ಮಂಗಳೂರು, ಅ.27: ನಗರದ ಮಿಲಾಗ್ರಿಸ್ ಕಾಲೇಜಿನ 22 ಮಂದಿ ವಿದ್ಯಾರ್ಥಿಗಳ ಹಾಜರಾತಿ ಕೊರತೆ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಪರೀಕ್ಷೆಯ ಹಾಲ್ ಟಿಕೆಟ್ ನಿರಾಕರಿಸಿದೆ. ಇದನ್ನು ಖಂಡಿಸಿ ನಗರದ ಮಿಲಾಗ್ರಿಸ್ ಪದವಿ ಕಾಲೇಜಿನ 22 ವಿದ್ಯಾರ್ಥಿಗಳು ಹಾಗೂ ಅವರ ಪೋಷಕರು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಬೆಂಬಲದೊಂದಿಗೆ ಗುರುವಾರ ಬೆಳಗ್ಗೆ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಕಾರರನ್ನುದ್ದೇಶಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಮಾತನಾಡಿ, ಮಿಲಾಗ್ರಿಸ್ ಪದವಿ ಕಾಲೇಜಿನಲ್ಲಿ ಹಾಜರಾತಿಯ ಕೊರತೆಯ ಹಿನ್ನೆಲೆಯಲ್ಲಿ 90 ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಹಾಲ್ ಟಿಕೆಟ್ ನಿರಾಕರಿಸಲಾಗಿತ್ತು. ಬಳಿಕ ಈ ಪೈಕಿ 22 ವಿದ್ಯಾರ್ಥಿಗಳನ್ನು ಹೊರತುಪಡಿಸಿ ಉಳಿದವರಿಗೆ ಹಾಲ್ ಟಿಕೆಟ್ ನೀಡಲಾಗಿದೆ.ಹಾಲ್ ಟಿಕೆಟ್ ನಿರಾಕರಿಸಲ್ಪಟ್ಟ 22 ಮಂದಿ ಒಂದೇ ಸಮುದಾಯವರಾಗಿದ್ದಾರೆ. ಕಾಲೇಜಿನ ಪ್ರಾಂಶುಪಾಲರ ಮೇಲಿನ ಹಲ್ಲೆ ಪ್ರಕರಣದ ಬಳಿಕ ಪ್ರಾಂಶುಪಾಲರು ಮುಸ್ಲಿಂ ವಿದ್ಯಾರ್ಥಿಗಳ ವಿರುದ್ಧ ಹಗೆ ಸಾಧಿಸುತ್ತಿದ್ದಾರೆ ಎಂದು ಆರೋಪಿಸಿದರು.
ಹಾಲ್ ಟಿಕೆಟ್ ನಿರಾಕರಿಸಲ್ಪಟ್ಟ 22 ವಿದ್ಯಾರ್ಥಿಗಳ ಪೋಷಕರನ್ನು ಕಾಲೇಜಿಗೆ ಬಂದು ಪ್ರಾಂಶುಪಾಲರನ್ನು ಭೇಟಿಯಾಗಲು ಸೂಚಿಸಲಾಗಿತ್ತು. ಅದರಂತೆ ಕಳೆದ ಏಳು ದಿನಗಳಿಂದ ಕಾಲೇಜಿಗೆ ಆಗಮಿಸುತ್ತಿದ್ದರೂ, ಪ್ರಾಂಶುಪಾಲರ ಭೇಟಿಗೆ ಅವಕಾಶ ನೀಡದಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಕೆಲವೊಂದು ವಿದ್ಯಾರ್ಥಿಗಳಿಗೆ ಹಾಲ್ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಅದರೆ ರಾಜಕೀಯ ಒತ್ತಡಕ್ಕೆ ಮಣಿದು ಆಡಳಿತ ಮಂಡಳಿ ಹಾಲ್ ಟಿಕೆಟ್ ನೀಡಲು