
ಮಂಗಳೂರು, ಅ.24: ಕಾಲೇಜು ವಿದ್ಯಾರ್ಥಿಯೋರ್ವ ಕಾಲೇಜಿನ ಪ್ರಾಂಶುಪಾಲರ ಮೇಲೆಯೇ ಹಲ್ಲೆ ನಡೆಸಿದ ಘಟನೆಯೊಂದು ಇತ್ತೀಚಿಗೆ ನಗರದ ಮಿಲಾಗ್ರಿಸ್ ಕಾಲೇಜಿನಲ್ಲಿ ನಡೆದಿದ್ದು, ಕೃತ್ಯವನ್ನು ಖಂಡಿಸಿ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳ ಪೋಷಕರು ಇಂದು ಬೆಳಿಗ್ಗೆ ಕಾಲೇಜಿನ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮಿಲಾಗ್ರಿಸ್ ಕಾಲೇಜಿನ ಶಾಹನವಾಝ್ ಎಂಬ ವಿದ್ಯಾರ್ಥಿಯ ಹಾಜರಾತಿ ಕೊರತೆ ಸಹಿತ ಹಲವು ಕಾರಣದಿಂದ ವಿ.ವಿ.ಯ ನಿಯಮದಂತೆ ಹಾಲ್ ಟಿಕೆಟ್ ನಿರಾಕರಣೆ ಮಾಡಲಾಗಿತ್ತು. ಪರೀಕ್ಷಾ ಹಾಲ್ ಟಿಕೆಟ್ ನೀಡದ ಕಾರಣ ಸಿಟ್ಟಿಗೆದ್ದ ಈತ ವಿದ್ಯಾರ್ಥಿಗಳ ಹಾಜರಾತಿ ಪುಸ್ತಕದ ಹಾಳೆ ಹರಿದು ಹಾಕಿ ಬಳಿಕ ತರಗತಿ ಮುಗಿಸಿ ಹೊರ ಬಂದ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ಅವರ ಮೇಲೆ ಹಲ್ಲೆ ನಡೆಸಿದ್ದಾನೆ. ಹಲ್ಲೆಗೀಡಾದ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ಅವರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಹಲ್ಲೆ ನಡೆಸಿದ ವಿದ್ಯಾರ್ಥಿಯನ್ನು ಕೂಡಲೇ ಬಂಧಿಸಿ ಕಾನೂನು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.


ಶಾಹ್ನವಾಝ್ ಕಾಲೇಜಿನಲ್ಲಿ ತರಗತಿಗೆ ನಿರಂತರ ಗೈರು ಹಾಜರಾಗುತ್ತಿದ್ದನೆಂದು ಹೇಳಲಾಗಿದ್ದು, ಈ ಬಗ್ಗೆ ಪ್ರಾಂಶುಪಾಲಕರು ಆತನಿಗೆ ಎಚ್ಚರಿಕೆ ನೀಡಿದ್ದರೆನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆಕ್ಟೋಬರ್ 20ರಂದು ಮಧ್ಯಾಹ್ನ ಪ್ರಾಂಶುಪಾಲರು ಊಟಕ್ಕೆ ಹೋಗುವ ಸಂದರ್ಭದಲ್ಲಿ ಶಾಹ್ನವಾಝ್ ಹಠಾತ್ ಬಂದು ಹಲ್ಲೆ ನಡೆಸಿದ್ದಾನೆ ಎಂದು ಆರೋಪಿಸಲಾಗಿದ್ದು, ಈ ಬಗ್ಗೆ ಪ್ರಾಂಶುಪಾಲರು ವಿದ್ಯಾರ್ಥಿ ವಿರುದ್ಧ ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ವಿದ್ಯಾರ್ಥಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿಯಿಂದ ಹಲ್ಲೆ : ಜಮಾಅತೆ ಇಸ್ಲಾಮಿ ಹಿಂದ್ ಖಂಡನೆ
ಮಂಗಳೂರು :ನಗರದ ಮಿಲಾಗ್ರಿಸ್ ಕಾಲೇಜಿನ ಕಾಲೇಜಿನ ಪ್ರಾಂಶುಪಾಲ ಫಾ.ಮೈಕಲ್ ಸಾಂತುಮೆಯರ್ ರವರಿಗೆ ಅದೇ ಕಾಲೇಜಿನ ವಿದ್ಯಾರ್ಥಿ ಶಾಹನವಾಝ್ ಎಂಬಾತ ನಡೆಸಿದ ಹಲ್ಲೆಯನ್ನು ಜಮಾಅತೆ ಇಸ್ಲಾಮಿ ಹಿಂದ್ ದ.ಕ.ಜಿಲ್ಲಾ ಸಮಿತಿ ಖಂಡಿಸಿದೆ.
ಪ್ರಾಂಶುಪಾಲರ ಮೇಲೆ ವಿದ್ಯಾರ್ಥಿಯೊಬ್ಬ ನಡೆಸಿದ ಹಲ್ಲೆಯು ಅತ್ಯಂತ ಕೆಟ್ಟ ಬೆಳವಣಿಗೆಯಾಗಿದ್ದು, ಇದನ್ನು ಎಲ್ಲರೂ ಒಕ್ಕೊರಲಿನಿಂದ ಖಂಡಿಸಬೇಕು. ವಿದ್ಯಾರ್ಥಿಯೊಬ್ಬ ಗುರುಗಳು ಹಾಗೂ ಧಾರ್ಮಿಕ ವಿದ್ವಾಂಸರ ಮೇಲೆ ಹಲ್ಲೆ ನಡೆಸುವುದು ಅತ್ಯಂತ ಆಘಾತಕಾರಿ ಬೆಳವಣಿಗೆಯಾಗಿದೆ ಎಂದಿರುವ ಜಮಾಅತೆ ಇಸ್ಲಾಮಿ ಹಿಂದ್ ದ.ಕ.ಜಿಲ್ಲಾ ಸಮಿತಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗೃತಿ ಮೂಡಿಸಬೇಕು. ಅಲ್ಲದೆ, ಹಲ್ಲೆ ನಡೆಸಿದ ವಿದ್ಯಾರ್ಥಿಯ ಮೇಲೆ ಸೂಕ್ತ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ವಿದ್ಯಾರ್ಥಿಯ ಬಂಧನಕ್ಕೆ ಆಗ್ರಹ
ಬೆಳ್ತಂಗಡಿ: ಮಂಗಳೂರಿನ ಮಿಲಾಗ್ರಿಸ್ ಕಾಲೇಜಿನಲ್ಲಿ ಪ್ರಾಂಶುಪಾಲರ ಮೇಲೆ ಹಲ್ಲೆ ನಡೆಸಿದ ವಿದ್ಯಾರ್ಥಿಯ ವಿರುದ್ಧ ಪೊಲೀಸ್ ಇಲಾಖೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲವಾದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಥೋಲಿಕ್ ಸಭಾ ಬೆಳ್ತಂಗಡಿ ವಲಯ ಸಮಿತಿ ಅಧ್ಯಕ್ಷ ಅರುಣ್ ಸೆರಾವೋ ಪತ್ರಿಕಾಗೋಷ್ಠಿ ಮೂಲಕ ಎಚ್ಚರಿಸಿದ್ದಾರೆ.
ಕರಾವಳಿಯಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿದ್ದು ಶಿಕ್ಷಕ ಸಮುದಾಯ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗುತ್ತಿದೆ. ಈ ಬಗ್ಗೆ ಸರಕಾರ ಕೂಡಲೆ ಗಮನ ಹರಿಸಬೇಕು. ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
Comments are closed.