ರಾಷ್ಟ್ರೀಯ

ನಕಲಿ ಗಂಡ-ಹೆಂಡತಿಯ ದಾಖಲೆಗಳನ್ನು ಬಳಸಿ ಟೊರಾಂಟೊಗೆ ಹಾರಲು ಯತ್ನಿಸಿದ್ದ ಯುವಕ-ಯುವತಿ

Pinterest LinkedIn Tumblr

flight

ಹೊಸದಿಲ್ಲಿ : ತಾವು ಗಂಡ-ಹೆಂಡತಿಯೆಂದು ಪೋಸ್ ನೀಡುತ್ತಾ ನಕಲಿ ದಾಖಲೆಗಳನ್ನು ಬಳಸಿಕೊಂಡು ಟೊರಾಂಟೊಗೆ ಹಾರಲು ಯತ್ನಿಸಿದ್ದ ಯುವಕ-ಯುವತಿಯನ್ನು ಸಿಐಎಸ್‌ಎಫ್ ತಂಡ ವಶಕ್ಕೆ ಪಡೆದಿರುವ ಘಟನೆ ಸೋಮವಾರ ಇಲ್ಲಿ ನಡೆದಿದ್ದು, ಬಂಧಿತರ ವಿರುದ್ಧ ಮಾನವ ಕಳ್ಳಸಾಗಣೆ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಇಂದಿರಾಗಾಂಧಿ ಇಂಟರ್ನ್ಯಾಶನಲ್ ವಿಮಾನ ನಿಲ್ದಾಣದ ಟರ್ಮಿನಲ್-3ರಲ್ಲಿರುವ ವಿದೇಶಿ ಏರ್ಲೈನ್ ಕೌಂಟರ್ನಲ್ಲಿ ಬೆಳಗ್ಗೆ 3ರ ಸುಮಾರಿಗೆ ಈ ಸಂಗತಿ ಬೆಳಕಿಗೆ ಬಂದಿದೆ. ಟೊರಾಂಟೊಗೆ ಪ್ರಯಾಣಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದ ಅಮಿತ್ ಚವಾಣ್-ಶೀತಲ್ ಚವಾಣ್ ಹೆಸರಿನ ದಂಪತಿ ಲಗೇಜ್ಗಳನ್ನು ತಪಾಸಣೆಗೆ ನೀಡಿದೆ. ಆದರೆ, ಬೋರ್ಡಿಂಗ್ ಪಾಸ್ಗಳನ್ನು ಪಡೆಯದೇ, ಲಗೇಜ್ನ್ನು ಏರ್ಲೈನ್ ಕೌಂಟರ್ನಲ್ಲಿ ಬಿಟ್ಟುಹೋಗಿತ್ತು. ಈ ಬಗ್ಗೆ ಸಿಐಎಸ್‌ಎಫ್ನ ಭದ್ರತಾ ಸಿಬ್ಬಂದಿ ವಿದೇಶಿ ಏರ್ಲೈನ್ ಕೌಂಟರ್ಗೆ ಮಾಹಿತಿ ನೀಡಿದ್ದರು.

ಟಿಕೆಟ್ ಮ್ಯಾನೇಜರ್ ದಂಪತಿಯ ಪಾಸ್ಪೋರ್ಟ್ ಪರೀಕ್ಷೆ ನಡೆಸುವಂತೆ ಸೂಚಿಸಿದ್ದರು. ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್(ಸಿಐಎಫ್‌ಐ)ನ ಅಧಿಕಾರಿಗಳು ತಕ್ಷಣವೇ ಕಾರ್ಯಪ್ರವೃತ್ತರಾಗಿ ಏರ್ಪೋರ್ಟ್ನ ಸಿಸಿಟಿವಿ ಪರೀಕ್ಷಿಸಿದ್ದಾರೆ. 3000 ಕ್ಯಾಮರಾಗಳ ದೃಶ್ಯಗಳ ತುಣುಕುಗಳ ಪರೀಕ್ಷೆಯ ಬಳಿಕ ದಂಪತಿ ಶೌಚಾಲಯವನ್ನು ಪ್ರವೇಶಿಸಿ ಡ್ರೆಸ್ ಬದಲಿಸಿಕೊಂಡು ಹೊರ ಬಂದಿರುವುದು ಗೊತ್ತಾಗಿದೆ. ಆ ನಂತರ ಅವರಿಬ್ಬರು ಪುಣೆಗೆ ತೆರಳುವ ವಿಮಾನ ಏರಿದ್ದು ತಿಳಿದುಬಂದಿದೆ.