ನಿರಾಕರಿಸುವ ಮೂಲಕ ವಿದ್ಯಾರ್ಥಿಗಳಿಗೆ ಮೇಲೆ ದೌರ್ಜನ್ಯ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆರಂಭದಲ್ಲಿ 90 ಮಂದಿ ವಿದ್ಯಾರ್ಥಿಗಳು ಹಾಜರಾತಿ ಕೊರತೆ ಎದುರಿಸುತ್ತಿರುವ ಪಟ್ಟಿಯನ್ನು ನೋಟಿಸ್ ಬೋರ್ಡ್‍ನಲ್ಲಿ ಪ್ರಕಟಿಸಲಾಗಿತ್ತು. ಬಳಿಕ ಅದನ್ನು 22 ಮಂದಿಗೆ ಇಳಿಸಲಾಗಿತ್ತು. ಆನಂತರ ಹನ್ನೊಂದು ಮಂದಿ ವಿದ್ಯಾರ್ಥಿಗಳನ್ನು ಪ್ರಾಂಶುಪಾಲರು ತಮ್ಮ ಕಚೇರಿಗೆ ಕರೆಸಿ `ನಿಮಗೆ ಪ್ರವೇಶ ಪತ್ರ’ ನೀಡುತ್ತೇವೆ. ಉಳಿದ ಹನ್ನೊಂದು ಮಂದಿಯ ಪರವಾಗಿ ನೀವು ಮಾತನಾಡಬಾರದು’ ಎಂದು ತಿಳಿಸಿದ್ದಾರೆ ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಫಯಾಝ್ ಆರೋಪಿಸಿದರು.
ನಿನ್ನೆಯಿಂದ ಪರೀಕ್ಷೆ ಆರಂಭವಾಗಿದೆ. ಹನ್ನೊಂದು ಮಂದಿ ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿದ್ದಾರೆ. ವಿಶ್ವವಿದ್ಯಾನಿಲಯ ಪ್ರಮುಖರು ಹೇಳಿದಾಗಲೂ ಕಾಲೇಜು ಇವರಿಗೆ ಪ್ರವೇಶ ಪತ್ರ ನೀಡಿಲ್ಲ. ಇಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ. ಆದರೆ ಪ್ರಾಂಶುಪಾಲರು ಈ ವಿದ್ಯಾರ್ಥಿಗಳ ಮೇಲೆ ಪೂರ್ವಾಗ್ರಹ ಪೀಡಿತರಾಗಿದ್ದಾರೆಂದು ಫಯಾಝ್ ದೂರಿದರು.
ಹಾಲ್ ಟಿಕೆಟ್ ನಿರಾಕರಣೆ ಕುರಿತಂತೆ ಪ್ರಾಂಶುಪಾಲರನ್ನು ಭೇಟಿಯಾಗಿ ಮಾತುಕತೆ ನಡೆಸುವಂತೆ ವಿದ್ಯಾರ್ಥಿಗಳ ಪೋಷಕರಿಗೆ ಸೂಚಿಸಲಾಗಿತ್ತು. ಅದರಂತೆ ಕಳೆದ ಏಳು ದಿನಗಳಿಂದ ಕಾಲೇಜಿನ ಗೇಟ್ನ ಎದುರು ಬಂದು ಕಾದು ಹಿಂದಿರುಗುತ್ತಿದ್ದೇವೆ. ಆದರೆ ಪ್ರಾಂಶುಪಾಲರನ್ನು ಭೇಟಿಯಾಗಲು ಅವಕಾಶವನ್ನು ನೀಡಲಿಲ್ಲ ಎಂದು ವಿದ್ಯಾರ್ಥಿಗಳ ಪೋಷಕರು ದೂರಿದ್ದಾರೆ.
ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಮುಖಂಡರಾದ ಶಾಕೀರ್, ರಿಯಾಝ್, ಫಯಾಝ್ ಮಂಜನಾಡಿ ಮತ್ತಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
Comments are closed.