ಕರ್ನಾಟಕ

ಕರ್ನಾಟಕಕ್ಕೆ ಬಹು ದೊಡ್ಡ ಹಿನ್ನಡೆ ! ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸಿ…6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರು ಬಿಡಿ: ‘ಸುಪ್ರೀಂ’

Pinterest LinkedIn Tumblr

kaveri_historry

ನವದೆಹಲಿ: ಕರ್ನಾಟಕ ಸೇರಿದಂತೆ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳು ವಿರೋಧಿಸುತ್ತಾ ಬಂದಿದ್ದ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ಮೂರು ದಿನಗಳ ಒಳಗೆ ರಚಿಸುವಂತೆ ಸುಪ್ರೀಂ ಕೋರ್ಟ್ ಶನಿವಾರ ಕೇಂದ್ರ ಸರ್ಕಾರಕ್ಕೆ ಆಜ್ಞಾಪಿಸಿದೆ. ಜೊತೆಗೆ ಅ.1 ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್‍ನಂತೆ ಒಟ್ಟು 36 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸುವಂತೆ ಸುಪ್ರೀಂಕೋರ್ಟ್‍ನ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಉದಯ್‍ಲಲಿತ್ ಅವರ ಆದೇಶ ನೀಡಿದೆ. ಇದರೊಂದಿಗೆ ಕರ್ನಾಟಕಕ್ಕೆ ಇದೀಗ ಮತ್ತೆ ಹಿನ್ನಡೆಯಾಗಿದೆ.

ಸೆ.20 ರಂದು ಆದೇಶ ನೀಡಿದ್ದ ಸುಪ್ರೀಂಕೋರ್ಟ್ 27 ರವರೆಗೂ ಪ್ರತಿದಿನ 6 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದಿತ್ತು. ಸೆ.27ರಂದು ಮತ್ತೆ ಆದೇಶ ನೀಡಿ 3 ದಿಗಳವರೆಗೆ ಆರು ಸಾವಿರ ಕ್ಯೂಸೆಕ್‍ನಂತೆ 18 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ಎರಡು ಬಾರಿ ಆದೇಶ ನೀಡಿತ್ತು. ಆದರೆ ನೀರಿನ ಕೊರತೆಯಿಂದಾಗಿ ಕರ್ನಾಟಕ ಸರ್ಕಾರ ತಮಿಳುನಾಡಿಗೆ ನೀರು ಹರಿಸಲು ನಿರಾಕರಿಸಿತ್ತು.

ಸುಪ್ರೀಂಕೋರ್ಟಿನಲ್ಲಿ ಈದಿನ ವಿಚಾರಣೆ ಪ್ರಾರಂಭವಾದಾಗ ಕರ್ನಾಟಕದ ವಕೀಲ ಫಾಲಿ. ನಾರಿಮನ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕ ವಿಧಾನ ಮಂಡಲ ಕೈಗೊಂಡ ಸರ್ವಾನುಮತದ ನಿರ್ಣಯದ ಕುರಿತ ಟಿಪ್ಪಣಿಯನ್ನು ಓದಿ ಹೇಳಿದರು.

ಕರ್ನಾಟಕ ವಿಧಾನ ಮಂಡಲ ಕೈಗೊಂಡಿರುವ ನಿರ್ಣಯವನ್ನು ಮೀರಲು ಸಾಧ್ಯವಿಲ್ಲ. ತಾವು ಬೇರೆ ಯಾವ ವಾದವನ್ನೂ ಮಂಡಿಸುವುದಿಲ್ಲ ಎಂದು ನಾರಿಮನ್ ಸುಪ್ರೀಂಕೋರ್ಟಿಗೆ ತಿಳಿಸಿದರು.

ನ್ಯಾಯಾಲಯಕ್ಕೆ ಶುಕ್ರವಾರ ನಡೆದ ಕರ್ನಾಟಕ ಮತ್ತು ತಮಿಳುನಾಡು ಸಂಧಾನ ಸಭೆ ಕುರಿತ ವಿವರವನ್ನು ಲಿಖಿತವಾಗಿ ಮಂಡಿಸಿದ ಅಟಾರ್ನಿ ಜನರಲ್ ಅವರು ಸುಪ್ರಿಂಕೋರ್ಟ್ ಆದೇಶದ ಪ್ರಕಾರ ಕಾವೇರಿ ನೀರು ನಿರ್ವಹಣಾ ಮಂಡಳಿಯನ್ನು ರಚಿಸಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ತಿಳಿಸಿದರು.

