ಅಂತರಾಷ್ಟ್ರೀಯ

ಪಾಕಿಸ್ತಾನದಲ್ಲಿ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರ ದಾಳಿಗೆ 60 ಸಾವು; 118 ಜನಕ್ಕೆ ಗಾಯ

Pinterest LinkedIn Tumblr

pak

ಕರಾಚಿ: ಪಾಕಿಸ್ತಾನದ ಖ್ವೆಟ್ಟಾ ನಗರದಲ್ಲಿನ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಉಗ್ರರು ಸೋಮವಾರ ಇಡೀ ರಾತ್ರಿ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, 60 ಮಂದಿ ಪೊಲೀಸ್‌ ಪ್ರಶಿಕ್ಷಣಾರ್ಥಿಗಳು ಸಾವಿಗೀಡಾಗಿದ್ದಾರೆ. ಮೂವರು ಉಗ್ರರನ್ನು ಹೊಡೆದುರಿಳಿಸಲಾಗಿದೆ. 118 ಜನ ಗಾಯಗೊಂಡಿದ್ದಾರೆ.

ಬಲೂಚಿಸ್ತಾನ ಪ್ರಾಂತ್ಯದ ಸರ್ಯಬ ರಸ್ತೆಯಲ್ಲಿನ ಪೊಲೀಸ್‌ ತರಬೇತಿ ಕೇಂದ್ರದ ಮೇಲೆ ಸೋಮವಾರ ರಾತ್ರಿ 11.10ಕ್ಕೆ ಉಗ್ರರು ದಾಳಿ ಆರಂಭಿಸಿದ್ದಾರೆ. ಪಾಕಿಸ್ತಾನ ಭದ್ರತಾ ಪಡೆ ಸಿಬ್ಬಂದಿ ಪ್ರತಿ ದಾಳಿ ನಡೆಸಿ ನೂರಾರು ಪ್ರಶಿಕ್ಷಣಾರ್ಥಿಗಳನ್ನು ರಕ್ಷಿಸಿದ್ದಾರೆ. ಉಗ್ರರು ಹಲವರನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು, ಭದ್ರತಾಪಡೆ ವಸತಿ ನಿಲಯವನ್ನು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ದಾಳಿಯಲ್ಲಿ 106ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಈಗಾಗಲೇ ಉಗ್ರರಿಗಾಗಿ ಪಾಕಿಸ್ತಾನ ಸೇನೆ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪಾಕಿಸ್ತಾನ ಸೇನೆ ಹಾಗೂ ಉಗ್ರರ ನಡುವೆ ಭಾರಿ ಪ್ರಮಾಣದಲ್ಲಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ಪಾಕಿಸ್ತಾನ ಸರ್ಕಾರ ವಕ್ತಾರರು ಮಾಹಿತಿ ನೀಡಿದ್ದಾರೆ.

ಕೊಠಡಿಗಳಲ್ಲಿ 250 ಕ್ಕೂ ಹೆಚ್ಚು ಪೊಲೀಸರಿದ್ದರು. ಮತ್ತಷ್ಟು ಪೊಲೀಸರನ್ನು ಉಗ್ರರು ಒತ್ತೆಯಾಳುಗಳನ್ನಾಗಿರಿಸಿಕೊಂಡಿದ್ದಾರೆ. ಇದೀಗ ಪಾಕಿಸ್ತಾನ ಸೇನೆ ತರಬೇತಿ ಶಾಲೆಯನ್ನು ಸುತ್ತುವರೆದಿದ್ದು, ಉಗ್ರರನ್ನು ಮಟ್ಟ ಹಾಕಲು ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಕಾರ್ಯಾಚರಣೆ ವೇಳೆ ಪಾಕಿಸ್ತಾನ ಸೇನೆ ಇದೀಗ ಮೂವರು ಉಗ್ರರನ್ನು ಹೊಡೆದುರುಳಿಸಿದೆ ಎಂದು ವರದಿಗಳು ತಿಳಿಸಿವೆ.

ಉಗ್ರರ ದಾಳಿ ಕುರಿತಂತೆ ಮಾತನಾಡಿರುವ ಪಾಕಿಸ್ತಾನ ಗೃಹ ಸಚಿವ ಸರ್ಫಾರಾಜ್ ಬುಗ್ತಿ ಅವರು, ಪಾಕಿಸ್ತಾನ ಸೇನೆ ಇದೀಗ ಓರ್ವ ಉಗ್ರನನ್ನು ಹತ್ಯೆ ಮಾಡಿದೆ. ಇಬ್ಬರು ಉಗ್ರರು ತಮ್ಮನ್ನು ತಾವೇ ಸ್ಫೋಟಿಸಿಕೊಂಡಿದ್ದಾರೆ. ಮತ್ತಷ್ಟು ಉಗ್ರರು ಅಡಗಿರುವ ಶಂಕೆಗಳಿದ್ದು, ಕಾರ್ಯಾಚರಣೆಯನ್ನು ಮುಂದುವರೆಸಲಾಗುತ್ತಿದೆ ಎಂದು ಹೇಳಿದ್ದಾರೆ.

ನಾಲ್ಕು ಮಂದಿಯಿದ್ದ ಉಗ್ರರ ಗುಂಪು ಪೊಲೀಸ್ ತರಬೇತಿ ಶಾಲೆಯ ಮೇಲೆ ದಾಳಿ ಮಾಡಿತ್ತು. ಹಾಸ್ಟೆಲ್ ಬಳಿಯಿದ್ದ ಭದ್ರತಾ ಸಿಬ್ಬಂದಿಯ ಬಳಿ ಗನ್ ಗಳನ್ನು ಕಿತ್ತುಕೊಂಡು ಹಾಸ್ಟೆಲ್ ಪ್ರವೇಶ ಮಾಡಿದ್ದಾರೆ. ಇದೀಹ ಹಾಸ್ಟೆಲ್ ಸುತ್ತಲೂ ಸೇನಾ ಪಡೆ ಸುತ್ತುವರೆದಿದ್ದು, ಕಾರ್ಯಾಚರಣೆ ನಡೆಸುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. ದಾಳಿಯ ಹೊಣೆಯನ್ನು ತಾಲಿಬಾನ್ ಉಗ್ರ ಸಂಘಟನೆ ಹೊತ್ತುಕೊಂಡಿರುವುದಾಗಿ ವರದಿಗಳು ತಿಳಿಸಿವೆ.

Comments are closed.