ಕರಾವಳಿ

ಅರ್ಬಿಕಟ್ಟೆ ಫಾಲ್ಸ್: ಈಜಲು ಇಳಿದ ವಿದ್ಯಾರ್ಥಿ ನೀರು ಪಾಲು : ಎರಡು ತಿಂಗಳಲ್ಲಿ ಮೂರನೇ ಬಲಿ

Pinterest LinkedIn Tumblr

arfaz_niru_palu

ಮೂಡುಬಿದಿರೆ,ಅ.17: ಜಲಪಾತದಲ್ಲಿ ಈಜಲು ಇಳಿದ ವಿದ್ಯಾರ್ಥಿಯೋರ್ವ ನೀರಿನ ಸೆಳೆತಕ್ಕೆ ಸಿಲುಕಿ ಮುಳುಗಿ ಸಾವನ್ನಪ್ಪಿದ ಘಟನೆ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಎರುಗುಂಡಿ ಜಲಪಾತದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಮೃತ್ಯಕೂಪವಾಗಿ ಪರಿವರ್ತನೆಗೊಂಡಿರುವ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಅರ್ಬಿ ಕಟ್ಟೆ ಫಾಲ್ಸ್-ಎರುಗುಂಡಿಯಲ್ಲಿ ಹತ್ತು ದಿನಗಳ ಅಂತರದಲ್ಲಿ ನಡೆದ ಮತ್ತೊಂದು ಅವಘಡ ಇದಾಗಿದೆ. 

ಮೃತ ದುರ್ದೈವಿ ಯುವಕನನ್ನು ಬಜ್ಪೆ ಕಿನ್ನಿಪದವು ನಿವಾಸಿ ಮುಸ್ತಾಫ್ ಎಂಬವರ ಪುತ್ರ, ಸುರತ್ಕಲ್ ಗೈಡ್ ಲೈನ್ ಟುಟೋರಿಯಲ್ ಕಾಲೇಜಿನ ದ್ವಿತೀಯ ಪಿಯುಸಿ ಕಾಮರ್ಸ್ ವಿದ್ಯಾರ್ಥಿ ಅರ್ಫಾಜ್ (19) ಎಂದು ಗುರುತಿಸಲಾಗಿದೆ.

ಈತ ಬಜ್ಪೆಯಲ್ಲಿ ಭಾನುವಾರ ನಡೆದ ಮದುವೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ನಂತರ ತನ್ನ ನಾಲ್ವರು ಸ್ನೇಹಿತರಾದ ಅಸ್ಸಾರ್, ಮಹಮ್ಮದ್, ರಮೀಝ್ ಹಾಗೂ ಮತ್ತೊರ್ವನ ಜತೆಗೂಡಿ 2 ದ್ವಿಚಕ್ರ ವಾಹನದಲ್ಲಿ ನಾಗುಂಡಿ ಹೊಳೆಯಲ್ಲಿ ಈಜಾಡಲು ಬಂದಿದ್ದರು. ಹೊಳೆಯಲ್ಲಿರುವ ಕಿರು ಅಣೆಕಟ್ಟಿನ ಬಳಿ ಸ್ವಲ್ಪ ಈಜಾಡಿ ನಂತರ ಎರುಗುಂಡಿ ಜಲಪಾತದ ಆಳದಲ್ಲಿ ಎಷ್ಟು ನೀರು ಎಂದು ಪರೀಕ್ಷಿಸಲು ಈತನೊಬ್ಬನೇ ಇಳಿದಿದ್ದ ಎನ್ನಲಾಗಿದೆ.

