ಕರಾವಳಿ

ಪೂಜಾರಿ – ಐವನ್ ಶೀತಲ ಸಮರ : ಐವನ್ ಡಿಸೋಜರಿಂದ ಶ್ರೀಕ್ಷೇತ್ರ ಕದ್ರಿಯಲ್ಲಿ ಗೂಡು ದೀಪ ಸ್ಫರ್ಧೆ

Pinterest LinkedIn Tumblr

kadri_temple_guddip1

ಮಂಗಳೂರು,ಅ.24: ನಗರದ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಈ ಬಾರಿ ದೀಪಾವಳಿ ಹಬ್ಬದ ಅಂಗವಾಗಿ ಅ.29ರಂದು ಗೂಡು ದೀಪ, ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆ ಹಾಗೂ ಅಕ್ಕಿ ಮತ್ತು ಕನ್ನಡಕ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.ಕದ್ರಿ ಮಂಜುನಾಥೇಶ್ವರ ದೇವಳದ ರಾಜಾಂಗಣದಲ್ಲಿ ಈ ಎಲ್ಲಾ ಕಾರ್ಯಕ್ರಮಗಳು ನಡೆಯಲಿವೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ತಿಳಿಸಿದರು.

ರವಿವಾರ ತಮ್ಮ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಅ.29ರಂದು ಮಧ್ಯಾಹ್ನ 3ಕ್ಕೆ ದೀಪಾವಳಿ ಮತ್ತು ಭಾವೈಕ್ಯತೆ ಎಂಬ ವಿಷಯದಲ್ಲಿ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಇದರಲ್ಲಿ 100ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗವಹಿಸಲಿದ್ದು, ಸ್ಪರ್ಧಿಗಳಿಗೆ ತಲಾ 3 ನಿಮಿಷ ಕಾಲಾವಕಾಶ ನೀಡಲಾಗಿದೆ. ದೇವಸ್ಥಾನದ ಅಭಿಷೇಕ ಮಂದಿರದಲ್ಲಿ ದೀಪಾವಳಿ ಹಬ್ಬಕ್ಕೆ ಪೂರಕವಾಗುವ ಚಿತ್ರಕಲಾ ಸ್ಪರ್ಧೆಯೂ ಸಹ ನಡೆಯಲಿದೆ ಎಂದು ಹೇಳಿದರು.

ಸಂಜೆ 4ಕ್ಕೆ ಗೂಡು ದೀಪ ಸ್ಪರ್ಧೆಗೆ ಚಾಲನೆ ನೀಡಲಾಗುವುದು. ಆಧುನಿಕ ಹಾಗೂ ಸಾಂಪ್ರದಾಯಿಕ ವಿಭಾಗಗಳಲ್ಲಿ ಸ್ಪರ್ಧೆ ನಡೆಯಲಿದ್ದು, ಸುಮಾರು 300ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಗೂಡು ದೀಪ ಸ್ಪರ್ಧೆಯಲ್ಲಿ ವಿಜೇತರಿಗೆ 1 ಗ್ರಾಂ. ಬಂಗಾರ ಹಾಗೂ ದ್ವಿತೀಯ ಮತ್ತು ತೃತೀಯ ಬಹುಮಾನವಾಗಿ ಚಿನ್ನ ನೀಡಲಾಗುವುದು ಎಂದವರು ಹೇಳಿದರು. ಸಂಜೆ 4:30ಕ್ಕೆ ತಲಾ 5 ಕೆ.ಜಿ.ಯಂತೆ 1,000 ಮಂದಿಗೆ ಅಕ್ಕಿ ವಿತರಿಸಲಾಗುವುದು. ಈ ಬಗ್ಗೆ ಈಗಾಗಲೇ ಅರ್ಹರಿಗೆ ಕೂಪನ್ ನೀಡಲಾಗಿದೆ. ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ವೈದ್ಯರು ನೀಡಿದ ಸಲಹೆ ಮೇರೆಗೆ ಅರ್ಹ ಫಲಾನುಭವಿಗಳಾದ 400 ಮಂದಿಗೆ ಕನ್ನಡಕ ವಿತರಿಸಲಾಗುವುದು.

