ಕರಾವಳಿ

ಕುಂದಾಪುರ ಬಿಜೆಪಿಯಲ್ಲಿ ಮುಂದುವರಿದ ಭಿನ್ನಮತ: ಕ್ಷೇತ್ರ ಸಮಿತಿ ಪುನರ್ ರಚನೆಗೆ ಒತ್ತಾಯ

Pinterest LinkedIn Tumblr

ಕುಂದಾಪುರ: ಕುಂದಾಪುರ ಬಿಜೆಪಿ ಪಾಳಯಲ್ಲಿ ಭಿನ್ನಮತ ದಿನದಿಂದ ದಿನಕ್ಕೆ ಬಿಗುಡಾಯಿಸುತ್ತಿದ್ದು ಜಿಲ್ಲಾ ಹಾಗೂ ರಾಜ್ಯ ನಾಯಕರಿಗೆ ಇದು ತಲೆನೋವಾಗಿ ಪರಿಣಮಿಸಿದೆ. ಮೂಲ ಬಿಜೆಪಿಗರ ಕಡೆಗಣನೆಯಾಗುತ್ತಿದೆ ಹಾಗೂ ಪಕ್ಷ ಸಂಘಟನೆಯಲ್ಲಿ ವ್ಯತ್ಯವಾಗುತ್ತಿದೆ ಎಂಬ ಆರೋಪದಡಿಯಲ್ಲಿ ಮೂಲಬಿಜೆಪಿಗರೆಂದು ಗುರುತಿಸಿಕೊಂಡ ಹಲವು ಮಂದಿ ಒಂದೂವರೆ ತಿಂಗಳ ಅವಧಿಯಲ್ಲಿ ಮೂರು ರಹಸ್ಯ ಸಭೆಗಳನ್ನು ನಡೆಸಿದ್ದು ಸೋಮವಾರ ಸಂಜೆಯೂ ಕುಂದಾಪುರ ಖಾಸಗಿ ಹೋಟೇಲಿನಲ್ಲಿ ಅತೃಪ್ತರ ಸಭೆ ನಡೆದಿದೆ.

kundapura_bjp_sabhe-1 kundapura_bjp_sabhe-3 kundapura_bjp_sabhe-2

ಕುಂದಾಪುರ ಕ್ಷೇತ್ರ ಸಮಿತಿ ಪುನರ್ ರಚನೆ ಹಾಗೂ ಉಡುಪಿ ಜಿಲ್ಲಾ ಪದಾಧಿಕಾರಿಗಳ ಸಮಿತಿ ರಚನೆ ಬಳಿಕ ಕುಂದಾಪುರ ಬಿಜೆಪಿ ಪಾಳಯದಲ್ಲಿ ಅಸಮಾಧಾನ ಬೂದಿ ಮುಚ್ಚಿದ ಕೆಂಡದಂತಾಗಿತ್ತು. ಕಳೆದ ತಿಂಗಳು ಆಗಸ್ಟ್ 20ರಂದು ಕುಂದಾಪುರದ ಖಾಸಗಿ ಹೋಟೇಲಿನಲ್ಲಿ ಮೊದಲ ಬಾರಿಗೆ ಅತೃಪ್ತ ಮೂಲಬಿಜೆಪಿಗರ ಸಭೆ ನಡೆದಿತ್ತು. ಪಕ್ಷದಲ್ಲಿ ಸ್ಥಾನ ಮಾನ ನೀಡದ ಬಗ್ಗೆ ಹಾಗೂ ಮೂಲ ಬಿಜೆಪಿಗರನ್ನು ಕ್ಷೇತ್ರ ಸಮಿತಿಗಳ ರಚನೆ ವೇಳೆ ಮೂಲ ಬಿಜೆಪಿಗರನ್ನು ಕಡೆಗಣಿಸಿದ ಬಗ್ಗೆ ಆ ಸಭೆಯಲ್ಲಿ ಭಿನ್ನರ ಅಸಮಾಧಾನ ಸ್ಪೋಟಗೊಂಡಿದ್ದು ಅದಾದ ಬಳಿಕ ಇನ್ನೊಂದು ಸಭೆಯು ನಡೆದಿತ್ತು. ಸೋಮವಾರದಂದು ಮೂರನೇ ಬಾರಿಗೆ ನಡೆದ ಅತೃಪ್ತರ ಸಭೆಯಲ್ಲಿ 150ಕ್ಕೂ ಅಧಿಕ ಮೂಲಬಿಜೆಪಿಗರು ಭಾಗವಹಿಸಿದ್ದು ಅನೇಕ ವಿಚಾರಗಳು ಚರ್ಚೆಗೆ ಬಂದ್ಇದೆ ಎನ್ನಲಾಗುತ್ತಿದೆ.

