ಮಂಗಳೂರು,ಅ.೦5: ಕಲ್ಕೂರ ಪ್ರತಿಷ್ಠಾನದಿಂದ ವರ್ಷಂಪ್ರತಿ ಕಾರಂತ ಹುಟ್ಟು ಹಬ್ಬ ಸಂದರ್ಭ ನೀಡುವ ಕಾರಂತ ಪ್ರಶಸಿಗೆ ಈ ಬಾರಿ ಡಾ. ಲೀಲಾ ಉಪಾಧ್ಯಾಯರು ಆಯ್ಕೆಯಾಗಿದ್ದಾರೆ.
ಡಾ. ಲೀಲಾ ಉಪಾಧ್ಯಾಯರು ಎಂ.ಎಸ್.ಸಿ. ಪದವಿ ಪಡೆದು ಪ್ರೆಂಚ್ ಭಾಷೆಯಲ್ಲಿ ಡಿಪ್ಲೋಮಾ, ಧಾರವಾಡ ವಿಶ್ವವಿದ್ಯಾಲಯದಿಂದ ಪಿ.ಎಚ್.ಡಿ. ಪದವಿ ಪಡೆದು ಸೈಂಟ್ ಆನ್ಸ್ ಕಾಲೇಜಿನಲ್ಲಿ 37 ವರ್ಷಗಳ ಕಾಲ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆಯಾಗಿ ಸೇವೆ ಸಲ್ಲಿಸಿದ ಪ್ರತಿಭಾನ್ವಿತರು.
ಪತಿ ದಿ. ಕೆ.ಎಸ್. ಉಪಾಧ್ಯಾಯರ ಜೊತೆ ಉಪ್ಪಿನ ಕುದ್ರು ಶ್ರೀ ಗಣೇಶ ಯಕ್ಷಗಾನ ಬೊಂಬೆಯಾಟ ತಂಡವನ್ನು ಪ್ರಾನ್ಸ್, ಹೋಲೇಂಡ್, ಪ್ಯಾರೀಸ್, ಜರ್ಮನಿ, ಸ್ವಿಸರ್‌ಲ್ಯಾಂಡ್‌ಗೆ ಕೊಂಡೊಯ್ದ ಕೀರ್ತಿ ಇವರಿಗೆ ಸಲ್ಲುತ್ತದೆ. ಪತಿಯ ನಿಧನಾ ನಂತರ ಇವರು 1996 ರಿಂದ 2010 ವರೆಗೆ ಬೊಂಬೆಯಾಟದ ತಂಡವನ್ನು ಪಾಕಿಸ್ತಾನ, ಥೈಲ್ಯಾಂಡ್, ಸಿಂಗಾಪುರ, ಲಂಡನ್ ಮುಂತಾದ ವಿದೇಶಗಳಿಗೆ ಕೊಂಡೊಯ್ದು ಭಾರತದ ಜಾನಪದ ಕಲೆಯಾದ ಯಕ್ಷಗಾನ ಬೊಂಬೆಯಾಟವನ್ನು ವಿಶ್ವದಾದ್ಯಂತ ಪರಿಚಯಿಸಿದ ಧೀರ ಮಹಿಳೆಯೆಂಬ ಖ್ಯಾತಿಗೆ ಪಾತ್ರರಾಗಿರುತ್ತಾರೆ. ಇವರು ಶಾರದಾ ಪದವಿ ಪೂರ್ವಕಾಲೇಜಿನ ಸ್ಥಾಪಕ ಪ್ರಾಂಶುಪಾಲರಾಗಿ, ವೈಚಾರಿಕ ಬರಹಗಾರರಾಗಿ, ಮಂಗಳೂರಲ್ಲಿ ರೇಡಿಯೋ ಸ್ಥಾಪನೆಯಾದಲ್ಲಿಂದ ಭಾಷಣ, ಚಿಂತನ, ಚರ್ಚಾಕೂಟದಲ್ಲಿ ಭಾಗವಹಿಸಿ ಅದಮ್ಯಚಿಂತನ ಪ್ರವೃತ್ತಿಯುಳ್ಳವರಾಗಿದ್ದಾರೆ.
ತನ್ನ ಪತಿ ದಿ. ಕೆ.ಎಸ್. ಉಪಾಧ್ಯಾಯರ ಹೆಸರಿನಲ್ಲಿ ಒಂದು ಟ್ರಸ್ಟ್ ಸ್ಥಾಪಿಸಿ ಯಕ್ಷಗಾನ ಕಲಾವಿದರಿಗೆ ಗೌರವಧನ,ಅದೇರೀತಿ ಹಲವಾರು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಾ ಬಂದಿರುವ ಇವರಿಗೆ ದಿನಾಂಕ 13/10/2116ರಂದು ಸಂಜೆ 5ಕ್ಕೆ ಮಂಗಳೂರಿನ ಡಾನ್‌ಬಾಸ್ಕೋ ಹಾಲ್‌ನಲ್ಲಿ ಜರಗಲಿರುವ ಸಮಾರಂಭದಲ್ಲಿ ಆಡ್ಯಗಣ್ಯರ ಉಪಸ್ಥಿತಿಯಲ್ಲಿ ಕಾರಂತ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗುವುದೆಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.