ಕರಾವಳಿ

ಮಂಗಳೂರು ಬಯಲು ಶೌಚ ಮುಕ್ತ ನಗರ ಘೋಷಣೆ : ಸ್ಮಾರ್ಟ್‌ ಸಿಟಿ ಬಳಿಕ ಮಂಗಳೂರಿಗೆ ಇನ್ನೊಂದು ಹೆಗ್ಗಳಿಕೆ

Pinterest LinkedIn Tumblr

mcc_clean_awrd_1

ಮಂಗಳೂರು, ಸೆ.28: ಸ್ಮಾರ್ಟ್‌ ಸಿಟಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿರುವ ಮಂಗಳೂರು ಇದೀಗ ಭಾರತೀಯ ಗುಣಮಟ್ಟ ನಿಯಂತ್ರಣ ಮಂಡಳಿಯಿಂದ ಬಯಲು ಶೌಚ ಮುಕ್ತ ನಗರ ಪ್ರಮಾಣ ಪತ್ರ ಪಡೆಯುವ ಮೂಲಕ ಇನ್ನೊಂದು ಸಾಧನೆ ಮಾಡಿದೆ.

ಕೇಂದ್ರ ಸರಕಾರದ ನಗರಾಭಿವೃದ್ಧಿ ಇಲಾಖೆ ಮತ್ತು ಸ್ವಚ್ಛ ಭಾರತ ಮಿಷನ್ ವತಿಯಿಂದ ಬಯಲು ಶೌಚಾಲಯ ಮುಕ್ತ ನಗರವೆಂಬ ಘೋಷಣೆಯ ಪ್ರಮಾಣ ಪತ್ರವನ್ನು ಮಂಗಳೂರು ಮಹಾನಗರ ಪಾಲಿಕೆಗೆ ಬುಧವಾರ ಹಸ್ತಾಂತರಿಸಲಾಯಿತು.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಸ್ವತ್ಛ ಭಾರತ ಆಂದೋಲನವೆಂಬ ಬೃಹತ್‌ ನೈರ್ಮಲ್ಯ ಆಂದೋಲನ ಆರಂಭಿಸಿ ಭಾರತ ಬಯಲು ಶೌಚಮುಕ್ತವಾಗಬೇಕೆಂದು ಕರೆ ನೀಡಿದ್ದರು.

mcc_clean_awrd_2 mcc_clean_awrd_3 mcc_clean_awrd_4 mcc_clean_awrd_5 mcc_clean_awrd_6 mcc_clean_awrd_7 mcc_clean_awrd_8

ರಾಜ್ಯ ಧ್ಯೇಯ ಸಚಿವಾಲಯ ಮತ್ತು ನಗರಗಳ ಸ್ಥಳೀಯ ಸಮಿತಿಗಳ ಸಂಯೋಜನೆಯೊಂದಿಗೆ ನಾಗರಿಕ ಅಭಿವೃದ್ಧಿ ಸಚಿವಾಲಯ ಈ ಧ್ಯೇಯದ ಅಡಿಯಲ್ಲಿ ಗುರಿ ಸಾಧಿಸಲು ಅವಿರತ ಶ್ರಮಿಸುತ್ತಿದೆ. ಈಗಾಗಲೇ 2 ವರ್ಷಗಳ ಆಂದೋಲನ ಪೂರ್ಣಗೊಂಡಿದೆ.

ಸ್ವತ್ಛತಾ ವಾರವನ್ನು ಪಂಡಿತ್‌ ದೀನದಯಾಳ್‌ ಉಪಾಧ್ಯಾಯ ಅವರ ಜನ್ಮದಿನವಾದ ಸೆ. 25ರಂದು ಆರಂಭಿಸಿ ಮಹಾತ್ಮಾ ಗಾಂಧಿ ಅವರ ಜನ್ಮದಿನವಾದ ಅ. 2ರಂದು ಸಮಾಪ್ತಿಗೊಳಿಸಲಾಗುತ್ತಿದೆ. ಈ ಸ್ವತ್ಛತಾ ವಾರದ ಸಂದರ್ಭ ಮಂಗಳೂರು ಭಾರತೀಯ ಗುಣಮಟ್ಟ ನಿಯಂತ್ರಣದಿಂದ (ಕ್ಯುಸಿಐ) ಬಯಲು ಶೌಚಾಲಯ ಮುಕ್ತ ಎಂದು ಘೋಷಿಸಿಕೊಂಡಿದೆ.

ಬುಧವಾರ ನಗರ ಪಾಲಿಕೆಯಲ್ಲಿ ಮೇಯರ್ ಹರಿನಾಥ್ ಅಧ್ಯಕ್ಷತೆಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಕ್ವಾಲಿಟಿ ಕಂಟ್ರೋಲ್ ಆಫ್ ಇಂಡಿಯಾದ ಸ್ವಚ್ಛ ಭಾರತ ಮಿಶನ್ ಯೋಜನೆಯ ಮುಖ್ಯಸ್ಥ ಅಭಿನವ್ ಯಾದವ್ರವರು ಪ್ರಮಾಣ ಪತ್ರವನ್ನು ಹಸ್ತಾಂತರಿಸಿದರು.

