ಕರಾವಳಿ

ಸಿದ್ದರಾಮಯ್ಯನವರು ಇನ್ನೂ ನಿದ್ದೆಯಿಂದ ಎಚ್ಚರವಾಗಿಲ್ಲ – ಅವರು ಮನೆಗೆ ಹೋಗುವುದು ಖಂಡಿತ : ಕಾಂಗ್ರೆಸ್ ಮುಖಂಡ ಪೂಜಾರಿ ಆಕ್ರೋಷ

Pinterest LinkedIn Tumblr

pujary_press-club_1

ಮಂಗಳೂರು, ನ.3: ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಇನ್ನೂ ನಿದ್ದೆಯಿಂದ ಎಚ್ಚರವಾಗಿಲ್ಲ. ರಾಜ್ಯದ ಜನರ ಯೋಗ ಕ್ಷೇಮದ ಬಗ್ಗೆ ಚಿಂತಿಸುವುದನ್ನು ಬಿಟ್ಟು ಇದೇ ರೀತಿ ಇವರು ನಿದ್ದೆ ಮಾಡುತ್ತಿದ್ದರೆ ಸಿದ್ದರಾಮಯ್ಯನವರು ಮನೆಗೆ ಹೋಗುವುದು ಖಂಡಿತ ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಎಚ್ಚರಿಕೆ ನೀಡಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮೈಸೂರಿನಲ್ಲಿ ಉಪಚುನಾವಣೆ ನಡೆಯಲಿದ್ದು, ಪ್ರತಿಪಕ್ಷಗಳು ಚುನಾವಣೆಯನ್ನು ಎದುರಿಸಲು ಕಸರತ್ತು ಆರಂಭಿಸಿವೆ. ಉತ್ತರ ಪ್ರದೇಶದಲ್ಲಿ ಅಖಿಲೇಶ್ ಯಾದವ್ ರಥಯಾತ್ರೆ ಆರಂಭಿಸಿದ್ದಾರೆ. ದೇವೇಗೌಡರು ಈಗಾಗಲೇ ಶ್ರೀನಿವಾಸ್ ಪ್ರಸಾದ್ ಪಕ್ಷೇತರರತಾಗಿ ಸ್ಪರ್ಧಿಸಿದರೆ ಜೆಡಿಎಸ್ ಬೆಂಬಲಿಸುವುದಾಗಿ ಹೇಳಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸಿದ್ದರಾಮಯ್ಯನವರು ಮಾತ್ರ ಇನ್ನೂ ನಿದ್ದೆಯಿಂದ ಎಚ್ಚರವಾಗಿಲ್ಲ ಎಂದು ಹೇಳಿದರು.

pujary_press-club_2

ಪಕ್ಷದ ಹಿತದೃಷ್ಟಿಯಿಂದ ಪಕ್ಷದ ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗಿ. ಚುನಾವಣೆಗೆ ಕಾರ್ಯತಂತ್ರ ರೂಪಿಸಿ. ಪಕ್ಷಕ್ಕೆ ಲಾಭವಾಗುವುದಾದರೆ ಎಲ್ಲರನ್ನೂ ಒಗ್ಗೂಡಿಸಿಕೊಂಡು ನೀವು ರಥಯಾತ್ರೆ ಆಯೋಜಿಸಿ. ರಥಯಾತ್ರೆಯನ್ನು ಉಪ ಚುನಾವಣೆಯಿಂದಲೇ ಆರಂಭಿಸಿ ಎಂದು ಪೂಜಾರಿ ಸಲಹೆ ನೀಡಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪಕ್ಷ, ಕಾರ್ಯಕರ್ತರು ಮತ್ತು ಸರಕಾರದ ಹಿತದೃಷ್ಟಿಯಿಂದ ಪಕ್ಷ ಉಳಿಸುವ ಕೆಲಸ ಮಾಡಬೇಕು. ಪಕ್ಷದ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚುನಾವಣೆಯನ್ನು ಎದುರಿಸಬೇಕಾಗಿದೆ.ಮೈಸೂರು ಉಪಚುನಾವಣೆಯಲ್ಲಿ ಒಂದು ವೇಳೆ ಪಕ್ಷ ಗೆಲ್ಲದಿದ್ದರೆ………..ಪ್ರತಿಪಕ್ಷಗಳು ಒಂದಾಗಿ ಮೈಸೂರು ಕೈತಪ್ಪಿದರೆ………….. ನೀವು ಸಿಎಂ ಪಟ್ಟ ಕಳೆದುಕೊಳ್ಳಬೇಕಾದೀತು. ಸಿದ್ದರಾಮಯ್ಯನವರೇ ಎಚ್ಚೆತ್ತುಕೊಳ್ಳಿ. ಪಕ್ಷ ಉಳಿಸುವ ಕೆಲಸ ಮಾಡಿ ಎಂದು ಪೂಜಾರಿ ಸಲಹೆ ನೀಡಿದರು.

pujary_press-club_3

ಒಆರ್‍ಒಪಿ ಜಾರಿ ವಿಳಂಬ – ಯೋಧನ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ಹೊಣೆ ; ಪೂಜಾರಿ ಆರೋಪ

ಒಆರ್‍ಒಪಿ (One rank, one pension) ಜಾರಿ ವಿಳಂಬದಿಂದ ಬೇಸತ್ತ ಮಾಜಿ ಯೋಧನ ಆತ್ಮಹತ್ಯೆಗೆ ಕೇಂದ್ರ ಸರ್ಕಾರವೇ ನೇರ ಹೊಣೆ. ಆದರೆ ಈ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡುತ್ತಿರುವ ಕೇಂದ್ರದ ಸಚಿವರು ಹಾಗೂ ಸೇನೆಯ ಮಾಜಿ ಮುಖ್ಯಸ್ಥ ವಿ.ಕೆ. ಸಿಂಗ್ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಪ್ರಧಾನಿ ನರೇಂದ್ರ ಮೋದಿಯವರಿಗೆ ತಾಕತ್ತಿದ್ದರೆ ಅವರನ್ನು ಸಚಿವ ಸಂಪುಟದಿಂದ ತೆಗೆದುಹಾಕಬೇಕೆಂದು ಪೂಜಾರಿ ಆಗ್ರಹಿಸಿದರು.

ಬಿಜೆಪಿ ಅಧಿಕಾರಕ್ಕೆ ಬರುವ ಮುನ್ನ ಒಆರ್‍ಒಪಿ ಜಾರಿಗೊಳಿಸುವುದಾಗಿ ಜನತೆಗೆ ವಾಗ್ದಾನ ನೀಡಿತ್ತು. ಆದರೆ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ವಕ್ತಾರೆ ಮೀನಾಕ್ಷಿ ಲೇಖಿಯವರ ಮುಜುಗರದ ಹೇಳಿಕೆ ನೀಡುತ್ತಿದ್ದಾರೆ. ಅವರನ್ನು ಪಕ್ಷದಿಂದ ತೆಗೆದು ಹಾಕಬೇಕು ಎಂದು ಆಗ್ರಹಿಸಿದರು.

ದ.ಕ.ಜಿಲ್ಲಾ ಯುತ್ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಅರುಣ್ ಕುವೆಲ್ಲೊ, ಪಕ್ಷದ ಹಿರಿಯ ಪ್ರಮುಖರಾದ ಕಳ್ಳಿಗೆ ತಾರನಾಥ ಶೆಟ್ಟಿ, ಅಜಿತ್ ಕುಮಾರ್, ಕರುಣಾಕರ ಶೆಟ್ಟಿ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Comments are closed.