದ್ ಜಿಲ್ಲೆಗಳ ಅಳಿವಿನಂಚಿನಲ್ಲಿರುವ ಮುರ್ರಾ ದೇಸಿ ತಳಿಯ ಈ ಕೋಣದ ವೀರ್ಯವನ್ನು ಕೃತಕ ಗರ್ಭಧಾರಣೆಗೆ ಬಳಸಲಾಗುತ್ತಿದ್ದು, ವಿದೇಶಗಳಿಂದಲೂ ಭಾರಿ ಬೇಡಿಕೆ ಇದೆ. ವೀರ್ಯ ಮಾರಾಟದಿಂದಲೇ ಇದರ ಮಾಲೀಕರಿಗೆ ವರ್ಷಕ್ಕೆ ₹70–80 ಲಕ್ಷ ಗಳಿಸುತ್ತಾರೆ. ಈಗಾಗಲೇ ಯುವರಾಜನ ಸಂತತಿ 1.50 ಲಕ್ಷ ದಾಟಿದೆಯಂತೆ!

ದಕ್ಷಿಣ ಆಫ್ರಿಕಾದ ಕಂಪೆನಿಯೊಂದು ₹ 9.5 ಕೋಟಿ ಬೆಲೆ ತೆತ್ತು ಈ ಕೋಣ ಖರೀದಿಸಲು ಮುಂದೆ ಬಂದಿತ್ತು. ಆದರೆ, ಅದರ ಮಾಲೀಕ ಕರಮ್‌ವೀರ ಸಿಂಗ್‌ ಕೋಣ ಮಾರಾಟ ಮಾಡಲು ಸುತಾರಾಂ ಒಪ್ಪಲಿಲ್ಲ.

₹ 1.50 ಕೋಟಿಯ ಮಲಾನಿ ಕುದರೆ: ಮಾರ್ವಾಡಿ, ಮಲಾನಿ ಹೆಸರುಗಳಿಂದ ಗುರುತಿಸಿಕೊಳ್ಳುವ ದೇಸಿ ತಳಿಯ ಕುದುರೆಗಳೂ ಜನಪ್ರಿಯತೆಯಲ್ಲಿ ‘ಯುವರಾಜ’ನಿಗೆ ಕಡಿಮೆ ಇಲ್ಲ. ಎಂಥದ್ದೇ ಪರಿಸ್ಥಿತಿಯಲ್ಲೂ ಜೀವಿಸುವ ಸಾಮರ್ಥ್ಯ ಹೊಂದಿರುವ ಈ ತಳಿಯ ಕುದುರೆಗಳು ಸ್ವಾಮಿಭಕ್ತಿಗೆ ಹೆಸರುವಾಸಿ. ಅತ್ಯಂತ ಎತ್ತರದ ಈ ಕುದುರೆಗಳನ್ನು ಪೊಲೀಸ್‌ ಅಶ್ವಪಡೆ, ಸೇನೆಯಲ್ಲಿ ಹೆಚ್ಚಾಗಿ ಬಳಸುತ್ತಾರೆ. ಅತ್ಯಂತ ಸುಲಭವಾಗಿ ಕಡಿದಾದ ಬೆಟ್ಟ, ಗುಡ್ಡಗಳನ್ನು ಏರಬಲ್ಲ ಸಾಮರ್ಥ್ಯ ಇವುಗಳ ವಿಶೇಷತೆ.

ರಾಜಸ್ತಾನದ ಹನುಮಾನಗಡದ ಕೆ.ಸಿ. ಕುದುರೆತಳಿ ಅಭಿವೃದ್ಧಿ ಕೇಂದ್ರ (ಸ್ಟಡ್‌ ಫಾರ್ಮ್‌) ಮಾರ್ವಾಡಿ ತಳಿಯ ಕುದುರೆಗಳ ಸಂತತಿ ಅಭಿವೃದ್ಧಿ ಮಾಡುತ್ತಿದ್ದು ಒಂದು ಕುದುರೆ ಬೆಲೆ ₹1.50 ಕೋಟಿ!

ಒಂಟೆ ಬ್ಯೂಟಿ ಪಾರ್ಲರ್‌: ರಾಜಸ್ತಾನದಲ್ಲಿ ಹೆಚ್ಚಾಗಿರುವ ಒಂಟೆಗಳ ಶೃಂಗಾರಕ್ಕಾಗಿಯೇ ಸಂಚಾರಿ ‘ಬ್ಯೂಟಿ ಪಾರ್ಲರ್‌’ವೊಂದಿದೆ. ಮದುವೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ವಿಶೇಷವಾಗಿ ಒಂಟೆಗಳ ಬೆನ್ನು, ಬಾಲ, ಕಾಲು, ಮುಖದ ಕೇಶ ಕತ್ತರಿಸಿ ಝೂಲಾಗಳಿಂದ ಶೃಂಗರಿಸಲಾಗುತ್ತದೆ.

ಶೃಂಗರಿಸಿದ ಒಂಟೆಗಳ ಕುಣಿತವನ್ನು ಕಣ್ತುಂಬಿಕೊಳ್ಳುವುದೇ ಒಂದು ಹಬ್ಬ. ಜೈಪುರ ಕೃತಕ ಕಾಲಿನ ಮಾದರಿಯಲ್ಲಿಯೇ  ಜಾನವಾರುಗಳಿಗೂ ಕೃತಕ ಕಾಲು ಅಳವಡಿಸುವ ಪಶು ಚಿಕಿತ್ಸಾ ಕೇಂದ್ರದಲ್ಲಿ ಮಾಹಿತಿ ಪಡೆಯಲು ರೈತರು ಮುಗಿಬಿದ್ದಿದ್ದರು.

ಇವುಗಳನ್ನು ಹೊರತುಪಡಿಸಿದರೆ ಅತ್ಯಾಧುನಿಕ ವ್ಯವಸಾಯ ಪದ್ಧತಿ, ಕೃಷಿ ತಂತ್ರಜ್ಞಾನ ಪರಿಚಯಿಸುವ ‘ಸ್ಮಾರ್ಟ್‌ ಫಾರ್ಮ್‌’ ರೈತರಿಗೆ ಅನೇಕ ಮಾಹಿತಿ ಒದಗಿಸುವಲ್ಲಿ ಯಶಸ್ವಿಯಾಯಿತು.

Comments are closed.