ಕರಾವಳಿ

ಬಸ್ ಸಿಬ್ಬಂದಿಗಳ ವರ್ತನೆಗಳ ವಿರುದ್ಧ ದೂರು ಹಿನ್ನೆಲೆ : ಬಸ್ ಮಾಲಕರ ಸಂಘದಿಂದ ನಿಯಮಾವಳಿ ಜಾರಿ

Pinterest LinkedIn Tumblr

bus-driver-mob

ಮಂಗಳೂರು, ನ.4: ದ.ಕ.ಜಿಲ್ಲೆಯ ಸಾರಿಗೆಯ ಜೀವನಾಡಿಯಂತಿರುವ ಖಾಸಗಿ ಬಸ್ ಗಳ ಸಿಬ್ಬಂದಿಯ ವರ್ತನೆಗಳ ವಿರುದ್ಧ ಪ್ರಯಾಣಿಕರಿಂದ ದಿನನಿತ್ಯ ಕೇಳಿ ಬರುತ್ತಿರುವ ದೂರಿನ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ದ.ಕ.ಜಿಲ್ಲಾ ಬಸ್ ಮಾಲಕರ ಸಂಘವು ಇದೀಗ ಕೆಲವೊಂದು ನಿಯಮಾವಳಿಗಳನ್ನು ರೂಪಿಸಿ ಎಲ್ಲ ಬಸ್ಗಳ ಸಿಬ್ಬಂದಿ ವರ್ಗಕ್ಕೆ ಕಳುಹಿಸಿಕೊಟ್ಟಿವೆ.

ಬಸ್ ಮಾಲಕರ ಸಂಘ ಹೊರಡಿಸಿರುವ ಸೂಚನೆ ಹೀಗಿವೆ:

ಪ್ರತಿಯೊಬ್ಬ ನಿರ್ವಾಹಕರು ಕಂಪ್ಯೂಟರೈಸ್ಡ್ ಟಿಕೆಟ್ ಮೆಶಿನ್ ಮೂಲಕ ಪ್ರಯಾಣಿಕರಿಗೆ ಟಿಕೆಟ್ ಕಡ್ಡಾಯವಾಗಿ ನೀಡಬೇಕು. *ಕರ್ಕಶ ಹಾರ್ನ್ಗಳನ್ನು ಬಳಸಬಾರದು.

ಕರ್ತವ್ಯದಲ್ಲಿರುವಾಗ ಚಾಲಕರು-ನಿರ್ವಾಹಕರು ಕಡ್ಡಾಯವಾಗಿ ಸಮವಸ್ತ್ರ ಧರಿಸಬೇಕು ಮತ್ತು ಮೊಬೈಲ್ ಫೋನ್ ಬಳಕೆ ಮಾಡಬಾರದು ಹಾಗೂ ತಮ್ಮ ಲೈಸನ್ಸ್ನ ದೃಢೀಕೃತ ಪ್ರತಿಯನ್ನು ಹೊಂದಿರಬೇಕು.

ಬಸ್ಸಿಗೆ ಸಂಬಂಧಿಸಿದ ದಾಖಲಾತಿಗಳಾದ ಆರ್ಸಿ, ಇನ್ಸೂರೆನ್ಸ್, ಪೊಲ್ಯುಶನ್ ಸರ್ಟಿಫಿಕೆಟ್, ರೂಟ್ ಪರ್ಮಿಟ್ನ ದೃಢೀಕೃತ ಪ್ರತಿಯನ್ನು ಬಸ್ಸಿನಲ್ಲಿಟ್ಟುಕೊಂಡಿರಬೇಕು.

ಸಂಚಾರದ ವೇಳೆ ಕ್ಲೀನರ್ ಅಥವಾ ಅನಗತ್ಯ ವ್ಯಕ್ತಿಗಳು ಬಸ್ಸಿನಲ್ಲಿ ತಿರುಗಾಡಬಾರದು. ಬಸ್ ಪಾಸ್ ಹೊಂದಿದ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕ ಪ್ರಯಾಣಿಕರಿಗೆ ಯಾವುದೇ ರೀತಿಯ ಕಿರುಕುಳ ನೀಡಬಾರದು.

ಹಿರಿಯ ನಾಗರಿಕರು, ಅಂಗವಿಕಲರಿಗೆ ಮೀಸಲಿಟ್ಟ ಸೀಟುಗಳನ್ನು ಇತರ ಯಾರೂ ಆಕ್ರಮಿಸದಂತೆ ನೋಡಿಕೊಳ್ಳಬೇಕು.

ಚಾಲಕರು ಅಥವಾ ನಿರ್ವಾಹಕರು ಇತರ ಯಾವುದೇ ಬಸ್ಸುಗಳೊಂದಿಗೆ ಸ್ಪರ್ಧೆ, ಮೇಲಾಟ, ಜಗಳವಾಡಬಾರದು.

ನಿಗದಿತ ಬಸ್ ಸ್ಟಾಪ್ಗಳಲ್ಲಿ ಮಾತ್ರ ಪ್ರಯಾಣಿಕರನ್ನು ಹತ್ತಿಸಿಕೊಳ್ಳಬೇಕು ಮತ್ತು ಇಳಿಸಬೇಕು.

ಪ್ರತೀ ಬಸ್ ಚಾಲಕರು ಬಸ್ ನಿಲ್ದಾಣಗಳಲ್ಲಿರುವ ‘ಬಸ್ ಬೇ’ಯೊಳಗೆ ನಿಲ್ಲಿಸಬೇಕು.

