
ಮಂಗಳೂರು, ಸೆ.10: ಶ್ರೀನಿವಾಸ ಶಿಕ್ಷಣ ಸಂಸ್ಥೆಯ ವಿರುದ್ಧ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ನೇತೃತ್ವದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಶನಿವಾರ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿ ಠಾಣೆಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಪೊಲೀಸರು ಮತ್ತು ಪ್ರತಿಭಟನಕಾರರ ಮಧ್ಯೆ ನಡೆದ ಸಂಘರ್ಷದಲ್ಲಿ ಗಾಯಗೊಂಡಿರುವ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೇ ಸಂದರ್ಭದಲ್ಲಿ ಘಟನೆಯಲ್ಲಿ ಗಾಯಗೊಂಡ ಮೂವರು ಪೊಲೀಸರು ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

ಕಾಲೇಜು ಆಡಳಿತ ಮಂಡಳಿಯು ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಕಿರುಕುಳ ನೀಡಿದ್ದಾರೆಂಬ ಸುಳ್ಳು ಆರೋಪ ಹೊರಿಸಿ ವಳಚ್ಚಿಲ್ ಪದವಿನ ಶ್ರೀನಿವಾಸ ಶಿಕ್ಷಣ ಸಂಸ್ಥೆಯ ಬಿ ಫಾರ್ಮಾ ವಿಭಾಗದ ಕೆಲ ಅಮಾಯಕ ವಿದ್ಯಾರ್ಥಿಗಳ ಮೇಲೆ ಪ್ರಕರಣ ದಾಖಲಿಸಿರುವುದನ್ನು ವಿರೋಧಿಸಿ ಹಾಗೂ ಬಂಧಿತ ವಿದ್ಯಾರ್ಥಿಗಳು ಬಿಡುವಂತೆ ಒತ್ತಾಯಿಸಿ ಇಂದು ಕೆಲ ವಿದ್ಯಾರ್ಥಿಗಳು ಗ್ರಾಮಾಂತರ ಪೊಲೀಸ್ ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದಾರೆ.
ಈ ಸಂದರ್ಭ ಪ್ರತಿಭಟನೆ ಘರ್ಷಣೆಗೆ ಬದಲಾಗುವ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಪೊಲೀಸರು ಪ್ರತಿಭಟನಕಾರರನ್ನು ಚದುರಿಸಲು ಲಾಠಿ ಬಿಸಿದ್ದಾರೆ. ವೇಳೆ ಪೊಲೀಸರು ನಡೆಸಿದ ಲಾಠಿಚಾರ್ಜಿನಿಂದ ಗಾಯಗೊಂಡಿರುವುದಾಗಿ ಆರೋಪಿಸಿ ಇಬ್ಬರು ವಿದ್ಯಾರ್ಥಿಗಳಾದ ಹಿಫಾಝ್ ಮತ್ತು ಮುಝಮ್ಮಿಲ್ ಎಂಬವರು ನಗರದ ವೆನ್ಲಾಕ್ ಆಸ್ಪತ್ರೆಗೆ ದಾಖಲಾಗಿದ್ದಾರೆ.. ಇದೇ ಸಂದರ್ಭ ಪ್ರತಿಭಟನಕಾರರ ದಾಳಿಯಿಂದ ಹಲ್ಲೆಗೊಳಗಾಗಿರುವುದಾಗಿ ಆರೋಪಿಸಿ ಮೂವರು ಪೊಲೀಸರು ಕೂಡಾ ಆಸ್ಪತ್ರೆಗೆ ದಾಖಲಾಗಿದ್ದಾರೆ.ಎಸ್ಸೈ ಸುಧಾಕರ್, ಕಾನ್‌ಸ್ಟೇಬಲ್ ಗಳಾದ ಚಂದ್ರಶೇಖರ್ ಮತ್ತು ವಿನ್ಸೆಂಟ್ ಆಸ್ಪತ್ರೆಗೆ ದಾಖಲಾಗಿರುವ ಪೊಲೀಸ್ ಸಿಬ್ಬಂದಿಯಾಗಿದ್ದಾರೆ.
Comments are closed.