*ಯೋಗೀಶ್ ಕುಂಭಾಸಿ
ಕುಂದಾಪುರ: ಕುಂದಾಪುರ ಕ್ಷೇತ್ರ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾದ ಪದಗ್ರಹಣ ಸಮಾರಂಭವು ಶುಕ್ರವಾರ ಕುಂದಾಪುರದ ಬಿಜೆಪಿ ಕಛೇರಿಯಲ್ಲಿ ನಡೆಯಿತು. ಮೂಲತಃ ಕೋಟದವರಾದ ಹಾಗೂ ಆ ಭಾಗದಲ್ಲಿ ಪಕ್ಷ ಸಂಘಟನೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡ ಮೊಗವೀರ ಸಮಾಜದ ರವೀಂದ್ರ ತಿಂಗಳಾಯ ಅವರು ಹಿಂದುಳಿದ ವರ್ಗಗಳ ಮೋರ್ಚಾ ನೂತನ ಕ್ಷೇತ್ರಾಧ್ಯಕ್ಷರಾಗಿದ್ದಾರೆ. ಉಡುಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾಧ್ಯಕ್ಷ ರಾಜೇಶ್ ಕಾವೇರಿ ಬಿಜೆಪಿ ಬಾವುಟ ನೀಡುವ ಮೂಲಕ ಪದಗ್ರಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಕುರುಡು ಕಾಂಚಾಣ ಕುಣಿಯುತ್ತಲಿತ್ತು, ಕಾಲಿಗೆ ಬಿದ್ದವರ ತುಳಿಯುತ್ತಲಿತ್ತು ಎಂಬ ಮಾತು ಇಂದು ರಾಜಕೀಯ ರಂಗದಲ್ಲಿ ನಡೆಯುತ್ತಿರುವುದು ವಿಪರ್ಯಾಸವಾಗಿದೆ. ಕುಂದಾಪುರದ ಪ್ರಸ್ತುತ ವ್ಯವಸ್ಥೆಯಲ್ಲಿ ಕಾರ್ಯಕರ್ತರ ಆಶಯಗಳಿಗೆ ಸ್ಪಂಧಿಸುವ ಕಾರ್ಯವಾಗುತ್ತಿಲ್ಲ. ಒಂದು ಕಾರ್ಯಕ್ರಮ ಮಾಡಬೇಕಾದರೇ ಒಂದು ವಾರದ ಮೊದಲೇ ಸಂಬಂದಪಟ್ಟವರನ್ನು ಕರೆಯಬೇಕಾದ ಅನಿವಾರ್ಯತೆ ಸ್ರಷ್ಟಿಯಾಗಿದೆ. ಈ ಹಿಂದೆ ಈ ವ್ಯವಸ್ಥೆ ಇರಲಿಲ್ಲ. ನೂತನ ಕ್ಷೇತ್ರ ಸಮಿತಿ ರಚನೆ ಬಳಿಕ ಈ ರೀತಿಯ ವ್ಯವಸ್ಥೆ ನಿರ್ಮಾಣವಾಗಿದೆ ಎಂದು ಮಾರ್ಮಿಕವಾಗಿ ನುಡಿದರು.
ಪಕ್ಷ ಸಂಘಟನೆಯಾಗಬೇಕು: ಕೋಟ ಶ್ರೀನಿವಾಸ್ ಪೂಜಾರಿ
ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಬೂತ್ ಮಟ್ಟ, ಶಕ್ತಿಕೇಂದ್ರದ ಮಟ್ಟ, ಪಂಚಾಯತ್ ಮಟ್ಟ, ವ್ಯಕ್ತಿಯ ಹಾಗೂ ಕಾರ್ಯಕರ್ತರ ಮಟ್ಟದಲ್ಲಿ ಪಕ್ಷ ಸಂಘಟನೆಯಾಗಬೇಕಿದೆ. ಬಿಜೆಪಿಯಲ್ಲಿ ವಿವಿಧ ಮೋರ್ಚಾಗಳನ್ನು ಮಾಡಲಾಗಿದ್ದು ಅದಕ್ಕೆ ಮಹತ್ತರ ಜವಬ್ದಾರಿಗಳನ್ನು ಹಂಚಿಕೆ ಮಾಡಲಾಗಿದೆ. ಹಿಂದುಳಿದ ವರ್ಗಗಳ ಮೋರ್ಚಾಕ್ಕೆ ಬಹಳಷ್ಟು ಜವಬ್ದಾರಿಗಳಿದ್ದು ತಳಮಟ್ಟದಿಂದ ಕಾರ್ಯಕರ್ತರನ್ನು ಒಗ್ಗೂಡಿಸಿ ಪಕ್ಷದ ಏಳಿಗೆಗಾಗಿ ಶ್ರಮಿಸುವುದು ಮಾತ್ರವಲ್ಲದೇ ಕಟ್ಟಕಡೆಯ ವ್ಯಕ್ತಿಗಾಗುವ ಅನ್ಯಾಯದ ವಿರುದ್ಧ ಪ್ರತಿಭಟಿಸಿ ಅವರಿಗೆ ನ್ಯಾಯ ಒದಗಿಸುವ ಮೂಲಕ ಸಮಾಜದಲ್ಲಿ ಆತನನ್ನು ಮುಖ್ಯವಾಹಿನಿಗೆ ಕರೆದು ತರುವ ಪ್ರಾಮಾಣಿಕ ಕಾರ್ಯವನ್ನು ಓಬಿಸಿ ಮೋರ್ಚಾ ಮಾಡಬೇಕಿದೆ ಎಂದು ಕರೆಕೊಟ್ಟರು.