ಸಂಜೆ 5ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಡಾ.ಆಲೋಶಿಯಸ್ ಪೌಲ್ ಡಿಸೋಜಾ, ಮೌಲಾನಾ ಜಾಫರ್ ಸಾಧಿಕ್ ಪೈಝಿ, ಸಚಿವರಾದ ಬಿ.ರಮಾನಾಥ ರೈ, ಯು.ಟಿ.ಖಾದರ್, ಶಾಸಕರಾದ ಅಭಯಚಂದ್ರ ಜೈನ್, ಟಿ.ಶಕುಂತಳಾ ಶೆಟ್ಟಿ, ಜೆ.ಆರ್.ಲೋಬೊ ಭಾಗವಹಿಸಲಿದ್ದಾರೆ. ಮನಪಾ ಮೇಯರ್ ಹರಿನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ವಿವರಿಸಿದರು.

ಕಾಂಗ್ರೆಸ್‌ನ ವಿವಿಧ ಘಟಕದ ಪ್ರಮುಖರಾದ ಅಮೃತ್ ಕದ್ರಿ, ರಫೀಕ್, ನಾಗೇಂದ್ರ ಕುಮಾರ್, ಎನ್.ಪಿ.ಮನುರಾಜ್, ಭಾಸ್ಕರ್ ರಾವ್, ವಾಲ್ಟರ್ ಲೋಬೊ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

kudroli-goodudeepa_1

ಕುದ್ರೋಳಿ ಶ್ರೀಕ್ಷೇತ್ರದ ಗೂಡು ದೀಪ ಸ್ಫರ್ಧೆ ಚಿತ್ರ

kudroli-goodudeepa_2

ಕುದ್ರೋಳಿ ಶ್ರೀಕ್ಷೇತ್ರದ ವಿರುದ್ಧ ಪರ್ಯಾಯ ಗೂಡು ದೀಪ ಸ್ಫರ್ಧೆ..?

ಕಾಂಗ್ರೆಸ್‌ನ ಹಿರಿಯ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ಹಾಗೂ ಮಂಗಳೂರು ದಸರಾ ರೂವಾರಿ ಬಿ.ಜನಾರ್ಧನ ಪೂಜಾರಿ ಹಾಗೂ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜಾ ಅವರ ಮಧ್ಯೆ ಈಗಾಗಲೇ ಶೀತಲ ಸಮರ ನಡೆಯುತ್ತಿದ್ದು, ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಉದ್ಘಾಟನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯರವರನ್ನು ಹೋಗದಂತೆ ತಡೆದ ಆರೋಪ ಕೂಡ ಐವನ್ ಮೇಲಿದೆ. ಈ ಹಿನ್ನೆಲೆಯಲ್ಲಿ ಕೆಲವು ಬಿಲ್ಲವ ಮುಖಂಡರು ಕೂಡ ಐವನ್ ವಿರುದ್ಧ ಸಮರ ಸಾರಿದ್ದಾರೆ. ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಐವನ್ ವಿರುದ್ಧ ಬಹಿರಂಗ ಹೇಳಿಕೆ ಕೂಡ ನೀಡಿದ್ದಾರೆ.

ಇದೀಗ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವಿರೋಧ ಕಟ್ಟಿಕೊಂಡಿರುವ ಐವನ್ ಡಿಸೋಜಾ ಅವರು,ಈ ಎಲ್ಲಾ ಘಟನೆಗಳ ಹಿನ್ನೆಲೆಯಲ್ಲಿ ಕುದ್ರೋಳಿ ಶ್ರೀಕ್ಷೇತ್ರದ ಗೂಡು ದೀಪ ಸ್ಫರ್ಧೆಗೆ ಪರ್ಯಾಯವಾಗಿ ಕದ್ರಿ ಮಂಜುನಾಥೇಶ್ವರ ದೇವಸ್ಥಾನದಲ್ಲಿ ಗೂಡು ದೀಪ ಸ್ಫರ್ಧೆ ಸೇರಿದಂತೆ ಇತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬರುತ್ತಿದೆ.

Comments are closed.