ಈ ಸಂದರ್ಭ ಮೇಯರ್‌ ಹರಿನಾಥ್‌ ಅವರು ಮಾತನಾಡಿ, ಮಂಗಳೂರು ನಗರ ಪಾಲಿಕೆಗೆ ಬಯಲು ಶೌಚಮುಕ್ತ ನಗರವೆಂಬ ಪ್ರಮಾಣ ಪತ್ರ ದೊರಕಿರುವ ಹಿನ್ನೆಲೆಯಲ್ಲಿ ಇಡೀ ಮಂಗಳೂರಿನ ಜನರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.

ಸಂಸದ ನಳಿನ್‌ ಕುಮಾರ್‌ ಕಟೀಲು ಮಾತನಾಡಿ, ಸ್ವಾತಂತ್ರ ಪೂರ್ವದಲ್ಲಿ ಈ ದೇಶ ರಾಮರಾಜ್ಯವಾಗಬೇಕೆಂಬ ಪರಿಕಲ್ಪನೆಯನ್ನು ಮಹಾತ್ಮಾ ಗಾಂಧೀ ಹೊಂದಿದ್ದರು. ರಾಮರಾಜ್ಯವೆಂದರೆ ಗ್ರಾಮಗಳ ಅಭಿವೃದ್ಧಿಯೊಂದಿಗೆ ರಾಷ್ಟ್ರದ ಅಭಿವೃದ್ಧಿ. ಸ್ವಾತಂತ್ರ್ಯದ ಬಳಿಕ ಪಂಡಿತ್‌ ದೀನ ದಯಾಳ್‌ ಉಪಾಧ್ಯಾಯ ಅವರು ಅಂತ್ಯೋದಯದ ಪರಿಕಲ್ಪನೆ ನೀಡಿದರು. ಸ್ವತ್ಛತೆಯಲ್ಲಿ ರಾಜ್ಯದಲ್ಲಿ ಹಾಗೂ ದೇಶದಲ್ಲಿ ಮಂಗಳೂರು ಪ್ರಥಮ ಸ್ಥಾನ ಬರುವಂತಾಗಲಿ ಎಂದರು.

ಇಡೀ ರಾಜ್ಯವನ್ನು ಬಯಲು ಶೌಚ ಮುಕ್ತ ರಾಜ್ಯವನ್ನಾಗಿಸುವ ಯೋಜನೆ ಸರಕಾರದ ಮುಂದಿದೆ. ಸ್ವತ್ಛ ಭಾರತದ ಪರಿಕಲ್ಪನೆಯೊಂದಿಗೆ ಬಯಲು ಮಲ ವಿಸರ್ಜನೆಯಿಂದಾಗುವ ತೊಂದರೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ ಎಂದು ವಿಧಾನ ಪರಿಷತ್‌ನ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹೇಳಿದರು.

ಪಾಲಿಕೆ ಆಯುಕ್ತ ಮಹಮ್ಮದ್‌ ನಝೀರ್‌ ಪ್ರಸ್ತಾವನೆಗೈದು ಸ್ವಾಗತಿಸಿದರು. ಉಪಮೇಯರ್‌ ಸಮಿತ್ರಾ ಕರಿಯ ಪಾಲಿಕೆ ಸಚೇತಕ ಶಶಿಧರ್‌ ಹೆಗ್ಡೆ,ಮನಪಾ ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಕವಿತಾ ಸನಿಲ್ ಕಾರ್ಪೋರೇಟರ್‌ಗಳು, ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು. ಆರೋಗ್ಯಾಧಿಕಾರಿ ಮಧು ಕಾರ್ಯಕ್ರಮ ನಿರೂಪಿಸಿದರು.

ಈ ಪ್ರಮಾಣ ಪತ್ರವನ್ನು ನೀಡಲಾದ ದಿನಾಂಕದಿಂದ (ಅಂದರೆ ಇಂದಿನಿಂದ) ಆರು ತಿಂಗಳ ಕಾಲ ಇದು ಅರ್ಹವಾಗಿರುತ್ತದೆ. ಬಳಿಕ ಸ್ವಚ್ಛತೆಯ ಮಾನದಂಡಗಳನ್ನು ನಿರ್ವಹಿಸದಿದ್ದಲ್ಲಿ ಪ್ರಮಾಣಪತ್ರ ಅನೂರ್ಜಿತಗೊಳ್ಳಲಿದೆ. ದೇಶದಲ್ಲಿರುವ ಒಂದು ಲಕ್ಷದಿಂದ ಐದು ಲಕ್ಷ ಜನಸಂಖ್ಯೆಯ ನಗರಗಳ ಪೈಕಿ ಮಂಗಳೂರು ನಗರವು ದೇಶದಲ್ಲೇ ಪ್ರಥಮ ಬಯಲು ಶೌಚಾಲಯ ಮುಕ್ತ ನಗರವಾಗಿ ಘೋಷಣೆಗೊಳಪಟ್ಟಿದೆ.

Comments are closed.