ಉಡುಪಿ: ಉಡುಪಿಯ ಶ್ರೀ ಕೃಷ್ಣನನ್ನು ನೋಡಲು ಯಾರೂ ಬರಬಹುದು-ಹೋಗಬಹುದು. ಅಲ್ಲಿ ಪಂಕ್ತಿಬೇಧ ನಡೆಯುತ್ತಿದ್ದರೆ ನಿಮ್ಮನ್ನು ಹೋಗಿ ಅಂದವರು ಯಾರು? ಇಷ್ಟ ಇಲ್ಲದಿದ್ದರೆ ಹೋಗ ಬೇಡಿ. ಮಠಕ್ಕೆ ಮುತ್ತಿಗೆ ಯಾಕೆ ಹಾಕ್ತಾರೋ ಗೊತ್ತಿಲ್ಲ ಅಂತ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ. ಈ ಮೂಲಕ ಪರೋಕ್ಷವಾಗಿ ಚಲೋ ಉಡುಪಿಯ ಚಳುವಳಿಗಾರರಿಗೆ ಟಾಂಗ್ ನೀಡಿದ್ದಾರೆ.
ಉಡುಪಿಯ ಐಬಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು ಮಠಕ್ಕೆ ಮುತ್ತಿಗೆ ಎಂಬ ಪದದ ವ್ಯಾಖ್ಯಾನ ಮಾಡೋದಿಲ್ಲ. ಕೃಷ್ಣನನ್ನು ನೋಡಲು ಯಾರು ಕೂಡಾ ಹೋಗಬಹುದು. ಇನ್ನು ಪಂಕ್ತಿಬೇಧ ಇದ್ದರೆ ನೀವು ಹೋಗಬೇಡಿ. ಇಷ್ಟ ಇಲ್ಲ ಅಂದ್ರೆ ನಿಮ್ಮನ್ನು ಒತ್ತಾಯ ಮಾಡುವವರು ಯಾರು? ನಿಮ್ಮ ಹೇಳಿಕೆಯಿಂದ ಭಕ್ತರ ಸಂಖ್ಯೆ ಕಡಿಮೆಯಾದ್ರೆ ಅದಕ್ಕೆ ಸಂತಸಪಡಿ ಎಂದರು. ಸರ್ಕಾರದ ಮೂಢನಂಬಿಕೆ ಕಾಯ್ದೆಯ ಬಗ್ಗೆ ಮಾತನಾಡಿದ ಅವರು ನಮ್ಮಂತ ಮೂಢರು ದೇವಸ್ಥಾನಕ್ಕೆ ಹೋಗ್ತೇವೆ, ಪೂಜೆ ಮಾಡ್ತೇವೆ. ಕೆಲವರಿಗೆ ಅದು ಬರೀ ಶಿಲೆ, ನಮ್ಮಂತವರಿಗೆ ದೇವರ ಸ್ವರೂಪ. ದೇವಸ್ಥಾನಕ್ಕೆ ಹೋಗಿ ಅಂತ ಯಾರೂ ಹೇಳಲ್ಲ. ಈ ಬಗ್ಗೆ ಚರ್ಚೆ, ತರ್ಕ ಬೇಡ ಎಂದು ವಿನಂತಿಸಿದರು.