ಕರಾವಳಿ

ಆಶಾ ಕಾರ್ಯಕರ್ತೆ ನೇಣು ಬಿಗಿದು ಆತ್ಮಹತ್ಯೆಗೆ ಶರಣು

Pinterest LinkedIn Tumblr

SUCIDE

ಬಂಟ್ವಾಳ, ಅ.14: ಆಶಾ ಕಾರ್ಯಕರ್ತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬಂಟ್ವಾಳ ತಾಲೂಕಿನ ಕಲ್ಲಡ್ಕ ಗೋಳ್ತಮಜಲು ಗ್ರಾಮದ ನೆಟ್ಲ ಕಲ್ಲಗುಡ್ಡೆ ಎಂಬಲ್ಲಿ ನಿನ್ನೆ ನಡೆದಿದೆ.

ಆತ್ಮಹತ್ಯೆಗೆ ಶರಣಾಗಿರುವ ಮಹಿಳೆಯನ್ನು ಗೋಳ್ತಮಜಲು ಗ್ರಾಮ ನೆಟ್ಲ ಕಲ್ಲಗುಡ್ಡೆ ನಿವಾಸಿ ಪುರುಷೋತ್ತಮ ದೇವಾಡಿಗರ ಪತ್ನಿ ಆಶಾ ಕಾರ್ಯಕರ್ತೆ ಹಾಗೂ ಗ್ರಾ.ಪಂ. ಪ್ರೇರಕಿ ಲೀಲಾವತಿ ಯಾನೇ ರೇಖಾ (36) ಎಂದು ಹೆಸರಿಸಲಾಗಿದೆ. ಲೀಲಾವತಿ ಅವರು ತಮ್ಮ ಮನೆಯ ಹಿಂದಿರುವ ಕೋಳಿ ಫಾರಂನ ಶೆಡ್ ನಲ್ಲಿ ಚೂಡಿದಾರ್ ಶಾಲಿನಿಂದ ನೇಣು ಬಿಗಿದು ಆತ್ಮಹತ್ಯೆಗೈದಿದ್ದಾರೆ.

ಮಂಗಳೂರು ತಾಲೂಕಿನ ಕಾವೂರು ನಿವಾಸಿ ರಘು ದೇವಾಡಿಗ ಎಂಬವರ ಪುತ್ರಿಯಾಗಿರುವ ಲೀಲಾವತಿಯನ್ನು 14 ವರ್ಷಗಳ ಹಿಂದೆ ಪುರುಷೋತ್ತಮ ಎಂಬವರಿಗೆ ಮದುವೆ ಮಾಡಿಕೊಡಲಾಗಿತ್ತು. ಅವರಿಗೆ ಶ್ರೇಯಾ(10) ಮತು ಶಾವ್ಯಾ (8) ಹೆಸರಿನ ಇಬ್ಬರು ಪುತ್ರಿಯರಿದ್ದಾರೆ.

ಶಾಲೆಗೆ ರಜೆ ಇರುವುದರಿಂದ ಅವರು ಕಾವೂರಿನ ಅಜ್ಜಿಯ ಮನೆಯಲ್ಲಿದ್ದರು. ಟೈಲ್ಸ್ ಕೆಲಸಗಾರನಾಗಿರುವ ಪುರುಷೋತ್ತಮ ಇಂದು ಬೆಳಗ್ಗೆ ಪದಾರ್ಥಕ್ಕೆ ಮೀನು ತೆಗೆದುಕೊಟ್ಟು ಬಿ.ಸಿ.ರೋಡಿಗೆ ಬಂದಿದ್ದು ಮಧ್ಯಾಹ್ನದ ವೇಳೆ ಮನೆಗೆ ವಾಪಸ್ ತೆರಳಿದಾಗ ಮನೆ ಬಾಗಿಲು ತೆರೆದಿತ್ತು. ಮನೆಯೊಳಗೆ ಪತ್ನಿಯನ್ನು ಕಾಣದಿರುವುದರಿಂದ ಮನೆಗೆ ತಾಗಿಕೊಂಡಿರುವ ಶೆಡ್ನಲ್ಲಿ ನೋಡಿದಾಗ ಆತ್ಮಹತ್ಯೆ ಮಾಡಿರುವುದು ಕಂಡು ಬಂದಿದೆ ಎನ್ನಲಾಗಿದೆ.

ಆಶಾ ಕಾರ್ಯಕರ್ತೆಯಾಗಿರುವ ಅವರು ಪ್ರೇರಕಿಯಾಗಿ ಅವಿಶ್ರಾಂತವಾಗಿ ಕೆಲಸಕ್ಕೆ ಹೋಗುವುದರ ಬಗ್ಗೆ ಪತಿ ಆಕ್ಷೇಪ ವ್ಯಕ್ತಪಡಿಸುತ್ತಿದ್ದರು. ಇಂದು ಕೂಡಾ ಕೆಲಸಕ್ಕೆ ಹೋಗದಂತೆ ಪತಿ ಆಕ್ಷೇಪ ವ್ಯಕ್ತಪಡಿಸಿದ್ದು ಈ ಬಗ್ಗೆ ಲೀಲಾವತಿ ತನ್ನ ತಂದೆಗೆ ಕರೆ ಮಾಡಿ ತಿಳಿಸಿದ್ದಾಳೆ ಎಂದು ಲೀಲಾವತಿಯ ತಂದೆ ಹೇಳಿದ್ದಾರೆ. ಜತೆಗೆ ಮುಂದಿನವಾರ ಧರ್ಮಸ್ಥಳಕ್ಕೆ ಹೋಗುವ ವಿಚಾರವಾಗಿ ಮಾತನಾಡಿದ್ದರು.

ಮೃತರಿಗೆ ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆಯು ಕಾಡುತ್ತಿದ್ದು ಅದರಿಂದ ಜೀವನದಲ್ಲಿ ಜುಗುಪ್ಸೆ ಹೊಂದಿ ಆತ್ಮಹತ್ಯೆ ಕೃತ್ಯ ಎಸಗಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.

ಮನೆಯಲ್ಲಿ ಡೆತ್ ನೋಟ್ ಲಭಿಸಿದ್ದು ಅದರಲ್ಲಿ ‘ಎಲ್ಲರಿಗೂ ನಮಸ್ಕಾರ. ನಾನು ತಪ್ಪುಮಾಡುತ್ತಿದ್ದೇನೆ “ನನ್ನ ಸಾವಿಗೆ ನಾನೇ ಕಾರಣ ” ಎಂದು ಬರೆದಿದೆ ಎನ್ನಲಾಗಿದೆ.ಈ ಬಗ್ಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಮೃತರ ತಂದೆಯ ದೂರಿನಂತೆ ಪ್ರಕರಣ ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಠಾಣಾಧಿಕಾರಿ ನಂದ ಕುಮಾರ್ ಅವರು ತಿಳಿಸಿದ್ದಾರೆ.

Comments are closed.