ಈ ಸಂದರ್ಭದಲ್ಲಿ ನೀರಿನ ಸೆಳೆತಕ್ಕೆ ಸಿಲುಕಿ ನೀರಿನಲ್ಲಿ ಈಜಲು ಆಗದೆ ಮುಳುಗಿದ್ದು, ಕೈಮೇಲೆ ಮಾಡಿ ರಕ್ಷಿಸುವಂತೆ ಸ್ನೇಹಿತರನ್ನು ಕೂಗಿದ್ದಾನೆ. ಸ್ನೇಹಿತರು ತಕ್ಷಣ ಸ್ಥಳಕ್ಕೆ ಬಂದು, ಬಟ್ಟೆಯ ಮುಖಾಂತರ ಆತನನ್ನು ಮೇಲಕ್ಕೆತ್ತಲು ಪ್ರಯತ್ನಿಸಿದ್ದಾರೆ. ಆಗ ಬಟ್ಟೆಯನ್ನು ಒಂದು ಕೈಯಲ್ಲಿ ಹಿಡಿದಾಗ, ಸ್ನೇಹಿತರ ಕೈಯಿಂದ ಬಟ್ಟೆ ತಪ್ಪಿ ಕೆಳಗೆ ಬಿದ್ದ ಅಫ್ರಾಜ್ ನೀರಿನ ಆಳಕ್ಕೆ ಹೋಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದೆ.

ಮೂಡುಬಿದಿರೆ ಅಗ್ನಿಶಾಮಕ ದಳದ ಠಾಣಾಧಿಕಾರಿ ಕಿಶೋರ್ ಕುಮಾರ್ ನೇತೃತ್ವದಲ್ಲಿ ಊರವರ ಸಹಕಾರದೊಂದಿಗೆ ನೀರಿನಲ್ಲಿ ಮುಳುಗಿ ಮೃತಪಟ್ಟ ಅರ್ಫಾಜ್ ಶವವನ್ನು ನೀರಿನಿಂದ ಮೇಲೆತ್ತಲಾಗಿದೆ. ಮೂಡುಬಿದಿರೆ ಪೊಲೀಸ್ ಉಪ ನಿರೀಕ್ಷಕ ದೇಜಪ್ಪ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮೃತ್ಯಕೂಪ : ಎರಡು ತಿಂಗಳಲ್ಲಿ ಮೂರು ಬಲಿ

ಮೃತ್ಯಕೂಪವಾಗಿ ಪರಿವರ್ತನೆಗೊಂಡಿರುವ ಕಂಚಿಬೈಲು ಸಮೀಪದ ನಾಗುಂಡಿ ಹೊಳೆಯ ಅರ್ಬಿ ಕಟ್ಟೆ ಫಾಲ್ಸ್-ಎರುಗುಂಡಿಯಲ್ಲಿ ಹತ್ತು ದಿನಗಳ ಅಂತರದಲ್ಲಿ ನಡೆದ ಮತ್ತೊಂದು ಅವಘಡ ಇದಾಗಿದೆ. ಎರಡು ವಾರಗಳ ಅಂತರದಲ್ಲಿಯೇ ಇದೀಗ ಈ ಜಲಪಾಲವು ಎರಡನೇ ವ್ಯಕ್ತಿಯನ್ನು ಬಲಿ ಪಡೆಯುವ ಮೂಲಕ ಎರಡೇ ತಿಂಗಳಿನಲ್ಲಿಯೇ ಒಟ್ಟು ಮೂರು ಜನರನ್ನು ಬಲಿ ಪಡೆಯುವ ಮೂಲಕ ಮತ್ತೊಮ್ಮೆ ಅಪಾಯಕಾರಿ ಜಲಪಾತ ಎಂಬುದನ್ನು ಸಾಬೀತು ಪಡಿಸಿದೆ. ಆದರೆ ಅಪಾಯಕಾರಿ ಜಲಪಾತಗಳು ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿಸಿದರೂ ಜನರು, ಪಂಚಾಯತ್ ಹಾಗೂ ಜನಪ್ರತಿನಿಧಿಗಳು ಇನ್ನೂ ಎಚ್ಚೆತ್ತುಕೊಳ್ಳದಿರುವುದು ದುರದೃಷ್ಠಕರ.

Comments are closed.