ಮಂಗಳೂರು,ಆಕ್ಟೋಬರ್.15 : ಮಂಗಳೂರು ಮಹಾನಗರ ಪಾಲಿಕೆಯ 24ನೇ ದೇರಬೈಲ್ ದಕ್ಷಿಣ ವಾರ್ಡ್‍ನ ಬಿಜೈ ಕಾಪಿಕಾಡ್ ಸಮೀಪದ ಕೊಟ್ಟಾರ ಕ್ರಾಸ್‌ನಿಂದ ಕೊಟ್ಟಾರದ ಇನ್‌ಫೋಸಿಸ್‌ನ್ನು ಸಂಪರ್ಕಿಸುವ ರಸ್ತೆ ಕಾಂಕ್ರಿಟಿಕರಣಕ್ಕೆ ಶಿಲಾನ್ಯಾಸ ಕಾರ್ಯಕ್ರಮ ಶನಿವಾರ ನಡೆಯಿತು.
ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್.ಲೋಬೊ, ಮಂಗಳೂರು ಮೇಯರ್ ಹರಿನಾಥ್ ಅವರ ನೇತ್ರತ್ವದಲ್ಲಿ ಕೊಟ್ಟಾರ ಕ್ರಾಸ್‌ನ ಅಖಿಲಭಾರತ ಐಯ್ಯಪ್ಪ ಸೇವಾ ಸಂಘದ ಗುರುಸ್ವಾಮಿ ಟಿ.ವಿ.ಕುಂಞಿರಾಮನ್ ಅವರು ಶಿಲಾನ್ಯಾಸ ನೆರವೇರಿಸಿದರು.
ಮನಪಾ ಮುಖ್ಯ ಸಚೇತಕ ಶಶಿಧರ್ ಹೆಗ್ಡೆ, ಮನಪಾದ ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ಕವಿತಾ ಸನಿಲ್, ಲ್ಯಾನ್ಸ್‌ಲಾಟ್ ಪಿಂಟೋ, ಅಪ್ಪಿ, ಮನಪಾ ಸದಸ್ಯರಾದ ನಾಗವೇಣಿ, ಪ್ರಕಾಶ್ ಸಾಲ್ಯಾನ್, ಮಂಗಳೂರು ಮಹಾನಗರ ಪಾಲಿಕೆ ಕಮಿಷನರ್ ಮೊಹಮ್ಮದ್ ನಝೀರ್ ಹಾಗೂ ಇತರ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸ್ಥಳೀಯ ಕಾರ್ಪೊರೇಟರ್ ರಜನೀಶ್ ಕಾಪಿಕಾಡ್ ಸ್ವಾಗತಿಸಿದರು.
2.50 ಕೋಟಿ ರೂ. ವೆಚ್ಚ : ಶಾಸಕ ಲೋಬೋ
ಮಂಗಳೂರು ಮಹನಗರ ಪಾಲಿಕೆ ವತಿಯಿಂದ ಮುಖ್ಯಮಂತ್ರಿಗಳ 2ನೇ ಹಂತದ ವಿಶೇಷ ಅನುದಾನ 100 ಕೋಟಿ ರೂಪಾಯಿಯಲ್ಲಿ ಸುಮಾರು 2.50 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಎರಡು ಹಂತದಲ್ಲಿ ನಡೆಯಲಿದೆ. ಸುಮಾರು 1.5 ಕೋಟಿ ವೇಚ್ಚದಲ್ಲಿ ಈ ರಸ್ತೆ ಕಾಂಕ್ರಿಟಿಕರಣ ನಡೆಯಲಿದೆ. ಉಳಿದ ಒಂದು ಕೋಟಿ ಮೊತ್ತದಲ್ಲಿ ಇನ್ನುಳಿದ ರಸ್ತೆ ಕಾಂಕ್ರಿಟೀಕರಣ ಹಾಗೂ ಒಳಚರಂಡಿ ನಿರ್ಮಿಸಲಾಗುವುದು.
ಈ ರಸ್ತೆ ಕಾಂಕ್ರಿಟಿಕರಣ ಕಾಮಗಾರಿಯ ಗುತ್ತಿಗೆಯನ್ನು ಪಿ.ಡಬ್ಲ್ಯು ಡಿ (PWD) ಯ ಕ್ಲಾಸ್ ಒನ್ ಗುತ್ತಿಗೆದಾರರಾದ ಎಂ.ಜಿ.ಹುಸೈನ್ ಅವರಿಗೆ ನೀಡಲಾಗಿದ್ದು, ಮುಂದಿನ ಮೂರು ತಿಂಗಳೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ಶಾಸಕ ಜೆ.ಆರ್.ಲೋಬೊ ಅವರು ಈ ಸಂದರ್ಭದಲ್ಲಿ ಸುದ್ಧಿಗಾರರಿಗೆ ತಿಳಿಸಿದರು.
ಈ ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿದರೆ ಮುಂದಿನ ದಿನಗಳಲ್ಲಿ ವಾಹನ ದಟ್ಟಣಿ ಕಡಿಮೆಯಾಗಲಿದೆ. ಮಾತ್ರವಲ್ಲಾ ಮುಂದಿನ ಮೂರು ತಿಂಗಳಲ್ಲಿ 1 ಕೋಟಿ ರೂಪಾಯಿ ವೆಚ್ಚದಲ್ಲಿ ಇನ್ನೊಂದು ರಸ್ತೆಯನ್ನು ಕಾಂಕ್ರೀಟಿಕರಣ ಮಾಡಿ ಹೆಚ್ಚಿನ ವಾಹನ ಸಂಚಾರಕ್ಕೆ ಅನುವು ಮಾಡಿಕೊಡುವುದಲ್ಲದೇ ಈ ರಸ್ತೆಯಲ್ಲಿ ಸಂಚಾರ ಸುಲಲಿತಾ ಮಾಡಿಕೊಡಲಾಗುವುದು ಎಂದು ಲೋಬೊ ಹೇಳಿದರು.