ಪಕ್ಷ ವಿರೋಧಿಗಳಿಗೆ ಬೆಲೆ: ಕಿಶೋರ್ ಕುಮಾರ್
ಬಿಜೆಪಿ ಮುಖಂಡರಾದ ಬಿ. ಕಿಶೋರ್ ಕುಮಾರ್ ಮಾತನಾಡಿ, ಯಾರು ಪಕ್ಷಕ್ಕೆ ಬರಲಿ ಅಥವಾ ಹೋಗಲಿ ನಾವು ಬಿಜೆಪಿ ಎನ್ನುವ ದ್ರಢ ಮನಸ್ಸು ನಮ್ಮಲ್ಲಿರಬೇಕು. ಬಿಜೆಪಿಯಲ್ಲಿ ಪ್ರತಿ ಬೆಳವಣಿಗೆಗಳಾದಾಗಲೂ ಕೂಡ ಗೊಂದಲಗಳು ನಿರ್ಮಾಣಗೊಳ್ಳುತ್ತಲಿದೆ. ಸತತ ಹೋರಾಟದ ಮೂಲಕ ಪಕ್ಷವನ್ನು ಗಟ್ಟಿ ಮಾಡಬೇಕು, ಪಕ್ಷದ ಮೂಲಕ ವ್ಯಕ್ತಿಯ ನಿರ್ಮಾಣ ಮಾಡಿ ಆತ ಓರ್ವ ಸದ್ರಢ ಜನಪ್ರತಿನಿಧಿಯಾಗಬೇಕೆಂಬುದು ಪಕ್ಷದ ಸಿದ್ಧಾಂತವಾಗಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ವಿರುದ್ಧ ಕೆಲಸ ಮಾಡಿದ ವ್ಯಕ್ತಿಯನ್ನು ಇಂದು ಬಿಜೆಪಿ ಕ್ಷೇತ್ರಾಧ್ಯಕ್ಷರನ್ನಾಗಿ ಮಾಡಿರುವುದು ಯಾವ ಕಾರಣಕ್ಕೆ ಎಂಬುದು ಅರ್ಥವಾಗುತ್ತಿಲ್ಲ. ಜನರ ಮುಖ ನೋಡಿ ಅವರ ಹಿಂದಿರುವ ಜನರನ್ನು ನೋಡಿ ಹುದ್ದೆ ನೀಡುವ ಕೆಲಸ ಆಗುತ್ತಿದೆ ಇದು ಸರಿಯಲ್ಲ. ನೈಜ ಕಾರ್ಯಕರ್ತರಿಗೆ ಪಕ್ಷ ಬೆಲೆ ಕೊಡುವ ವಾತಾವರಣ ಇನ್ನು ಮುಂದಾದರೂ ನಿರ್ಮಾಣವಾಗಬೇಕು ಎಂದರು.
ಮೇರ್ಡಿ ಸತೀಶ್ ಕುಮಾರ್, ಉದಯ ಪೂಜರಿ ಬೆಳ್ವೆ, ಹಾಲಾಡಿ ಜಿಲ್ಲಾಪಂಚಾಯತ್ ಸದಸ್ಯ ತಾರನಾಥ ಶೆಟ್ಟಿ, ಹಾಲಾಡಿ ಗ್ರಾಮಪಂಚಾಯತ್ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ, ಎಸ್.ಸಿ-ಎಸ್.ಟಿ ಮೋರ್ಚಾದ ಗೋಪಾಲ ಕಳಿಂಜೆ, ಜಿಲ್ಲಾ ರೈತ ಮೋರ್ಚಾ ಉಪಾಧ್ಯಕ್ಷ ಪ್ರವೀಣ್ ಶೆಟ್ಟಿ , ಪುರಸಭ ಸದಸ್ಯರಾದ ರಾಘವೇಂದ್ರ ದೇವಾಡಿಗ, ವಿಠ್ಠಲ್ ಕುಂದರ್, ರವಿರಾಜ್ ಖಾರ್ವಿ, ಉದಯ್ ಮೆಂಡನ್ ಯುವಮೋರ್ಚಾ ರಾಜ್ಯ ಕಾರ್ಯಕಾರಿಣಿ ಸದಸ್ಯ ಮಹೇಶ್ ಪೂಜಾರಿ, ಮುಖಂಡರಾದ ಸುದಾಮ್ ತೋಳಾರ್, ವಿಠ್ಠಲ ಪೂಜಾರಿ, ಚಂದ್ರಮೋಹನ್ ಪೂಜಾರಿ, ಮೋಹನ್ ಚಂದ್ರ ಕಾಳಾವರ, ಲಕ್ಷ್ಮಣ ಶೆಟ್ಟಿ, ಮೇಘರಾಜ್ ಶೆಟ್ಟಿ, ಮೊದಲಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದು ಬಿಜೆಪಿ ಜಿಲ್ಲಾಧ್ಯಕ್ಷರು, ಕ್ಷೇತ್ರಾಧ್ಯಕ್ಷರ ಸಮೇತ ಕೆಲವಾರು ಮೋರ್ಚಗಳ ಪದಾಧಿಕಾರಿಗಳ ಅನುಪಸ್ಥಿತಿ ಸಭೆಯಲ್ಲಿ ಕಾಣುತ್ತಿತ್ತು.