ಮಂಗಳೂರು : ಶ್ರೀ ಮುತ್ತುರಾಮ್ ಕ್ರಿಯೇಷನ್ಸ್ ಕಾರ್ಕಳ ಲಾಂಛನದಲ್ಲಿ ನಿರ್ಮಾಣಗೊಂಡ “ಬಣ್ಣ ಬಣ್ಣದ ಬದುಕು” ಕನ್ನಡ ಚಲನ ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, ಚಿತ್ರ ಬಿಡುಗಡೆಗೆ ಸಿದ್ದಗೊಂಡಿದೆ. ಚಿತ್ರದ ಧ್ವನಿ ಸುರುಳಿ ಬಿಡುಗಡೆ ಸಮಾರಂಭವು ಅಕ್ಟೋಬರ್ 5ರಂದು ಮಂಗಳೂರಿನ ಪುರಭವನದಲ್ಲಿ ನಡೆಯಲಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣ ನಾಯ್ಕ್ ಕಾರ್ಕಳ ತಿಳಿಸಿದ್ದಾರೆ.
ನಗರದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಚಿತ್ರದ ಬಗ್ಗೆ ಮಾಹಿತಿ ನೀಡಿದ ಅವರು, ಯಕ್ಷಗಾನ ಕಲಾವಿದನ ಬದುಕಿನ ಕುರಿತಾದ ಬಣ್ಣಬಣ್ಣದ ಬದುಕು ಸಿನಿಮಾವನ್ನು ಶ್ರೀಘ್ರದಲ್ಲೇ ರಾಜ್ಯಾದ್ಯಂತ ಬಿಡುಗಡೆಗೊಳಿಸಲಾಗುವುದು.ಮಾರ್ಚ್ 3ರಂದು ಶ್ರೀ ಕ್ಷೇತ್ರ ಕಟೀಲಿನಲ್ಲಿ ಪ್ರಾರಂಭಗೊಂಡ ಚಿತ್ರವು ಎರಡು ಹಂತಗಳಲ್ಲಿ ಒಟ್ಟು 37 ದಿನಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ. ಬಹುತೇಕ ಕಾರ್ಕಳದ ಸುತ್ತಮುತ್ತ ಸಿನಿಮಾಕ್ಕೆ ಚಿತ್ರೀಕರಣ ನಡೆಸಿದ್ದೇವೆ. ಅದೇ ರೀತಿ ಪಿಲಿಕುಳ, ಅರ್ಕುಳ, ಕೂಳೂರು, ತೀರ್ಥಹಳ್ಳಿ ಮೊದಲಾದೆಡೆ ಚಿತ್ರೀಕರಣ ಮಾಡಿದ್ದೇವೆ ಎಂದು ತಿಳಿಸಿದರು.
ಚಿತ್ರದ ನಿರ್ದೇಶಕ ಇಸ್ಮಾಯಿಲ್ ಮೂಡುಶೆಡ್ಡೆ ಮಾತನಾಡಿ, ಸಿನಿಮಾಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಇಸ್ಮಾಯಿಲ್ ಮೂಡುಶೆಡ್ಡೆ ಮಾಡಿದ್ದಾರೆ. ವಿಜಯ್ ಎಸ್.ಛಾಯಾಗ್ರಹಣ, ನಾಗೇಂದ್ರ ಅರಸ್ ಸಂಕಲನ, ಎ.ಕೆ.ವಿಜಯ್ (ಕೋಕಿಲ) ಅವರು ಈ ಚಿತ್ರದ ಮೂಲಕ ಮೊದಲ ಬಾರಿಗೆ ಕನ್ನಡ ಚಿತ್ರವೊಂದಕ್ಕೆ ಸಂಗೀತ ಒದಗಿಸಿದ್ದಾರೆ. ಸಹಾಯಕ ನಿರ್ದೇಶಕರಾಗಿ ಬಾಲಕೃಷ್ಣ ಬರಗೂರು, ಸುರೇಶ್ ಆರ್.ಎಸ್., ಅನುಷಾ ಹೆಗ್ಡೆ, ನವೀನ್ ಬೋಂದೆಲ್ ದುಡಿದಿದ್ದಾರೆ. ಎಂ.ಡಿ.ಪಲ್ಲವಿ, ರವೀಂದ್ರ ಪ್ರಭು, ವಿದ್ಯಾಶರದ್, ಈ ಚಿತ್ರಕ್ಕೆ ಹಾಡಿದ್ದಾರೆ. ಶಶಿರಾಜ್ ಕಾವೂರು, ಸುರೇಶ್ ಆರ್.ಎಸ್.ಸಾಹಿತ್ಯ ಒದಗಿಸಿದ್ದಾರೆ. ನೃತ್ಯ ನಿರ್ದೇಶನವನ್ನು ಅನುಷಾ ಹೆಗ್ಡೆಯವರು ನಿರ್ವಹಿಸಿದ್ದಾರೆ.
