ಕರಾವಳಿ

ವಾಕಿಂಗ್ ವೇಳೆ ಅಸೈಗೋಳಿ ಬಳಿ ದುಷ್ಕರ್ಮಿಗಳಿಂದ ಹಲ್ಲೆಗೊಳಗಾಗಿದ್ದ ಕಾರ್ತಿಕ್ ಆಸ್ಪತ್ರೆಯಲ್ಲಿ ಸಾವು

Pinterest LinkedIn Tumblr

kartik_died_asaigoli

ಮಂಗಳೂರು / ಕೊಣಾಜೆ, ಅ.23: ಬೆಳಗಿನ ಜಾವ ವಾಕಿಂಗ್ ಹೋಗುತ್ತಿದ್ದ ವೇಳೆ ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸಮೀಪದ ಗಣೇಶ್ ಮಹಲ್ ಬಳಿ ಅಪರಿಚಿತ ದುಷ್ಕರ್ಮಿಗಳ ತಂಡದಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.

ಪಜೀರು ಗ್ರಾಮದ ಸುದರ್ಶನ ನಗರದ ಉಮೇಶ್ ಎಂಬವರ ಪುತ್ರ ಕಾರ್ತಿಕ್ ರಾಜ್ (27) ಮೃತಪಟ್ಟ ಯುವಕ.

ಪಜೀರು ಸುದರ್ಶನ ನಗರ ನಿವಾಸಿಯಾಗಿರುವ ಕಾರ್ತಿಕ್‌ ದಿನಂಪ್ರತಿ ಬೆಳಗ್ಗೆ 4.30ಗಂಟೆಗೆ ಎದ್ದು ಕೊಣಾಜೆ ಮಂಗಳೂರು ವಿ.ವಿ. ಮಾರ್ಗವಾಗಿ ಅಸೈಗೋಳಿವರೆಗೆ ಜಾಗಿಂಗ್‌ ಮಾಡುತ್ತಿದ್ದರು. ಅಸೈಗೋಳಿಯಿಂದ ತನ್ನ ಸ್ನೇಹಿತನ ಬೈಕ್‌ನಲ್ಲಿ ದೇರಳಕಟ್ಟೆಗೆ ತೆರಳಿ ಜಿಮ್‌ಗೆ ಹೋಗುತ್ತಿದ್ದರು ಎನ್ನಲಾಗಿದೆ.

ಶನಿವಾರವೂ ಬೆಳಗ್ಗೆ ಜಾಗಿಂಗ್‌ಗೆ ತೆರಳಿದ್ದು, ಗಣೇಶ್‌ ಮಹಲ್‌ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಏಕಾಏಕಿ ದಾಳಿ ನಡೆಸಿದ ದುಷ್ಕರ್ಮಿಗಳು ಕಾರ್ತಿಕ್ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದರು.

kartik_died_asaigoli1

ಸುಮಾರು 5.20ರ ಸುಮಾರಿಗೆ ಕಿಶೋರ್‌ ಎಂಬವರು ಮಂಗಳೂರಿನಿಂದ ಮುಡಿಪು ಕಡೆ ಪತ್ರಿಕೆಯನ್ನು ಸಾಗಿಸುತ್ತಿದ್ದಾಗ ನಡು ರಸ್ತೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ಕಾರ್ತಿಕ್‌ ರನ್ನು ಕಂಡು ಅಪಘಾತ ನಡೆದಿರುವ ಸಾಧ್ಯತೆಯಿಂದ ತಮ್ಮ ವಾಹನದಲ್ಲೆ ಪೊಲೀಸರಿಗೆ ಮಾಹಿತಿ ನೀಡಿ ಆಸ್ಪತ್ರೆಗೆ ದಾಖಲಿಸಿದ್ದರು.

ಬಳಿಕ ಪೊಲೀಸರು ಆಸ್ಪತ್ರೆಗೆ ದಾಖಲಾಗಿದ್ದ ಕಾರ್ತಿಕ್‌ನ ವಿಚಾರದಲ್ಲಿ ವೈದ್ಯರನ್ನು ಸಂಪರ್ಕಿಸಿ ದಾಗ ಕಾರ್ತಿಕ್‌ಗೆ ಅಪಘಾತವಾಗಿಲ್ಲ, ರಾಡ್‌ನಿಂದ ತಲೆಗೆ ಹೊಡೆದ ಪರಿಣಾಮ ಈ ಘಟನೆ ನಡೆದಿರುವ ಸಾಧ್ಯತೆಯ ಬಗ್ಗೆ ವಿವರಿಸಿದರು. ಈ ಸಂದರ್ಭದಲ್ಲಿ ಕಾರ್ಯ ಪ್ರವೃತ್ತರಾದ ಕೊಣಾಜೆ ಇನ್ಸ್‌ಪೆಕ್ಟರ್‌ ಅಶೋಕ್‌ ಹಿರಿಯ ಪೊಲೀಸ್‌ ಅಧಿಕಾರಿಗೆ ಮಾಹಿತಿ ನೀಡಿದ್ದು, ಘಟನಾ ಸ್ಥಳಕ್ಕೆ ಫೋರೆನ್ಸಿಕ್‌ ವಿಭಾಗದ ಅಧಿಕಾರಿಗಳು ಸೇರಿದಂತೆ ಪೊಲೀಸ್‌ ಅಧಿಕಾರಿಗಳು ಭೇಟಿ ನೀಡಿ ತನಿಖೆ ನಡೆಸಿದ್ದರು.

ಆದರೆ ಗಂಭೀರವಾಗಿ ಗಾಯಗೊಂಡು ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದ ಕಾರ್ತಿಕ್ ಅವರು ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Comments are closed.