ಇದನ್ನು ಹಲವು ಸಿಬ್ಬಂದಿ ಸ್ವಾಗತಿಸಿದರೆ, ಇನ್ನು ಕೆಲವರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.ಕೆಲವು ಮಂದಿಯ ದುರ್ವರ್ತನೆಯಿಂದ ಬಸ್ಸಿನ ಎಲ್ಲ ಸಿಬ್ಬಂದಿ ವರ್ಗವನ್ನು ಸಾರ್ವಜನಿಕರು, ಪ್ರಯಾಣಿಕರು ಸಂಶಯದಿಂದ ನೋಡುವಂತಾಗಿದೆ. ಇದನ್ನು ತಪ್ಪಿಸುವ ಸಲುವಾಗಿ ಮಾಲಕರ ಸಂಘ ಹೊರಡಿಸಿದ ಸೂಚನೆ ಒಳ್ಳೆಯ ಬೆಳವಣಿಗೆಯಾಗಿದೆ. ಆದರೆ ಇದು ಕೇವಲ ಬಸ್ ಸಿಬ್ಬಂದಿ ವರ್ಗಕ್ಕೆ ಮಾತ್ರ ಅನ್ವಯವಾಗಬಾರದು.

ಬಸ್ ಮಾಲಕರೂ ಈ ಸೂಚನೆಯನ್ನು ಪಾಲಿಸುವಂತಾಗಬೇಕು. ಸಿಬ್ಬಂದಿ ವರ್ಗಕ್ಕೆ ವರ್ಷಕ್ಕೆ ಎರಡು ಜೊತೆ ಸಮವಸ್ತ್ರ ನೀಡಬೇಕು. ಕೆಲಸದ ಭದ್ರತೆ ನೀಡಬೇಕು. ಕಂಪ್ಯೂಟರೈಸ್ಡ್ ಟಿಕೆಟ್ ಮೆಶಿನ್ ಹಾಳಾದರೆ ಅದನ್ನು ರಿಪೇರಿ ಮಾಡಿಸಬೇಕು.

ದಿನಂಪ್ರತಿ ಇಂತಿಷ್ಟೇ ಕಲೆಕ್ಷನ್ (ಹಣ) ಕೊಡಬೇಕು ಎಂದು ತಾಕೀತು ಮಾಡಬಾರದು. ಹಾಗೇ ಮಾಡಿದರೆ ನಿರ್ವಾಹಕರು ‘ಓಡಾಟದ ಪೈಪೋಟಿ’ಗೆ ಇಳಿಯುತ್ತಾರೆ. ಇದರಿಂದ ಅಪಘಾತವೂ ಹೆಚ್ಚಾಗುತ್ತದೆ. ದೂರು ರಹಿತ ಸೇವೆ ನೀಡುವ ಜವಾಬ್ದಾರಿ ಕೇವಲ ಸಿಬ್ಬಂದಿ ವರ್ಗಕ್ಕೆ ಮಾತ್ರವಲ್ಲ, ಮಾಲಕ ವರ್ಗಕ್ಕೂ ಇದೆ ಎಂದು ಹೆಸರು ಹೇಳಲು ಇಚ್ಛಿಸದ ಬಸ್ ಕಂಡಕ್ಟರ್ ಒಬ್ಬರು ತಿಳಿಸಿದ್ದಾರೆ.

ಕೆಲವು ಸಿಬ್ಬಂದಿ ವರ್ಗದ ವಿರುದ್ಧ ಆಗಾಗ ದೂರುಗಳು ಕೇಳಿಬರುತ್ತಿತ್ತು. ಪ್ರಯಾಣಿಕರೊಂದಗೆ ಉತ್ತಮ ಬಾಂಧವ್ಯ ವೃದ್ಧಿಸಿಕೊಂಡು ದೂರು ರಹಿತ ಸೇವೆ ನೀಡುವುದು ನಮ್ಮ ಉದ್ದೇಶವಾಗಿದೆ. ಜಿಲ್ಲೆಯ ಬಹುತೇಕ ಮಂದಿ ಖಾಸಗಿ ಬಸ್ಗಳ ಸೇವೆಯನ್ನು ಅವಲಂಬಿಸಿರುತ್ತಾರೆ. ಶಿಸ್ತುಬದ್ಧ, ಅಪಘಾತ ರಹಿತ ಸೇವೆಯನ್ನು ನೀಡುವ ಮೂಲಕ ಜಿಲ್ಲೆಯ ಖಾಸಗಿ ಬಸ್ ಸಾರಿಗೆಯು ರಾಜ್ಯಕ್ಕೇ ಮಾದರಿಯಾಗಬೇಕು ಎಂಬುದು ನಮ್ಮ ಅಭಿಲಾಶೆಯಾಗಿದೆ. ಸಂಘದ ಅಧೀನದಲ್ಲಿ 343 ಬಸ್ಗಳಿವೆ. ಎಲ್ಲ ಬಸ್ಗಳ ಮಾಲಕರ ಮೂಲಕ ಸಿಬ್ಬಂದಿ ವರ್ಗಕ್ಕೆ ಈ ಸೂಚನೆ ನೀಡಲಾಗಿದೆ. ಬಹುಶ: ಈ ಸೂಚನೆಯನ್ನು ಎಲ್ಲ ಸಿಬ್ಬಂದಿ ವರ್ಗ ಪಾಲಿಸಿದರೆ ಉತ್ತಮ ಸೇವೆಯು ಪ್ರಯಾಣಿಕರಿಗೆ ಲಭ್ಯವಾಗಬಹುದು ಎಂದು ದ.ಕ.ಜಿಲ್ಲಾ ಬಸ್ ಮಾಲಕರ ಸಂಘದ ಅಧ್ಯಕ್ಷ ಅಝೀಝ್ ಪರ್ತಿಪ್ಪಾಡಿ ತಿಳಿಸಿದ್ದಾರೆ.

ವರದಿ ಕೃಪೆ : ವಾಭಾ

Comments are closed.