ಚಿತ್ರದ ನಾಯಕ ನಟನಾಗಿ ಮುಂಬೈಯ ಮಾಡೆಲಿಂಗ್ ಜಗತ್ತಿನಲ್ಲಿ ಗುರುತಿಸಿಕೊಂಡಿರುವ ರವಿರಾಜ್ ಶೆಟ್ಟಿ ಹಾಗೂ ನಾಯಕಿ ನಟಿಯಾಗಿ ಈಗಾಗಲೇ ಹಲವಾರು ಚಿತ್ರಗಳಲ್ಲಿ ನಟಿಸಿರುವ ಮಂಗಳೂರಿನ ಅನ್ವಿತ ಸಾಗರ್ ಅಭಿನಯಿಸಿದ್ದಾರೆ.
ಸ್ಯಾಂಡಲ್‌ವುಡ್‌ನ ಹಿರಿಯ ನಟರಾದ ರಮೇಶ್ ಭಟ್, ಸತ್ಯಜಿತ್, ಹೊನ್ನವಳ್ಳಿ ಕೃಷ್ಣ , ಅಪೂರ್ವಶ್ರೀ ಅಭಿನಯಿಸಿದ್ದಾರೆ. ಗೋಪಿನಾಥ್ ಭಟ್ ಮೌಲಾವಿಯಾಗಿ ಪಾತ್ರವಹಿಸಿದ್ದಾರೆ. ಚೇತನ್ ರೈ ಮಾಣಿ ಖಳ ನಾಯಕನಾಗಿ ಅಭಿನಯಿಸಿದ್ದಾರೆ. ಲಕ್ಷ್ಮಣ್ ಕುಮಾರ್ ಮಲ್ಲೂರು, ರಿಯಾ ಮೇಘನ, ಬೇಬಿ ಶ್ರೇಯದಾಸ್, ಮಾ|ಗೌತಮ್, ಮಾ.ಗಗನ್, ಶಾಂತಿ ಶೆಣೈ, ಮಂಗೇಶ್ ಭಟ್ ವಿಟ್ಲ, ಖಾಲಿದ್ ಉಜಿರೆ, ಪ್ರತಾಪ್ ಶೆಟ್ಟಿ ರಿತೇಶ್ ಶೆಟ್ಟಿ, ನವೀನ್ ಬೊಂದೇಲ್, ಚೇತಕ್ ಪೂಜಾರಿ ಮುಂತಾದವರು ಅಭಿನಯಿಸಿದ್ದಾರೆ ಎಂದು ತಿಳಿಸಿದರು.
ಚಿತ್ರದ ವಿಶೇಷತೆಗಳು :
- ಮೊಟ್ಟಮೊದಲ ಬಾರಿಗೆ ಕನ್ನಡ ಚಿತ್ರರಂಗದಲ್ಲಿ ಯಕ್ಷಲೋಕದ ಅನಾವರಣ
- ಭಾರತೀಯ ಸಂಸ್ಕೃತಿಯನ್ನು ಬಿಂಬಿಸುವ ಭರತನಾಟ್ಯ, ಯಕ್ಷಗಾನ, ದಪ್ಪು (ಮುಸ್ಲಿಂ ಕಲೆ)ಒಪ್ಪನ ಪಾಟ್ (ಕೇರಳ ಕಲ್ಚರ್) ಚಿತ್ರದಲ್ಲಿ ಅಳವಡಿಸಲಾಗಿದೆ.
- ಕರಾವಳಿ ಕರ್ನಾಟಕದ ಗಂಡು ಮೆಟ್ಟಿನ ಕಲೆ ಯಕ್ಷಗಾನದ ಹಿರಿಯ ಭಾಗವತರಾದ ಬಲಿಪ ನಾರಾಯಣ ಭಾಗವತರು, ಯಕ್ಷಚಕ್ರೇಶ್ವರ ಬಿರುದಾಂಕಿತ ಯುವಕರ ಕಣ್ಮಣಿ ಖ್ಯಾತ ಭಾಗವತರಾದ ಪಟ್ಲ ಸತೀಶ್ ಶೆಟ್ಟಿ ವಿಶೇಷ ಪಾತ್ರದಲ್ಲಿ ಅಭಿನಯಿಸುವ ಮೂಲಕ ಭಾಗವತಿಕೆಯನ್ನು ನೀಡಿರುವ ಚಿತ್ರ ಇದಾಗಿದೆ.
- ಮೊದಲ ಬಾರಿಗೆ ಭಾರತೀಯ ಚಿತ್ರರಂಗದಲ್ಲಿ ತೆಂಕು ತಿಟ್ಟಿನ ಯಕ್ಷಗಾನ ವೈಭವ.