ಪ್ರಸ್ತುತ ಕುಂದಾಪುರ ಕ್ಷೇತ್ರಾಧ್ಯಕ್ಷರು ಪಕ್ಷಕ್ಕೆ ಸಂಬಂದಪಡದವರ ಮಾತನ್ನು ಕೇಳುತ್ತಿದ್ದು ಅವರಿಗೆ ಯಾವುದೇ ಸ್ವಂತಿಕೆ ಇಲ್ಲ. ಅವರ ಧೋರಣೆಯಿಂದ ಪಕ್ಷದ ಸಂಘಟನೆಯೂ ಅಸಾಧ್ಯವಾಗಿದ್ದು ಪಕ್ಷದ ಶಿಸ್ತಿಗೂ ಧಕ್ಕೆಯಾಗುತ್ತಿದೆ. 1992ನೇ ಇಸವಿಯಿಂದ 1999ರವರೆಗೆ ಎ.ಜಿ. ಕೊಡ್ಗಿಯವರು ಸಂಘಟಿಸಿದ ಪಕ್ಷದ ಮಾದರಿಯಲ್ಲಿಯೇ ಪುನಃ ಪಕ್ಷವನ್ನು ಸಂಘಟಿಸುವ ಗುರಿ ಹೊಂದಲಾಗಿದ್ದು ವ್ಯಕ್ತಿಯಿಂದ ಪಕ್ಷವಲ್ಲ ಎಂಬ ಹೊಸ ಇತಿಹಾಸ ಬರೆಯಲು ಹೊರಟಿದ್ದೇವೆಂದು ಸಭೆಯಲ್ಲಿ ಅತೃಪ್ತರು ಅಭಿಪ್ರಾಯಪಟ್ಟರು. ಪಕ್ಷದ ಬಲವರ್ಧನೆಗಾಗಿ ಈಗಿರುವ ಕ್ಷೇತ್ರ ಸಮಿತಿಯನ್ನು ಪುನರ್ ರಚನೆ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯಿತು. ಮುಖಂಡರಾದ ಕಿಶೋರ್ ಕುಮಾರ್, ರಾಜೇಶ್ ಕಾವೇರಿ, ಐರೋಡಿ ವಿಠ್ಠಲ ಪೂಜಾರಿ, ಬೆಳ್ವೆ ವಸಂತ ಶೆಟ್ಟಿ, ಹಾಲಾಡಿ ಸರ್ವೋತ್ತಮ ಹೆಗ್ಡೆ, ಸುಧಾಮ ತೋಳಾರ್, ಉದಯ ಪೂಜರಿ ಬೆಳ್ವೆ, ಕುಂದಾಪುರ ಪುರಸಭೆ ಸದಸ್ಯರಾದ ರವಿರಾಜ್ ಖಾರ್ವಿ, ಉದಯ ಮೆಂಡನ್, ಸುರೇಶ್ ನಾಯ್ಕ ಮೊದಲಾದವರು ಸಭೆಯಲ್ಲಿ ಇದ್ದರು.

ಇನ್ನು ಕುಂದಾಪುರ ಬಿಜೆಪಿಯಲ್ಲಿ ಯಾವುದೇ ಸಹಮತವಿಲ್ಲ, ಒಡಕು ಉಂಟಾಗಿದೆ ಎಂಬುದು ಈಗ ಗುಟ್ಟಾಗಿಯೇನೂ ಉಳಿದಿಲ್ಲ. ಕಳೆದ ಬಾರಿ ಸಭೆ ಬಳಿಕವೇ ಜಿಲ್ಲಾ ನಾಯಕರು ಮಧ್ಯಪ್ರವೇಶಿಸಿ ಭಿನ್ನಮತ ಶಮನಕ್ಕೆ ಪ್ರಯತ್ನಿಸಿದರಾದರೂ ಕೂಡ ಇದರ ಫಲಿತಾಂಶ ಮಾತ್ರ ಶೂನ್ಯವಾಗಿದೆ. ಪ್ರತಿ ಬಾರಿ ರಹಸ್ಯ ಸಭೆ ನಡೆದಾಗಲೂ ಕೂದ ಅತೃಪ್ತರ ಸಂಖ್ಯೆ ಗಣನೀಯ ಮಟ್ಟದಲ್ಲಿ ಏರುತ್ತಿರುವುದು ಕೂಡ ನಾಯಕರಲ್ಲಿ ಇರಿಸು-ಮುರಿಸನ್ನುಂಟು ಮಾಡುತ್ತಿದೆ. ಒಟ್ಟಿನಲ್ಲಿ ಬಿಜೆಪಿಗರ ಈ ನಡೆ ನಾಯಕರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದು ಯಾವ ಹಂತಕ್ಕೆ ತಲುಪಲಿದೆಯೋ ಎಂಬುದನ್ನು ಕಾದು ನೋಡಬೇಕಿದೆ.

Comments are closed.