ಸಿಐಎಸ್‌ಎಫ್ ತಂಡ ಪುಣೆಗೆ ಹೊರಟಿದ್ದ ವಿಮಾನವನ್ನು ತಡೆ ಹಿಡಿಯಲು ಯತ್ನಿಸಿತ್ತು. ಆದರೆ ಅಷ್ಟೊತ್ತಿಗಾಗಲೇ ಆ ದಂಪತಿ ಪುಣೆಗೆ ನಿರ್ಗಮಿಸಿದ್ದಾರೆಂದು ತಿಳಿದುಬಂತು. ಪುಣೆಯಲ್ಲಿರುವ ತಮ್ಮ ತಂಡಕ್ಕೆ ಮಾಹಿತಿ ನೀಡಿರುವ ಸಿಐಎಸ್‌ಎಫ್ ಅಲ್ಲಿ ದಂಪತಿಯ ಬಗ್ಗೆ ನಿಗಾ ಇಡುವಂತೆ ಎಚ್ಚರಿಸಿತ್ತು.

ಇದೇ ವೇಳೆ, ದಿಲ್ಲಿ ವಿಮಾನ ನಿಲ್ದಾಣಕ್ಕೆ ಶ್ವಾನ ದಳವನ್ನು ಕರೆಸಿ ದಂಪತಿ ಬಿಟ್ಟುಹೋಗಿದ್ದ ಲಗೇಜ್ನ್ನು ಪರೀಕ್ಷಿಸಲಾಗಿತ್ತು. ಸಿಐಎಸ್‌ಎಫ್ ತಂಡ ಕೊನೆಗೂ ಪುಣೆಯಲ್ಲಿ ಆ ದಂಪತಿಯನ್ನು ಬಂಧಿಸಲು ಸಫಲವಾಯಿತು. ಬಂಧಿತರು ದಂಪತಿಯಲ್ಲ. ಯುವಕ-ಯುವತಿ ನಕಲಿ ಪಾಸ್ಪೋರ್ಟ್ ಬಳಸಿಕೊಂಡು ಟೊರಾಂಟೊಗೆ ತೆರಳಲು ನಿರ್ಧರಿಸಿದ್ದರು.

ನಕಲಿ ಪಾಸ್ಪೋರ್ಟ್ ಮಾಡಿಕೊಟ್ಟಿದ್ದ ಏಜೆಂಟ್ ಏರ್ಪೋರ್ಟ್ಗೆ ಬಾರದಿರುವುದು ಹಾಗೂ ದಿಲ್ಲಿ ಏರ್ಪೋರ್ಟ್ ಸಿಬ್ಬಂದಿಗೆ ತಮ್ಮ ಮೇಲೆ ಅನುಮಾನ ಬಂದಿರುವುದನ್ನು ಗ್ರಹಿಸಿದ ಈ ಇಬ್ಬರು ಅಲ್ಲಿಂದ ತಪ್ಪಿಸಿಕೊಂಡು ಪುಣೆಗೆ ಪರಾರಿಯಾಗಿದ್ದಾರೆ ಎಂದು ಸಿಐಎಸ್‌ಎಫ್ ಅಧಿಕಾರಿಗಳು ತಿಳಿಸಿದ್ದಾರೆ.

ಸಿಕ್ಕಿಬಿದ್ದ ಈ ಇಬ್ಬರನ್ನು ಅಹ್ಮದಾಬಾದ್ನ ಕೆ. ಪಟೇಲ್ ಹಾಗೂ ಎಂ.ಪಟೇಲ್ ಎಂದು ಗುರುತಿಸಲಾಗಿದೆ. ಬಂಧಿತರನ್ನು ದಿಲ್ಲಿಯ ವಲಸೆ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ. ಈ ಇಬ್ಬರನ್ನು ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಕೃಪೆ : ವಾಭಾ

Comments are closed.