ಬಂಟ್ವಾಳ, ಅ. 25: ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿಯ ಕರೋಪ್ಪಾಡಿ ಗ್ರಾಮದ ಪಾದೆಕಲ್ಲು, ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಬೇಟೆಗೆಂದು ಸ್ಫೋಟಕವಿಟ್ಟು ದನವೊಂದರ ಸಾವಿಗೆ ಕಾರಣವಾದ ಪ್ರಕರಣದ ಇನ್ನಿಬ್ಬರು ಆರೋಪಿಗಳನ್ನು ವಿಟ್ಲ ಪೊಲೀಸರು ಮಾಣಿ ಜಂಕ್ಷನ್ನಲ್ಲಿ ಸೋಮವಾರ ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ(30) ಹಾಗೂ ವಿಜಯ ಜಾನ್ (30) ಎಂದು ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ(48) ಹಾಗೂ ಗೋವಿಂದ ನಾಯ್ಕ (64) ಎಂಬವರನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.
ಈ ಆರೋಪಿಗಳು ಪ್ರಾಣಿಗಳನ್ನ ಕೊಲ್ಲುವ ಉದ್ದೇಶದಿಂದ ಚೆಲ್ಲಂಗಾರು ಗುಡ್ಡ ಪ್ರದೇಶದಲ್ಲಿ ಸ್ಫೋಟಕ ಇಟ್ಟಿದ್ದರಿಂದ ಇತ್ತೀಚೆಗೆ ರಾಧಾಕೃಷ್ಣ ಮೂಲ್ಯ ಎಂಬುವರ ಹಸುವೊಂದು ಆ ಸ್ಫೋಟಕ ಸಿಡಿದು ಮೃತಪಟ್ಟಿತ್ತು. ಈ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಇವರು ಕಾಡು ಹಂದಿ ಸೇರಿ ಪ್ರಾಣಿಗಳನ್ನು ಮಾಂಸದ ಆಸೆಯಲ್ಲಿ ಹತ್ಯೆಗೈಯ್ಯಲು ಸ್ಫೋಟಕಗಳನ್ನು ಬಳಸುತ್ತಿದ್ದು ರಾತ್ರಿಯಾಗುತ್ತಿದ್ದಂತೆ ಗುಡ್ಡಗಳಲ್ಲಿ ಸ್ಫೋಟಕವಿಟ್ಟು ಬೆಳಗಾಗುತ್ತಿದ್ದಂತೆ ತೆಗೆದು ಬಿಡುತ್ತಿದ್ದರೆನ್ನಲಾಗಿದೆ.ಆರೋಪಿಗಳು ಹಂದಿ, ಮೀನು ಮುಂತಾದವುಗಳನ್ನು ಶಿಕಾರಿ ಮಾಡಲು ಈ ಕೃತ್ಯವನ್ನು ಎಸಗುತ್ತಿದ್ದರು ಎನ್ನಲಾಗಿದೆ.
ಹಸು ಮಾಲಕ ಚೆಲ್ಲಂಗಾರು ರಾಧಾಕೃಷ್ಣ ಮೂಲ್ಯ ನೀಡಿದ ದೂರಿನ ಮೇರೆಗೆ ಕರೋಪಾಡಿ ಗ್ರಾಮದ ಚೆಲ್ಲಂಗಾರು ನಿವಾಸಿ ಗೋವಿಂದ ನಾಯ್ಕನನ್ನು ಬಂಧಿಸಿ ವಿಚಾರಿಸಿದಾಗ ಇರ್ದೆ ದೂಮಡ್ಕ ಪೆಲತ್ತಾಜೆ ನಿವಾಸಿ ಶೀನಪ್ಪ ನಾಯ್ಕ ಸ್ಫೋಟಕ ತಯಾರಿಸಿ ಗುಡ್ಡದಲ್ಲಿ ಇರಿಸುತ್ತಿದ್ದು, ಇದಕ್ಕೆ ಹಾಸನ ಹಾಲೂರು ನಿವಾಸಿ ವಿನೋದ್ ಶೆಟ್ಟಿ ಸಹಕರಿಸಿ, ವಿಜಯ ಜಾನ್ ತನ್ನ ರಿಕ್ಷಾದಲ್ಲಿ ಇವರನ್ನು ಕರೆದು ತರುತ್ತಿದ್ದ ಎಂಬ ಮಾಹಿತಿಯನ್ನು ನೀಡಿದ್ದ.
ಶೀನಪ್ಪನಾಯ್ಕ ಗರ್ನಾಲ್, ಕೇಪು ಪಟಾಕಿಯನ್ನು ಸೇರಿಸಿ ಕಲ್ಲಿನ ನಡುವೆ ಕಟ್ಟಿ ಮಾಂಸದ ತ್ಯಾಜ್ಯದಲ್ಲಿ ಇಟ್ಟು ರಾತ್ರಿ ಸಮಯ ಗುಡ್ಡ ಪ್ರದೇಶದಲ್ಲಿಟ್ಟು ಕಾಡುಹಂದಿಯನ್ನು ಬೇಟೆಯಾಡುತ್ತಿದ್ದ. ಈ ಭಾಗದಲ್ಲಿ ಸುಮಾರು 6 ತಿಂಗಳಲ್ಲಿ 6 ಬಾರಿ ಸ್ಫೋಟಕ ಇಟ್ಟಿದ್ದು 2 ಬಾರಿ ಕಾಡುಹಂದಿ ಹತ್ಯೆಯಾಗಿದೆ. ಇದೇ ಆಸೆಯಲ್ಲಿ ಮತ್ತೆ ಸ್ಫೋಟಕವನ್ನು ಇಟ್ಟಿದ್ದು, ಇದು ಸ್ಫೋಟಗೊಂಡು ದನ ಸಾಯುವಂತಾಗಿದೆ ಎಂದು ವಿಚಾರಣೆಯ ವೇಳೆ ಶೀನಪ್ಪ ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೂಷಣ್ ಜಿ. ಬೊರಸೆ, ಬಂಟ್ವಾಳ ಉಪ ವಿಭಾಗದ ಡಿವೈಎಸ್ಪಿ ರವೀಶ್ ಸಿ.ಆರ್. ಮಾರ್ಗದರ್ಶನದಲ್ಲಿ ವಿಟ್ಲ ಪೊಲೀಸ್ ಸಹಾಯಕ ಉಪ ನಿರೀಕ್ಷಕ ಕೊರಗಪ್ಪ ನಾಯ್ಕ, ಆನಂದ ಪೂಜಾರಿ, ಸಿಬ್ಬಂದಿಯಾದ ಜಯಕುಮಾರ್, ಬಾಲಕೃಷ್ಣ, ಪ್ರವೀಣ್ ರೈ, ರಮೇಶ್ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳನ್ನು ವಿಟ್ಲ ಠಾಣಾ ಪೊಲೀಸರು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.