
ಮಂಗಳೂರು, ಅ.04 :ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಮೊಕ್ತೇಸರ ವಾಸುದೇವ ಅಸ್ರಣ್ಣರ ಮನೆಗೆ ನಿನ್ನೆ ತಡರಾತ್ರಿ ನುಗ್ಗಿದ ದರೋಡೆಕೋರರ ತಂಡ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ, ನಗದು ಹಣ ದರೋಡೆಗೈದು ಪರಾರಿಯಾಗಿದೆ.
ಎಂಟು ಮಂದಿಯಿದ್ದ ತಂಡ ತಲವಾರು, ರಾಡ್, ಪಿಸ್ತೂಲ್ ತೋರಿಸಿ ಮನೆಮಂದಿಯನ್ನು ಬೆದರಿಸಿ ಕೋಣೆಯೊಂದರಲ್ಲಿ ಕೂಡಿಹಾಕಿದ ಬಳಿಕ ನಿರಾಯಾಸವಾಗಿ ಕೃತ್ಯವೆಸಗಿದ್ದಾರೆ. ಘಟನಾಸ್ಥಳಕ್ಕೆ ಕಮಿಷನರ್ ಸಹಿತ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಕಟೀಲು ದೇವಸ್ಥಾನದ ಮೊಕ್ತೇಸರ ವಾಸುದೇವ ಅಸ್ರಣ್ಣರ ಮನೆಗೆ ತಡರಾತ್ರಿ 12:30ರ ಸುಮಾರಿಗೆ ನುಗ್ಗಿದ ದರೋಡೆಕೋರರ ತಂಡ ಮನೆಯ ಬಾಗಿಲನ್ನು ದೂಡಿದೆ. ಬಲಪ್ರಯೋಗಿಸಿ ಬಾಗಿಲು ದೂಡಿದ್ದರಿಂದ ಮನೆಗೆ ಚಿಲಕ ಮುರಿದುಬಿದ್ದಿದೆ. ಅಂದಾಜು 25-30 ವರ್ಷ ಪ್ರಾಯದ 8 ಮಂದಿ ದರೋಡೆಕೋರರು ಮನೆಯೊಳಗೆ ಪ್ರವೇಶಿಸಿದ್ದು ಈ ವೇಳೆ ಮನೆಯಲ್ಲಿ ಅಸ್ರಣ್ಣರು ಇದ್ದಿರಲಿಲ್ಲ.

ಕಟೀಲು ದೇವಳದಲ್ಲಿ ನವರಾತ್ರಿ ನಿಮಿತ್ತ ವಿಶೇಷ ಪೂಜಾಕಾರ್ಯ ನಡೆಯುವುದರಿಂದ ಅಸ್ರಣ್ಣರು ದೇವಳದಲ್ಲೇ ಇದ್ದರು. ಮನೆಯಲ್ಲಿ ಅವರ ಸೊಸೆ, ಮಗಳು, ತಾಯಿ ಮತ್ತು ಮಗ ಮಾತ್ರ ಇದ್ದರು. ಇದನ್ನು ಖಚಿತಪಡಿಸಿಕೊಂಡೇ ಬಂದಿದ್ದ ತಂಡ ಮನೆಯೊಳಗಿದ್ದವರನ್ನು ಬೆದರಿಸಿ ಕೋಣೆಯೊಂದರಲ್ಲಿ ಕೂಡಿಹಾಕಿದ್ದಾರೆ. ಬಳಿಕ ತಲವಾರು, ರಾಡ್, ಪಿಸ್ತೂಲ್ ತೋರಿಸಿ ಬೆದರಿಸಿ ಕಪಾಟಿನ ಕೀ ಕೊಡುವಂತೆ ಹೇಳಿದ್ದಾರೆ.ದರೋಡೆಕೋರರು ತುಳು ಮತ್ತು ಹಿಂದಿ ಭಾಷೆ ಮಾತಾಡುತ್ತಿದ್ದರು ಎನ್ನಲಾಗಿದೆ.
ದರೋಡೆಕೋರರಲ್ಲಿ ಇಬ್ಬರು ಮನೆಯ ಹೊರಗೆ ಮತ್ತು ಇನ್ನೋರ್ವ ಮನೆಮಂದಿಯನ್ನು ಕಾವಲು ಕಾಯುತ್ತಿದ್ದರೆ ಉಳಿದವರು ಕಪಾಟಿನ ಬಾಗಿಲು ತೆರೆದು 50,000 ರೂ. ನಗದು, 650 ಗ್ರಾಂ. ಚಿನ್ನಾಭರಣ ತೆಗೆದುಕೊಂಡು ಪರಾರಿಯಾಗಿದ್ದಾರೆ.10ರಿಂದ 12 ನಿಮಿಷಗಳ ಕಾಲ ದರೋಡೆಕೋರರು ಮನೆಯೊಳಗಿದ್ದು ಬಳಿಕ ಅಲ್ಲಿಂದ ತೆರಳಿದ್ದಾರೆ.

