ಮಂಗಳೂರು, ಅ.10: ನವರಾತ್ರಿ ಮಹೋತ್ಸವ ಪ್ರಯುಕ್ತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಹಮ್ಮಿಕೊಂಡಿರುವ ಮಂಗಳೂರು ದಸರಾದ ಉದ್ಘಾಟನಾ ಸಮಾರಂಭ ಬಾನುವಾರ ಶ್ರೀ ಕ್ಷೇತ್ರದಲ್ಲಿ ನಡೆಯಿತು.
ಈ ಬಾರಿಯ ಮಂಗಳೂರು ದಸರವನ್ನು ಮುಖ್ಯಮಂತ್ರಿಗಳು ಉದ್ಘಾಟಿಸುವ ಬಗ್ಗೆ ನಿರ್ಧಾರವಾಗಿತ್ತಾದರೂ ಕೊನೆಯ ಕ್ಷಣದಲ್ಲಿ ಮುಖ್ಯಮಂತ್ರಿಗಳ ಆಗಮನ ರದ್ದಾದ ಹಿನ್ನೆಲೆಯಲ್ಲಿ ಮಂಗಳೂರು ದಸರಾವನ್ನು ಇಬ್ಬರು ವಿಧವ ಮಹಿಳೆಯರಿಂದ ಉದ್ಘಾಟಿಸಲಾಯಿತು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಅರ್ಚಕಿಯಾಗಿರುವ ಇಬ್ಬರು ವಿಧವ ಮಹಿಳೆಯರಾದ ಇಂದಿರಾ ಶಾಂತಿ ಮತ್ತು ಲಕ್ಷ್ಮೀ ಶಾಂತಿಯವರು ದೀಪ ಬೆಳಗಿಸುವ ಮೂಲಕ ಮಂಗಳೂರು ದಸರಾಕ್ಕೆ ಚಾಲನೆ ನೀಡಿದರು.
ಉದ್ಘಾಟನಾ ಭಾಷಣ ಮಾಡಿದ ಶ್ರೀ ಕ್ಷೇತ್ರದ ನವೀಕರಣದ ರೂವಾರಿ ಬಿ. ಜನಾರ್ಧನ ಪೂಜಾರಿಯವರು ಮಾತನಾಡಿ, ಮಹಿಳೆಯರಿಗೆ ಇಡೀ ಜಗತ್ತೆ ಗೌರವ ಕೊಡಬೇಕಾಗಿದೆ. ವಿಧವೆ ಮಹಿಳೆಯರನ್ನು ಕುದ್ರೋಳಿ ಕ್ಷೇತ್ರದಲ್ಲಿ ಈ ಹಿಂದೆಯು ಗೌರವದಿಂದ ಕಾಣಲಾಗಿದೆ. ಈ ಬಾರಿಯ ದಸರವನ್ನು ವಿಧವ ಮಹಿಳೆಯರಿಂದ ಉದ್ಘಾಟಿಸುವ ಮೂಲಕ ಪುಣ್ಯದ ಕೆಲಸವನ್ನು ಮಾಡುತ್ತಿದ್ದೇವೆ. ಈ ಮೂಲಕ ಜಗತ್ತಿಗೆ ಸಂದೇಶವನ್ನು ನೀಡಲಾಗುತ್ತಿದೆ ಎಂದು ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಧ್ಯಕ್ಷ ಎಚ್.ಎಸ್.ಸಾಯಿರಾಮ್, ಕೋಶಾಧಿಕಾರಿ ಆರ್.ಪದ್ಮರಾಜ್, ಶ್ರೀ ಕ್ಷೇತ್ರದ ಆಡಳಿತ ಮಂಡಳಿಯ ಪ್ರಮುಖರಾದ ಜಯಶ್ರೀ ಸುವರ್ಣ, ವೇದಕುಮಾರ್, ನಿತ್ಯಾನಂದ ಕೋಟ್ಯಾನ್, ಉರ್ಮಿಳಾ ರಮೇಶ್ ಕುಮಾರ್, ದೇವೇಂದ್ರ ಪೂಜಾರಿ, ಡಾ.ಬಿ.ಜಿ.ಸುವರ್ಣ, ರವಿಶಂಕ ಮಿಜಾರ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.