ಮೂರು ದಿನಗಳ ಒಳಗಾಗಿ ಕಾವೇರಿ ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಕೇಂದ್ರಕ್ಕೆ ಆಜ್ಞಾಪಿಸಿದ ಸುಪ್ರೀಂಕೋರ್ಟ್ ಪೀಠವು ಅ.1ರಿಂದ 6ರವರೆಗೆ ಪ್ರತಿದಿನ 6 ಸಾವಿರ ಕ್ಯೂಸೆಕ್ಸ್ ನೀರು ಬಿಡುವಂತೆ ಕರ್ನಾಟಕಕ್ಕೆ ನಿರ್ದೇಶನ ನೀಡಿ ವಿಚಾರಣೆಯನ್ನು ಅಕ್ಟೋಬರ್ 6ಕ್ಕೆ ಮುಂದೂಡಿತು. ಇದೇ ವೇಳೆಯಲ್ಲಿ ಆದೇಶ ಪಾಲನೆಗೆ ಇದೇ ಕಟ್ಟ ಕಡೆಯ ಅವಕಾಶ ಎಂದೂ ಕರ್ನಾಟಕಕ್ಕೆ ಎಚ್ಚರಿಕೆ ನೀಡಿತು.

ಇಂದಿನ ವಿಚಾರಣೆ ವೇಳೆ ಕರ್ನಾಟಕ ಪರ ವಕೀಲ ನಾರಿಮನ್ ಅವರ ಕೇವಲ ಟಿಪ್ಪಣಿಯನ್ನು ಪ್ರಕಟಿಸುವುದು ಹೊರತುಪಡಿಸಿ ಬೇರೆ ಯಾವುದೇ ವಾದ-ವಿವಾದಗಳಿಗೆ ಅವಕಾಶ ನೀಡಬಾರದು ಎಂದು ಸುಪ್ರೀಂಕೋರ್ಟ್‍ಗೆ ಮನವಿ ಮಾಡಿದರು. ಆದರೆ ಈ ನಡುವೆಯೇ ನ್ಯಾಯಾಧೀಶರು ನೀರು ನಿರ್ವಹಣಾ ಮಂಡಳಿ ರಚಿಸುವಂತೆ ಮತ್ತು ಮತ್ತೆ ತಮಿಳುನಾಡಿಗೆ ನೀರು ಹರಿಸುವಂತೆ ಆದೇಶ ನೀಡಿದ್ದಲ್ಲದೆ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್‍ನ ತೀರ್ಪನ್ನು ಪಾಲಿಸದೆ ನ್ಯಾಯಾಲಯದ ಘನತೆಗೆ ಧಕ್ಕೆ ತಂದಿದೆ ಎಂಬ ಅಸಮಾಧಾನ ವ್ಯಕ್ತಪಡಿಸಿದೆ.

ಕರ್ನಾಟಕ ಭಾರತದಲ್ಲೇ ಇರುವ ರಾಜ್ಯಗಳಲ್ಲಿ ಒಂದು. ದೇಶದ ಎಲ್ಲಾ ರಾಜ್ಯಗಳು ಸುಪ್ರೀಂಕೋರ್ಟ್ ಆದೇಶವನ್ನು ಪಾಲಿಸಲೇಬೇಕು. ಇದು ಒಕ್ಕೂಟ ವ್ಯವಸ್ಥೆಗೆ ಒಳ್ಳೆಯದು ಎಂದು ಅಭಿಪ್ರಾಯಪಟ್ಟಿದ್ದಾರೆ. ಮುಂದಿನ ವಿಚಾರಣೆ ಅ.6ರ ಮಧ್ಯಾಹ್ನ 2 ಗಂಟೆಗೆ ಮುಂದೂಡಿಕೆಯಾಗಿದೆ.

Comments are closed.