ಪುತ್ತೂರು : ಟ್ಯಾಂಕರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆಬದಿ ನಿಲ್ಲಿಸಲಾಗಿದ್ದ ಮಾರುತಿ ಕಾರೊಂದರ ಮೇಲೆ ಮಗುಚಿಬಿದ್ದ ಪರಿಣಾಮವಾಗಿ ಕಾರು ಅಪ್ಪಚ್ಚಿಯಾದ ಘಟನೆ ಪುತ್ತೂರು ನಗರದ ಹೊರವಲಯದಲ್ಲಿರುವ ಮಂಜಲ್ಪಡ್ಪು ಬೈಪಾಸ್ ಬಳಿ ಸಂಭವಿಸಿದೆ.
ಅಪ್ಪಚ್ಚಿಯಾದ ಕಾರು ಪುತ್ತೂರು ನಗರದ ಹೊರವಲಯದ ನೆಹರೂನಗರ ನಿವಾಸಿ ಜಯಪ್ರಕಾಶ್ ಎಂಬವರಿಗೆ ಸೇರಿದಾಗಿ ತಿಳಿದುಬಂದಿದೆ.
ಮಂಗಳೂರಿನಿಂದ ಮಡಿಕೇರಿ ಕಡೆಗೆ ಪಾಮೋಯಿಲ್ ಸಾಗಾಟ ಮಾಡುತ್ತಿದ್ದ ಟ್ಯಾಂಕರ್ ಮಂಜಲ್ಪಡ್ಪು ಬೈಪಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮವಾಗಿ ರಸ್ತೆ ಬದಿಯಲ್ಲಿ ನಿಲ್ಲಿಸಲಾಗಿದ್ದ ಮಾರುತಿ 800 ಕಾರಿನ ಮೇಲೆ ಮಗುಚಿ ಬಿದ್ದಿದೆ. ಈ ಘಟನೆಯಲ್ಲಿ ಕಾರು ಸಂಪೂರ್ಣವಾಗಿ ಅಪ್ಪಚ್ಚಿಯಾಗಿದ್ದು, ಟ್ಯಾಂಕರ್ ಚಾಲಕ ಬಾಗಲಕೋಟೆಯ ಯಲ್ಲಲಿಂಗ ಎಂಬವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.
ಜಯಪ್ರಕಾಶ್ ಅವರು ತನ್ನ ಸ್ನೇಹಿತರೊಬ್ಬರ ಜೊತೆ ಕಾರಿನಲ್ಲಿ ಬಂದು ಮಂಜಲ್ಪಡ್ಪು ಬೈಪಾಸ್ ಬಳಿ ರಸ್ತೆ ಬದಿಯಲ್ಲಿ ಕಾರು ನಿಲ್ಲಸಿ ಅಲ್ಲೇ ಪಕ್ಕದಲ್ಲಿರುವ ರೆಸ್ಟೋರೆಂಟ್ಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಕಾರಿನಲ್ಲಿ ಯಾರೂ ಇಲ್ಲದ ಕಾರಣ ದೊಡ್ಡದೊಂದು ಅನಾಹುತ ತಪ್ಪಿದೆ. ಪುತ್ತೂರು ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.