ಈ ವೇಳೆ ರಸ್ತೆಯಲ್ಲಿ ವಾಹನದ ಸದ್ದು ಕೇಳದೇ ಇರುವುದರಿಂದ ವಾಹನವನ್ನು ದೂರದಲ್ಲೇ ನಿಲ್ಲಿಸಿ ಬಂದಿರಬೇಕೆಂದು ಶಂಕಿಸಲಾಗಿದೆ. ಘಟನೆಯ ಬಳಿಕ ಅಸ್ರಣ್ಣರಿಗೆ ಮಾಹಿತಿ ನೀಡಲಾಗಿದ್ದು ಅವರು ಬಜ್ಪೆ ಠಾಣಾ ಪೊಲೀಸರಿಗೆ ಸುದ್ದಿ ತಿಳಿಸಿದ್ದಾರೆ.
ಬಜ್ಪೆ ಠಾಣಾಧಿಕಾರಿ ಟಿ.ಡಿ.ನಾಗರಾಜ್ ಮತ್ತು ಸಿಬ್ಬಂದಿ ಘಟನಾಸ್ಥಳಕ್ಕೆ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.
ಕಮಿಷನರ್ ಭೂಷಣ್ ರಾವ್ ಬೋರಸೆ, ಡಿಸಿಪಿ ಸಂಜೀವ್ ಪಾಟೀಲ್, ಎಸಿಪಿ ಉದಯ್ ನಾಯಕ್, ರಾಜೇಂದ್ರ ಅವರು ಕೂಡಲೇ ಘಟನಾಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಬೆರಳಚ್ಚುದಳ, ಶ್ವಾನದಳ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದೆ. ವೃತ್ತಿಪರ ಅಂತಾರಾಜ್ಯ ದರೋಡೆಕೋರರು ಕೃತ್ಯದಲ್ಲಿ ಭಾಗಿಯಾಗಿರಬೇಕೆಂದು ಮೇಲ್ನೋಟಕ್ಕೆ ಶಂಕಿಸಲಾಗಿದೆ. ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಭಕ್ತರ ವೇಷದಲ್ಲಿ ಬಂದು ಪೂರ್ವಾಪರ ತಿಳಿದುಕೊಂಡಿರುವ ಬಗ್ಗೆ ಶಂಕೆ..
ನವರಾತ್ರಿ ಹಬ್ಬದ ಹಿನ್ನೆಲೆಯಲ್ಲಿ ಕಟೀಲು ದೇವಳಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭಕ್ತರು ಭೇಟಿ ನೀಡುತ್ತಾರೆ. ಪ್ರತಿನಿತ್ಯ ವಿಶೇಷ ಪೂಜೆ-ಪುನಸ್ಕಾರ ನಡೆಯುವ ಕಾರಣ ರಾತ್ರಿ-ಹಗಲು ದೇವಳದಲ್ಲಿ ಭಕ್ತರು ನೆರೆದಿರುತ್ತಾರೆ. ಹೀಗಿರುವಾಗ ಅಸ್ರಣ್ಣರು ರಾತ್ರಿಯ ವೇಳೆ ಮನೆಯಲ್ಲಿ ಇರುವುದು ಕಡಿಮೆ. ಇದನ್ನು ಖಚಿತಪಡಿಸಿಕೊಳ್ಳಲು ದರೋಡೆಕೋರರು ದೇವಳಕ್ಕೆ ತೆರಳಿ ವಾಪಸ್ ಬಂದಿರಬೇಕೆಂದು ಶಂಕಿಸಲಾಗುತ್ತಿದೆ.
ಭಕ್ತರ ವೇಷದಲ್ಲಿ ದೇವಳಕ್ಕೆ ಆಗಮಿಸಿ, ಅಸ್ರಣ್ಣರು ಮತ್ತವರ ಮನೆಯ ಪೂರ್ವಾಪರ ತಿಳಿದುಕೊಂಡೇ ಕೃತ್ಯವೆಸಗಿರುವ ಸಾಧ್ಯತೆಯಿದೆ. ಪೆರ್ಮುದೆ ಭಾಗದಲ್ಲಿ ಸೆಝ್ ಸ್ಥಾಪನೆಯಾದಂದಿನಿಂದ ಈ ಭಾಗದಲ್ಲಿ ಕಳ್ಳರು, ದರೋಡೆಕೋರರ ಹಾವಳಿಯೂ ಹೆಚ್ಚಿದೆ. ವರ್ಷದ ಹಿಂದಷ್ಟೇ ಪೆರ್ಮುದೆಯಲ್ಲಿರುವ ಉದ್ಯಮಿ ಯಾದವ ಕೋಟ್ಯಾನ್ ಮನೆ ಮುಂಭಾಗದಲ್ಲಿರುವ ದೈವದ ಗುಡಿಗೆ ಕಳ್ಳರು ನುಗ್ಗಿದ್ದು ಕೋಟ್ಯಂತರ ಬೆಲೆಯ ಪಂಚಲೋಹದ ವಿಗ್ರಹ, ಚಿನ್ನವನ್ನು ಕಳ್ಳತನ ಮಾಡಲಾಗಿತ್ತು. ಇದೀಗ ಮತ್ತೆ ಈ ಭಾಗದಲ್ಲಿ ದರೋಡೆಕೋರರು ಸಕ್ರಿಯವಾಗಿದ್ದು ನಾಗರಿಕರು ಆತಂಕಪಡುವಂತಾಗಿದೆ.
Comments are closed.